ಕಮಲನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಿಂದ ಹಳ್ಳಿಗಳಲ್ಲಿರುವ ಕೂಲಿಕಾರರಿಗೆ ಕೆಲಸದಿಂದ ದೊರೆಯುವ ಹಣ ಆರ್ಥಿಕ ಸದೃಢತೆಗೆ ದಾರಿಯಾಗಿದೆ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹಣಂತರಾಯ ಕೌಟಗೆ ಹೇಳಿದರು.
ತೋರ್ಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ನರೇಗಾ ದಿನಾಚರಣೆಯಲ್ಲಿ ಮಾತನಾಡಿ, ನರೇಗಾದಡಿ ಸಾಮುದಾಯಿಕ ಮಾತ್ರವಲ್ಲದೆ ವೈಯಕ್ತಿಕ ಕಾಮಗಾರಿಗೂ ಅವಕಾಶವಿದೆ. ವೈಯಕ್ತಿಕ ಕಾಮಗಾರಿ ದನದ ಶೆಡ್, ಕುರಿಶೆಡ್, ಕೋಳಿಶೆಡ್, ಹಂದಿಶೆಡ್, ತೋಟಗಾರಿಕೆ ಬೆಳೆ, ರೇಷ್ಮೆ ಕೃಷಿಯೊಂದಿಗೆ ಆರ್ಥಿಕವಾಗಿ ಸಬಲರಾಗಿರಿ ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷ ಸುನೀಲ ಶಿಗರೆ ಮಾತನಾಡಿ, ನರೇಗಾ ಯೋಜನೆ ಗ್ರಾಮೀಣ ಭಾಗದ ಕುಟುಂಬಗಳಿಗೆ ವರದಾನವಾಗಿದೆ. ಪ್ರತಿ ಕುಟುಂಬ ೧೦೦ ದಿನದ ಕೂಲಿ ಕೆಲಸ ನಿರ್ವಹಿಸಿ ಸಬಲರಾಗಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ ಚಂದ್ರಕಾಂತ ಕಾಳೆ, ಸದಸ್ಯರಾದ ಮಾದವ ಬೋಸಲೆ, ಪಿಡಿಒ ಮಲ್ಲೇಶ, ತಾಂತ್ರಿಕ ಸಹಾಯಕ ಅರ್ಜುನ, ಕಾರ್ಯದರ್ಶಿ ಸಂಜು, ಡಿಇಒ ರಾಜಕುಮಾರ, ಬಿಲ್ ಕಲೆಕ್ಟರ್ ಸಂಜು, ಕೂಲಿಕಾರರಾದ ರೇಣುಕಾ, ಮೇಹರೂನ್‌ಬಿ, ಪರತಾಬಾಯಿ ಇತರರಿದ್ದರು.
ಕೂಲಿಕಾರರು ಕೇಕ್ ಕತ್ತರಿಸಿ ನರೇಗಾ ದಿವಸ್ ಕೂಲಿಕಾರರ ದಿನವೆಂದು ಖುಷಿಪಟ್ಟರು. ೧೦೦ ದಿನದ ಕೂಲಿ ಕೆಲಸ ನಿರ್ವಹಿಸಿದ ಕುಟುಂಬ ಹಾಗೂ ಕಾಯಕ ಬಂಧುಗಳಿಗೆ ಶಾಲು, ಹೂವಿನ ಹಾರ ಹಾಕುವ ಮೂಲಕ ಕಾಯಕ ಸನ್ಮಾನ ಮಾಡಿ ಗೌರವಿಸಲಾಯಿತು. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಉದ್ಯೋಗ ಚೀಟಿಗಳನ್ನು ವಿತರಿಸಲಾಯಿತು.