ಆರ್ಥಿಕ ಶಿಸ್ತಿಗೆ ತೀರ್ಮಾನ: ಅವಾಸ್ತವಿಕ ಬಜೆಟ್​ಗೆ ಶಾಶ್ವತ ಕಡಿವಾಣಕ್ಕೆ ಪಾಲಿಕೆ ನಿರ್ಧಾರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತಿಬಾರಿ ಏರಿಕೆ ಆಗಿ ಮಂಡನೆ ಆಗುತ್ತಿರುವ ಅವಾಸ್ತವಿಕ ಬಜೆಟ್​ಗೆ ಬ್ರೇಕ್ ಹಾಕಲು ಬಿಬಿಎಂಪಿ ನಿರ್ಧರಿಸಿದೆ. ಆರ್ಥಿಕ ಶಿಸ್ತು ತರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇನ್ನುಮುಂದೆ ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಗಾದೆಯನ್ನು ಪಾಲಿಕೆ ಪಾಲಿಸಬೇಕಾಗಲಿದೆ.

ರಾಜ್ಯ ಸರ್ಕಾರವೇ ತನ್ನ ಆದಾಯ ಮಿತಿಯನ್ನು ನೋಡಿಕೊಂಡು ಬಜೆಟ್ ಮಂಡಿಸುತ್ತಿರುವಾಗ ಪಾಲಿಕೆಯಲ್ಲಿ ಬೇಕಾಬಿಟ್ಟಿಯಾಗಿ ಬಜೆಟ್ ಮಂಡನೆ ಆಗುತಿತ್ತು. ಇದಕ್ಕೆ ಕತ್ತರಿ ಹಾಕಿ ಆರ್ಥಿಕ ಶಿಸ್ತು ತರಲು ಪಾಲಿಕೆ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದು, ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ಅಧಿನಿಯಮ-2003 ಕಾಯ್ದೆಯನ್ನು ಪಾಲಿಕೆಯಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಪಾಲಿಕೆಗೆ ಸರ್ಕಾರ ಸೂಚಿಸಿದೆ.

ಪಾಲಿಕೆಯಲ್ಲಿ ಆದಾಯಕ್ಕಿಂತೆ ಖರ್ಚು ಹೆಚ್ಚಾಗುತ್ತಿದ್ದು, ಪಾಲಿಕೆಗೆ ಇದು ಸಾಕಷ್ಟು ಹೊಡೆತ ಕೊಡುತ್ತಿದೆ. ತನ್ನ ಆರ್ಥಿಕ ಹೊರೆಯನ್ನು ತಗ್ಗಿಸಲು ಕಾಯ್ದೆ ಮೂಲಕ ಶಿಸ್ತು ಜಾರಿಗೆ ತರವುದು ಅಗತ್ಯ ಎಂಬುದು ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅಭಿಪ್ರಾಯವಾಗಿದೆ. ರಾಜ್ಯದ ಇತರ ಸ್ಥಳೀಯ ಪ್ರಾಧಿಕಾರಗಳಲ್ಲಿರುವ ನಿಯಮಕ್ಕೆ ಬಿಬಿಎಂಪಿಯನ್ನೂ ಒಳಪಡಿಸುವಂತೆ ಕೋರಿದ್ದಾರೆ.

ಗುತ್ತಿಗೆದಾರರಿಗೆ ಸಾವಿರಾರು ಕೋಟಿ ಬಾಕಿ: ಬಿಬಿಎಂಪಿಯಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಒಟ್ಟು 15,428.67 ಕೋಟಿ ರೂ. ಮೊತ್ತವನ್ನು ಪಾವತಿಸಬೇಕಿದೆ. ಈ ಪೈಕಿ ಫೆಬ್ರವರಿಯ 2018ಕ್ಕೆ ಪೂರ್ಣಗೊಂಡಂತೆ 1,337 ಕೋಟಿ ರೂ. ಬಾಕಿಯಿದೆ. 7221,18 ಕೋಟಿ ರೂ.ಗಳ ಮುಂದುವರಿದ ಕಾಮಗಾರಿಗಳಿದ್ದು, 124.10 ಕೋಟಿ ರೂ.ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ.

1502.49 ಕೋಟಿ ರೂ. ಮೊತ್ತದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಕಾಮಗಾರಿ ಸಂಖ್ಯೆ ನೀಡಲಾಗಿದೆ. 1836.63 ಕೋಟಿ ರೂ. ಮೊತ್ತದ ಕಾಮಗಾರಿ ಸಂಖ್ಯೆಯನ್ನು ನೀಡಲಾಗಿದ್ದು, ಟೆಂಡರ್ ಕರೆಯುವುದು ಬಾಕಿಯಿದೆ. 3407.27 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದ್ದು, ಕಾಮಗಾರಿ ಸಂಖ್ಯೆಯನ್ನು ನೀಡಬೇಕಿದೆ.

ಭಾರತೀಯ ಸ್ಟೇಟ್ ಬ್ಯಾಂಕ್​ಗೆ 652.43 ಕೋಟಿ ರೂ. ಹಾಗೂ ಕೆಯುಐಡಿಎಫ್​ನಿಂದ 54.30 ಕೋಟಿ ರೂ. ಸೇರಿ ಒಟ್ಟು 706.73 ಕೋಟಿ ರೂ.ಗಳ ಸಾಲ ಮಾಡಿದೆ ಎಂದು ಆಯುಕ್ತರು ಉಲ್ಲೇಖಿಸಿದ್ದಾರೆ. 2011-12ನೇ ಸಾಲಿನಿಂದ 2017- 18 ಸಾಲಿನವರೆಗೆ ಒಟ್ಟು 23502.31 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಜಾಬ್ ಕೋಡ್ ನೀಡಿರುವುದಾಗಿ ಹೇಳಿದ್ದಾರೆ.

ಬಾಕಿ ಬಿಲ್​ಗಳ ಅಂತರ ಹೆಚ್ಚುತ್ತಿದ್ದು, ಪಾಲಿಕೆಗೆ ಹೊರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಹೊಣೆಗಾರಿಕೆ ಕಾಯ್ದೆಯನ್ನು ಜಾರಿಗೊಳಿಸುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಇದಕ್ಕೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಮರಳಿ ಪತ್ರ ಬರೆದಿದ್ದು, ಬಿಬಿಎಂಪಿಗೆ ಆರ್ಥಿಕ ಹೊಣೆಗಾರಿಕೆ ಕಾಯ್ದೆ ಅನ್ವಯಗೊಳ್ಳುವಂತೆ ಕರಡು ನಿಯಮಗಳನ್ನು ರಚಿಸಿ ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ಆರ್ಥಿಕ ಹೊರೆಯಲ್ಲಿ ಬಿಬಿಎಂಪಿ

ಬಿಬಿಎಂಪಿಯಲ್ಲಿ ಈ ಸಾಲಿನಲ್ಲೂ 13 ಸಾವಿರ ಕೋಟಿ ರೂ. ಬಜೆಟ್ ಮಂಡಿಸಲಾಗಿತ್ತು. ಆದರೆ ಆದಾಯಕ್ಕಿಂತ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅದನ್ನು 9,500 ಕೋಟಿ ರೂ.ಗಳಿಗೆ ಇಳಿಸುವಂತೆ ಆಯುಕ್ತರು ಅಂದೇ ಪತ್ರವನ್ನೂ ಬರೆದಿದ್ದರು.

ಬಜೆಟ್ ಮಂಡನೆ ವೇಳೆ ವಾಸ್ತವಿಕ ಆದಾಯ ಸ್ವೀಕೃತಿಗಳನ್ನು ಪರಿಗಣಿಸದೇ, ಪ್ರತಿ ವರ್ಷ ಅನುಮೋದನೆ ಆಗುತ್ತಿದೆ. ಸರ್ಕಾರ ಆಯವ್ಯಯ ತಯಾರಿಕೆಯಲ್ಲಿ ಪಾಲಿಸುತ್ತಿರುವ ಶಿಸ್ತನ್ನು ಪಾಲಿಕೆ ಬಜೆಟ್​ನ ಸ್ವೀಕೃತಿಗೆ ಅನುಗುಣವಾಗಿ ವೆಚ್ಚಗಳಿಗೆ ಅವಕಾಶ ಕಲ್ಪಿಸಿಕೊಳ್ಳುವಂತೆ ಮಾಡಲು ನಿಯಮ ಜಾರಿಗೆ ತರುವುದು ಅವಶ್ಯಕವಾಗಿದೆ ಎಂದು ಕೋರಿದ್ದಾರೆ.

2010-11ರಲ್ಲಿ ಆಯವ್ಯಯದ ಮೇಲೆ ಶೇ. 37 ಪ್ರಗತಿ ಸಾಧಿಸಿದ್ದ ಪಾಲಿಕೆ 2011-12ರಲ್ಲಿ ಶೇ.43, 2012-13ರಲ್ಲಿ ಶೇ. 39, 2013-14 ಶೇ. 36, 2014-15ರಲ್ಲಿ ಶೇ.70, 2015-16ರಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ ಶೇ.97, 2016-17 ಶೇ.70, 2017-18 ಹಾಗೂ 2018-19ರಲ್ಲಿ ಶೇ.73 ಬಜೆಟ್ ಮೇಲೆ ಸಾಧಿಸಿರುವ ಪ್ರಗತಿ ಆಗಿದೆ.

Leave a Reply

Your email address will not be published. Required fields are marked *