ಹಾಸನ: ಮನುಷ್ಯ ಎಷ್ಟೇ ಶ್ರೀಮಂತನಾದರೂ ಆರೋಗ್ಯ ಬಹಳ ಮುಖ್ಯ. ಆರೋಗ್ಯ ಇಲ್ಲದಿದ್ದರೆ ಶ್ರೀಮಂತಿಕೆ ವ್ಯರ್ಥ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಸ್ವಾಮಿ ಹೇಳಿದರು.
ನಗರದ ಮಿಲ್ಲತ್ ಬೈತುಲ್‌ಮಾಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕೂನ್ ಗುನ್ಯಾ, ಮಲೇರಿಯಾ, ಡೆಂೆ ಸೇರಿ ಹಲವು ಕಾಯಿಲೆಗಳು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದ ಪರಿಣಾಮ ಹರಡುತ್ತವೆ. ನಮ್ಮ ಸುತ್ತಮುತ್ತಲಿನ ನೈರ್ಮಲ್ಯ ಕಾಪಾಡಿಕೊಳ್ಳದಿದ್ದರೆ ನಾನಾ ರೋಗಗಳು ಹರಡಲಿವೆ. ವಾತಾವರಣ ಶುಚಿಯಾಗಿದ್ದರೆ ಆರೋಗ್ಯವಾಗಿರಬಹುದು. ಮನೆ ಬಳಿ ಖಾಲಿ ಜಾಗವಿದ್ದರೆ ಕೈ ತೋಟ ನಿರ್ಮಾಣ ಮಾಡಿಕೊಳ್ಳುವುದರಿಂದ ಉತ್ತಮ ಗಾಳಿ ಲಭಿಸುತ್ತದೆ. ಇದರಿಂದ ಪರಿಸರವನ್ನು ಸ್ವಚ್ಛ, ಸುಂದರವಾಗಿ ಇಟ್ಟುಕೊಳ್ಳಬಹುದು. ಇದರೊಂದಿಗೆ ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯವಾಗಿದೆ ಎಂದು ಸಲಹೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಚ್.ಪಿ. ಮೋಹನ್ ಮಾತನಾಡಿ, ಪರಿಸರ ಮಾಲಿನ್ಯ ಕಡಿಮೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಪರಿಸರ ಮಾಲಿನ್ಯದ ನಡುವೆ ಜೀವನ ಮಾಡುವ ಪರಿಸ್ಥಿತಿ ಬರಬಹುದು. ಆದ್ದರಿಂದಲೇ ಈಗಿನಿಂದಲೇ ಪರಿಸರ ಮಾಲಿನ್ಯ ತಡೆಗಟ್ಟಿದರೆ ಉತ್ತಮ ಬದುಕು ಸಾಗಿಸಬಹುದು. ಅದೇ ರೀತಿ ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯವಾಗಿದ್ದು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಟೂತ್‌ಪೇಸ್ಟ್, ಬ್ರಷ್, ಸೋಪು, ಸ್ಯಾನಿಟರಿ ಕಿಟ್, ಬಟ್ಟೆ ಸೋಪು ಒಳಗೊಂಡ ಆರೋಗ್ಯ ಕಿಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಿಲ್ಲತ್ ಬೈತುಲ್‌ಮಾಲ್ ಚಾರಿಟಬಲ್ ಟ್ರಸ್ಟ್‌ನ ಇರ್ಫಾನ್, ಸಫಿ, ಅಮ್ಜಾದ್ ಖಾನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಶಬೀರ್, ನಿರ್ದೇಶಕರಾದ ಕುಮಾರ್, ಪರಿಸರವಾದಿ ಸುಬ್ಬಸ್ವಾಮಿ ಇದ್ದರು.