ಆರ್ಥಿಕ ಮೀಸಲಾತಿಗೆ ವಿರೋಧ

ಮೂಡಿಗೆರೆ: ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಅಂಗೀಕರಿಸಿರುವ ಮೇಲ್ಜಾತಿ ಬಡವರಿಗಾಗಿ ಶೇ.10ರಷ್ಟು ಆರ್ಥಿಕ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕದೆ ತಿರಸ್ಕರಿಸಬೇಕು ಎಂದು ಆಗ್ರಹಿಸಿ ಸಿಪಿಐಎಂಎಲ್ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಬಿಜೆಪಿ ಮತ್ತೊಂದು ಬಾರಿ ಗದ್ದುಗೆ ಹಿಡಿಯಲು ಹೊರಟಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಮನಾಮ ಜಪಿಸುತ್ತಿದೆ. ಒಂದು ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಜನಲೋಕಪಾಲ್ ಕಾಯ್ದೆ ಅನುಷ್ಠಾನವಾಗಲಿಲ್ಲ. ವಿದೇಶದಿಂದ ಕಪ್ಪು ಹಣ ತರಲಿಲ್ಲ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಣ ಹಾಕಲಿಲ್ಲ. ಈಗ ಜನರ ಗಮನ ರಾಮ ಮಂದಿರ ಹಾಗೂ ಆರ್ಥಿಕ ಮೀಸಲಾತಿ ಕಡೆ ಸೆಳೆಯಲು ಕುತಂತ್ರ ನಡೆಸಿದೆ ಎಂದು ಆರೋಪಿಸಿದರು.

ಸ್ವಾತಂತ್ರ್ಯ ಬಂದ ನಂತರ ಏಳು ದಶಕಗಳಲ್ಲಿ ನಿಗದಿತ ಪ್ರಮಾಣದ ಮೀಸಲಾತಿ ಜಾರಿಯಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ದಲಿತರು, ದುರ್ಬಲರ ಮೇಲೆ ಇಂದಿಗೂ ದೌರ್ಜನ್ಯಗಳು ನಡೆಯುತ್ತಿವೆ. ಹಾಗಾಗಿ ಆರ್ಥಿಕ ಮೀಸಲಾತಿ ಮಸೂದೆಗೆ ಅಂಕಿತ ಹಾಕಬಾರದು ಎಂದು ಆಗ್ರಹಿಸಿದರು.

ಸಿಪಿಐಎಂಎಲ್ ತಾಲೂಕು ಕಾರ್ಯದರ್ಶಿ ನಾರಾಯಣ, ಮುಖಂಡರಾದ ಶೇಖರ್, ಕೃಷ್ಣ ಮಗ್ಗಲಮಕ್ಕಿ, ರಾಜೇಶ್, ಲೋಕೇಶ್, ಬಿ.ಕೃಷ್ಣ, ಶಿವಪ್ಪ, ರಮೇಶ ಇದ್ದರು.

Leave a Reply

Your email address will not be published. Required fields are marked *