ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ

ಪರಶುರಾಮಪುರ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಟಿಎಚ್‌ಒ ಡಾ.ಪ್ರೇಮಸುಧಾ, ಪ್ರಭಾರ ವೈದ್ಯಾಧಿಕಾರಿ ಡಾ.ಶ್ರೀನಿವಾಸ ಸೋಮವಾರ ಭೇಟಿ ನೀಡಿ, ವೈದ್ಯರು, ಸಿಬ್ಬಂದಿ ಜತೆ ಸಮಾಲೋಚನೆ ಸಭೆ ನಡೆಸಿದರು.

ವೈದ್ಯರ ಅಲಭ್ಯತೆಯಿಂದ ರೋಗಿಗಳ ಸಂಕಷ್ಟ ಕುರಿತು ಸೋಮವಾರದ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ, ಎಚ್ಚೆತ್ತ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಧೀರ್ಘ ಸಮಾಲೋಚನೆ ನಡೆಸಿದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪ್ರೇಮಸುಧಾ, ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹಾಜರಾಗಿ ಚಿಕ್ಸಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಂದಿನಿಂದ ಡಾ.ರಮೇಶ, ಡಾ.ಶ್ರೀಧರ ಅವರನ್ನು ನಿಯೋಜಿಸಲಾಗುವುದು. ಸರತಿಯಂತೆ ಇವರಿಬ್ಬರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ಮಹಿಳಾ ವೈದ್ಯೆ ಸರಸ್ವತಿ ನಿಯಮಿತವಾಗಿ ಭೇಟಿ ನೀಡಿ ಗರ್ಭಿಣಿ, ಬಾಣಂತಿಯರ ಆರೋಗ್ಯ ತಪಾಸಣೆ ನಡೆಸುವರು. ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀವಾಸ ಆರೋಗ್ಯ ಸೇವೆ ವ್ಯವಸ್ಥೆಗೊಳಿಸುವರು ಎಂದು ಮಾಹಿತಿ ನೀಡಿದರು.

ಸಿಎಚ್‌ಸಿನಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಅಕ್ಕಪಕ್ಕದ ಅಂಗಡಿ, ಹೋಟೆಲ್‌ಗಳಿಂದ ನೀರು ಕೇಳಿ ಪಡೆಯಬೇಕಾಗಿದೆ. ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಿಬ್ಬಂದಿ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕೊಳವೆಬಾವಿ ಕೊರೆಸುವುದಾಗಿ ಟಿಎಚ್‌ಒ ಪ್ರತಿಕ್ರಿಯಿಸಿದರು.

ನಿಯೋಜಿತ ವೈದ್ಯರಾದ ಡಾ.ರಮೇಶ, ಡಾ.ಸರಸ್ವತಿ ಡಾ.ಶ್ರೀಧರ, ಸಿಎಚ್‌ಸಿ ಸಿಬ್ಬಂದಿ ಇದ್ದರು.