ಮೈಸೂರು: ವೈದ್ಯರು ಹಾಗೂ ದಾದಿಯರು ಒಂದು ಆಸ್ಪತ್ರೆಯ ಎರಡು ಕಂಬಗಳು ಅಥವಾ ಎತ್ತಿನ ಗಾಡಿಯ ಎರಡು ಚಕ್ರಗಳಿದ್ದಂತೆ ಎಂದು ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ ಹಿರಿಯ ಸಲಹೆಗಾರ, ಸರ್ಜಿಕಲ್ ಆಂಕೊಲಾಜಿಸ್ಟ್ ಮತ್ತು ರೋಬಾಟಿಕ್ ಸರ್ಜನ್ ಡಾ.ಎಂ. ವಿಜಯ್‌ಕುಮಾರ್ ಹೇಳಿದರು.

ನಗರದ ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದಾದಿಯರಿಲ್ಲದೇ ಆಸ್ಪತ್ರೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ದಾದಿಯರು ಎಲ್ಲ ರೀತಿಯ ಆರೋಗ್ಯ ಸೇವೆಗಳ ಬೆನ್ನೆಲುಬಾಗಿದ್ದಾರೆ. ನಿರಂತರ ರೋಗಿಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಅಂತಃಕರಣದಿಂದ ರೋಗಿಗಳ ಆರೈಕೆ ಮಾಡುತ್ತಾರೆ ಎಂದರು.
ಗೋಪಾಲಗೌಡ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಸ್.ಶಶಿಧರ ಮಾತನಾಡಿ, ದಾದಿಯರ ಕೆಲಸವೂ ಪ್ರೀತಿ ಮತ್ತು ಸಹಾನುಭೂತಿಯನ್ನು ಬಯಸುವ ವೃತ್ತಿಯಾಗಿದೆ. ದಾದಿಯರು ತಮ್ಮ ಸೇವಾ ಸಮಯದ ಉದ್ದಕ್ಕೂ ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಒಡನಾಟ ಹೊಂದಿರುತ್ತಾರೆ.
ರೋಗಿಯೊಬ್ಬರು ಆಸ್ಪತ್ರೆಗೆ ದಾಖಲಾಗುವುದರಿಂದ ಹಿಡಿದು ಅವರು ಕಾಯಿಲೆಯನ್ನು ಗುಣಪಡಿಸಿಕೊಂಡು ಹೊರ ಹೋಗುವವರೆಗೂ ದಾದಿಯರೇ ಎಲ್ಲವನ್ನು ಗಮನಿಸುತ್ತಾರೆ. ರೋಗಿಗಳ ಅಸ್ವಸ್ಥತೆಯನ್ನು ಗುರುತಿಸುವುದು, ತಕ್ಷಣ ಪ್ರತಿಕ್ರಿಯಿಸುವ ಮೂಲಕ ಕಾಯಿಲೆಯನ್ನು ಗುಣಪಡಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ದಾದಿಯರ ಇಂತಹ ನಡವಳಿಕೆ ಹಾಗೂ ಆರೈಕೆಯಿಂದಾಗಿ ರೋಗಿಗಳು ಬಹಳ ಬೇಗನೆ ಚೇತರಿಕೆ ಕಂಡುಕೊಳ್ಳುತ್ತಾರೆ ಎಂದರು.
ಹೋಲಡ್ಸ್ ವರ್ತ್ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಪಿ.ದಾಕ್ಷಾಯಣಿ ಮಾತನಾಡಿ, ಆರೋಗ್ಯ ಸಂಸ್ಥೆಗಳ ಸಂಪೂರ್ಣ ಗುಣಮಟ್ಟವು ದಾದಿಯರು-ಶುಶ್ರೂಷಕರು ರೋಗಿಗಳನ್ನು ಹೇಗೆ ಆರೈಕೆ ಮಾಡುತ್ತಾರೆ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ.
ಉತ್ತಮ ಗುಣಮಟ್ಟದಿಂದ ಆರೈಕೆ ಮಾಡಿದರೆ ಸಂಸ್ಥೆಗಳು ಚೆನ್ನಾಗಿ ಕಾರ್ಯನಿರ್ವಹಿಸಲು ಸಾಧ್ಯ. ಆದ್ದರಿಂದಲೇ ದಾದಿಯರು ಆರೋಗ್ಯ ವ್ಯವಸ್ಥೆಯ ನಿಜವಾದ ಆಧಾರಸ್ತಂಭಗಳು. ಸುಸ್ಥಿರ ಆರೋಗ್ಯ ಆರ್ಥಿಕತೆಯನ್ನು ನಿರ್ಮಿಸಲು ದಾದಿಯರ ಸೇವೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಲವು ದಾದಿಯರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಎಸ್.ಎನ್.ದಾಮಿನಿ ಅವರಿಗೆ ಹಾರ್ಟ್ ಆಫ್ ಕಮ್ಯುನಿಸಿಟಿ, ಗೀತಾ ಮತ್ತು ಮಾದಲಾಂಬಿಕಾ ಅವರಿಗೆ ಕ್ಲಿನಿಕಲ್ ಎಕ್ಸ್‌ಲೆನ್ಸ್, ಜೀವರೇಖಾ ಅವರಿಗೆ ವರ್ಷದ ಮಾರ್ಗದರ್ಶಕ, ಪಾಪಣ್ಣ ಅವರಿಗೆ ಟೀಮ್ ಪ್ಲೇಯರ್, ರಿಮಾ ಮೊಂಡಲ್ ಅವರಿಗೆ ರೈಸಿಂಗ್ ಸ್ಟಾರ್, ಎಂ.ಶ್ವೇತಾ ಅವರಿಗೆ ದಿ ಎಕ್ಸಲೆನ್ಸ್ ಇನ್ ಪೆಂಷೆಟ್ ಕಮ್ಯೂನಿಕೇಷನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಬಿಎಚ್‌ಐಒ ನರ್ಸಿಂಗ್ ಸೂಪರಿಂಟೆಂಡೆಂಟ್ ಪಿ.ಎಸ್.ಪ್ರೇಮಾ, ಸೇಂಟ್ ಜೋಸೆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಿ.ಜಿ.ಮಮತಾ, ಬಿಎಚ್‌ಐಒ ಸಿಒಒ ಗೌತಮ್ ಧಮೆರ್ಲಾ, ಹಣಕಾಸು ಅಧಿಕಾರಿ ರತ್ನಮ್ಮಾ ಮತ್ತಿತರರು ಹಾಜರಿದ್ದರು.
ಬಳಿಕ ದಾದಿಯರು ಹಾಡು-ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು.