ಆರೋಗ್ಯ ಇಲಾಖೆಗೆ ನೋಟಿಸ್

ಬೆಂಗಳೂರು: ‘ಆರೋಗ್ಯ ಕವಚ-108’ ಮೂಲಕ ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸುವ ನಿಟ್ಟಿನಲ್ಲಿ ‘ದಿ ಎಮರ್ಜನ್ಸಿ ಮ್ಯಾನೇಜ್​ವೆುಂಟ್ ಆಂಡ್ ರಿಸರ್ಚ್ ಇನ್​ಸ್ಟಿಟ್ಯೂಟ್ (ಇಎಂಆರ್​ಐ) ಸಂಸ್ಥೆಯು ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆಯಾಗಿದೆ.

ಹಾವೇರಿ ಜಿಲ್ಲೆಯ ಮಾರುತಿ ಬಣಕಾರ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕ್ ಹಾಗೂ ನ್ಯಾ.ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಪೀಠ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಇಎಂಆರ್​ಐ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜು.25ಕ್ಕೆ ಮಂದೂಡಿತು.

ಇಎಂಆರ್​ಐ ಸಂಸ್ಥೆಯೊಂದಿಗಿನ ಒಪ್ಪಂದ 2018ರ ಆ.14ಕ್ಕೆ ಮುಗಿದಿದ್ದು, ಹೊಸದಾಗಿ ಟೆಂಡರ್ ಕರೆದಿಲ್ಲ. ಅಲ್ಲದೆ 2018ರ ಡಿಸೆಂಬರ್​ನಲ್ಲಿ ಇಎಂಆರ್​ಐ ಸಂಸ್ಥೆಯು 371 ಹೊಸ ಆಂಬುಲೆನ್ಸ್ ಖರೀದಿ ಮಾಡಿದೆ. ಈ ಖರೀದಿ ಏಕೆ ಮಾಡಲಾಯಿತು ಅನ್ನುವುದು ಸ್ಪಷ್ಟವಾಗಿಲ್ಲ. ಸರ್ಕಾರದ ಮಾಹಿತಿ ಪ್ರಕಾರ ಸದ್ಯ ರಾಜ್ಯದಲ್ಲಿ 888 ಆಂಬುಲೆನ್ಸ್​ಗಳು (108-ಆರೋಗ್ಯ ಕವಚ) ಕಾರ್ಯಾಚರಿಸುತ್ತಿವೆ. ಆದರೆ, ತುರ್ತು ಸೇವೆಗಳಿಗೆ ಮಾತ್ರ ಲಭ್ಯವಾಗುತ್ತಿಲ್ಲ. ಆದ್ದರಿಂದ ಒಡಂಬಡಿಕೆ ಷರತ್ತುಗಳ ಉಲ್ಲಂಘನೆ ಸೇರಿ, ಹಲವು ವಿಚಾರಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸುವಂತೆ ‘ಸ್ವತಂತ್ರ ತನಿಖಾ ಸಮಿತಿ’ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿಯಲ್ಲೇನಿದೆ?: ‘ಆರೋಗ್ಯ ಕವಚ-108’ ಸೇವೆಗೆ ಸರ್ಕಾರ ಹಾಗೂ ಇಎಂಆರ್​ಐ ನಡುವೆ 2008ರ ಆ.14ರಂದು 10 ವರ್ಷಗಳ ಅವಧಿಗೆ ಒಡಂಬಂಡಿಕೆ ಆಗಿತ್ತು. ಒಪ್ಪಂದದ ಶರತ್ತುಗಳಂತೆ ತುರ್ತು ಸೇವೆಗಳನ್ನು ಒದಗಿಸುವಲ್ಲಿ ಇಎಂಆರ್​ಐ ಸಂಸ್ಥೆ ಸಂಪೂರ್ಣ ವಿಫಲವಾಗಿದೆ. ಇದರಿಂದ ನೂರಾರು ಜನ ಪ್ರಾಣ ಕಳೆದು ಕೊಂಡಿದ್ದಾರೆ. ಮೇಲಾಗಿ 2018ರ ಆ.14ಕ್ಕೆ 10 ವರ್ಷದ ಒಡಂಬಡಿಕೆ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ಸೇವೆ ಮುಂದುವರಿಸಲಾಗಿದೆ. ಒಪ್ಪಂದ ನವೀಕರಿಸಿರುವ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ರಾಜ್ಯದಲ್ಲಿ 108 ಸೇವೆ ಆರಂಭವಾದ ಬಳಿಕ 2008ರ ಸೆಪ್ಟ್ಟೆಂಬರ್ ನಿಂದ 2019ರ ಮಾರ್ಚ್​ವರೆಗೆ 2 ಹಂತಗಳಲ್ಲಿ ಒಟ್ಟು 517 ಆಂಬುಲೆನ್ಸ್ ಖರೀದಿಸಲಾಗಿದೆ. ಇದಕ್ಕಾಗಿ ಸರ್ಕಾರ ಇಎಂಆರ್​ಐ ಸಂಸ್ಥೆಗೆ 134.18 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ತಲಾ 15 ಲಕ್ಷ ರೂ.ನಂತೆ 77.55 ಕೋಟಿ ರೂ.ಗಳಲ್ಲಿ 517 ಆಂಬುಲೆನ್ಸ್ ಖರೀದಿ ಮಾಡಿರುವ ಸಂಸ್ಥೆ, 82.18 ಕೋಟಿ ರೂ.ಉಳಿಸಿಕೊಂಡಿದೆ. ಆದರೆ, ಈ ಬಗ್ಗೆ ಸರ್ಕಾರ ಅಥವಾ ಇಎಂಆರ್​ಐ ಸಂಸ್ಥೆಯಿಂದ ಯಾವುದೇ ಲೆಕ್ಕ ತೋರಿಸಲಾಗಿಲ್ಲ ಎಂದು ಆರೋಪಿಸಲಾಗಿದೆ.

Leave a Reply

Your email address will not be published. Required fields are marked *