ಇಂಡಿ: ಉತ್ತಮವಾದ ಆಹಾರ ಸೇವನೆಯಿಂದ ಮಾತ್ರ ಆರೋಗ್ಯವಂತರಾಗಲು ಸಾಧ್ಯ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಅರ್ಚನಾ ಕುಲಕರ್ಣಿ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂಬಾಕು, ಗುಟಕಾ ಹಾಗೂ ಸಿಗರೇಟು-ಬೀಡಿ ಸೇವನೆಯಿಂದ ಜೀವಕ್ಕೆ ಬಹಳಷ್ಟು ಕುತ್ತು ಬರಲಿದೆ. ಶ್ವಾಸಕೋಶದ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಬಾಯಿ- ರಕ್ತನಾಳಕ್ಕೆ ಹಾನಿ, ಕುತ್ತಿಗೆ ಮತ್ತು ಶಿರದ ಕ್ಯಾನ್ಸರ್, ಗಂಟಲು ಧ್ವನಿ ಪೆಟ್ಟಿಗೆ, ಮೆದುಳು, ಅನ್ನನಾಳ, ಪಿತ್ತಕೋಶ, ಮೂತ್ರಪಿಂಡ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಮಹಿಳೆಯರಲ್ಲಿ ಮೇಲಿಂದ ಮೇಲೆ ಗರ್ಭಪಾತ ಮತ್ತು ನಿರ್ಜೀವ ಜನನ ಆಗುತ್ತವೆ. ವೈದ್ಯರಲ್ಲಿ ಆಪ್ತ ಸಮಾಲೋಚನೆ ಮೂಲಕ ತಂಬಾಕು ಸೇವನೆಯಿಂದ ದೂರವಾಗಬಹುದು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ, ಪ್ರವೀಣ ಸೋನಾರ, ನಜೀರ ಮುಲ್ಲಾ, ಎಲ್.ಎಸ್.ಸೋಮ ನಾಯಕ, ಎಂ.ಎಚ್. ಬಗಲಿ, ಬಿ.ಎಸ್. ಪಾಟೀಲ, ವಿಶ್ವನಾಥ ತೆನಿಹಳ್ಳಿ, ಕಿರಣಕುಮಾರ ನಾಯಕ, ಭೀಮರಾಯ ನಾವಿ, ದೀಪಾ ಹೂಗಾರ ಇತರರಿದ್ದರು.