ಆರೋಗ್ಯ ಕೇಂದ್ರದಲ್ಲಿ ನೀರಿಗೂ ತತ್ವಾರ

ಗುತ್ತಲ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೀರಿಗೂ ತತ್ವಾರ ಉಂಟಾಗಿದೆ. ಇದರಿಂದ ರೋಗಿಗಳು ಹಾಗೂ ಸಿಬ್ಬಂದಿ ಪರದಾಡುವಂತಾಗಿದೆ.

ಆರೋಗ್ಯ ಕೇಂದ್ರದ ಆವರಣದಲ್ಲಿನ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಕಳೆದ 4 ದಿನಗಳಿಂದ ಸಮಸ್ಯೆ ಎದುರಾಗಿದ್ದು, ಮೋಟರ್ ಆಳಕ್ಕೆ ಇಳಿಸುವ ಕಾರ್ಯ ಆಗಿಲ್ಲ. ಹೀಗಾಗಿ ನೀರಿನ ಅಭಾವ ಎದುರಾಗಿದ್ದು, ಶೌಚಗೃಹಗಳಿಗೂ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ರೋಗಿಗಳು, ಆಸ್ಪತ್ರೆಗೆ ಆಗಮಿಸುವ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆರೋಗ್ಯ ಕೇಂದ್ರದ ಆವರಣದಲ್ಲಿರುವ ಸಿಬ್ಬಂದಿ ಮನೆಗಳಿಗೂ ನೀರಿಲ್ಲದೆ ಇತರ ಬೋರ್​ವೆಲ್ ಆಶ್ರಯಿಸುವಂತಾಗಿದೆ.

ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿನದ 24 ಗಂಟೆಗಳ ಕಾಲ ನೀರು ಅಗತ್ಯವಾಗಿ ಬೇಕಿರುವ ಕಾರಣ ಇಲ್ಲಿ ದೊಡ್ಡದಾದ ನೀರಿನ ಟ್ಯಾಂಕ್ ನಿರ್ವಿುಸಬೇಕಿದೆ. ಮೋಟರ್ ಕೆಟ್ಟರೆ ಅದು ರಿಪೇರಿ ಆಗುವವರೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.

ಗುತ್ತಲ ಹೋಬಳಿ ಸೇರಿ ನೆರೆಯ ಗದಗ, ಬಳ್ಳಾರಿ ಜಿಲ್ಲೆ ಹಾಗೂ ರಾಣೆಬೆನ್ನೂರ ತಾಲೂಕಿನ ನೂರಾರು ರೋಗಿಗಳು ನಿತ್ಯವೂ ಕೇಂದ್ರಕ್ಕೆ ಆಗಮಿಸುತ್ತಾರೆ. ಆದಷ್ಟು ಬೇಗ ವೈದ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಅಂರ್ತಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಯಲ್ಲಿ ಮೋಟರ್​ಗೆ ನೀರು ಸಿಗುತ್ತಿಲ್ಲ ಎಂದು ಮೋಟರ್ ರಿಪೇರಿ ಮಾಡುವವರು ತಿಳಿಸಿದ್ದಾರೆ. ಆದಷ್ಟು ಬೇಗ ಪೈಪ್ ಅಳವಡಿಸಿ ನೀರೆತ್ತುವಂತೆ ಸೂಚನೆ ನೀಡಿರುವೆ. ಸದ್ಯ ಜನರಿಗೆ ತೊಂದರೆಯಾಗದಂತೆ ಆಸ್ಪತ್ರೆಯಲ್ಲಿ ಸಣ್ಣದೊಂದು ನೀರಿನ ಟ್ಯಾಂಕ್ ಇಟ್ಟು ನೀರು ತುಂಬಿಸಲಾಗಿದೆ.
| ಡಾ. ಅಭಿನಂದನ ಸಾಹುಕಾರ ಆಡಳಿತಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ, ಗುತ್ತಲ

Leave a Reply

Your email address will not be published. Required fields are marked *