ಆರೋಗ್ಯಸ್ನೇಹಿ ಪುದಿನ ಎಲೆಗಳು

ಚರ್ಮದ ಆರೋಗ್ಯಕ್ಕೆ ಪುದಿನ ಎಲೆಗಳು ಸಹಕಾರಿ. ಈ ಎಲೆಗಳನ್ನು ರುಬ್ಬಿ ಮುಖಕ್ಕೆ ಪ್ಯಾಕ್ ಮಾಡಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಚರ್ಮದಲ್ಲಿ ತುರಿಕೆ, ಕಿರಿಕಿರಿ ಇದ್ದರೆ ಕಡಿಮೆಯಾಗುತ್ತದೆ. ಜೊತೆಯಲ್ಲಿ ಚರ್ಮವು ಕೆಂಪಗಾಗಿ ತೊಂದರೆಯಾಗಿದ್ದರೂ ಕಡಿಮೆ ಆಗುತ್ತದೆ.

ಪುದಿನವು ವಿಶ್ರಾಂತಿಯನ್ನು ನೀಡಲು ಸಹಾಯ ಮಾಡುವಂತಹ ಗುಣವನ್ನು ಹೊಂದಿದೆ ಎಂಬುದಾಗಿ ಅಮೆರಿಕದ ಸಂಶೋಧನಾ ಕೇಂದ್ರವೊಂದು ಪ್ರಕಟಿಸಿದ ವರದಿಯು ಪ್ರತಿಪಾದಿಸಿದೆ. ಸ್ನಾಯುಗಳು ಇದರ ಪ್ರಯೋಜನ ಪಡೆಯುತ್ತವೆ ಎಂಬುದನ್ನು ಕೂಡ ತಿಳಿಸಿದೆ. ಪುದಿನದಲ್ಲಿ ಮೆಂಥಾಲ್ ಎಂಬ ರಾಸಾಯನಿಕ ಪದಾರ್ಥವಿದ್ದು, ಇದು ಉಸಿರಾಟವನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಶೀತ, ನೆಗಡಿ ಆಗಿದ್ದಲ್ಲಿ ಪುದಿನ ಎಲೆಯನ್ನು ಕುದಿಯುತ್ತಿರುವ ನೀರಿಗೆ ಹಾಕಿ ಅದರ ಹಬೆಯನ್ನು ಉಸಿರಾಡಿಸುವುದರಿಂದ ವಿಶ್ರಾಂತಿ ದೊರೆಯುತ್ತದೆ. ಒತ್ತಡದಿಂದ ತಲೆನೋವು ಬಂದಿದ್ದಲ್ಲಿ ಪುದಿನದ ರಸವನ್ನು ಹಣೆಗೆ ಹಚ್ಚಿಕೊಂಡರೆ ನಿವಾರಣೆಯಾಗುತ್ತದೆ.

ಗರ್ಭಿಣಿಯರಿಗೆ ಆಗುವ ವಾಂತಿ, ವಾಕರಿಕೆ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುವಂತಹ ಅಂಶವನ್ನು ಪುದಿನ ಹೊಂದಿದೆ. ಇದರ ಕಷಾಯ ಮಾಡಿ ಕುಡಿಯಬಹುದು. ಹೀಗೆ ಮಾಡುವ ಮೊದಲು ಗರ್ಭದಲ್ಲಿ ತೊಡಕುಗಳಿದ್ದಲ್ಲಿ ಒಮ್ಮೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಒಳಿತು. ಕ್ಯಾನ್ಸರ್ ಇರುವ ವ್ಯಕ್ತಿಗಳಿಗೆ ಕಿಮೋಥೆರಪಿ ಮಾಡಿದಾಗ ವಾಂತಿ, ವಾಕರಿಕೆ ಸಾಮಾನ್ಯವಾಗಿ ಕಾಡುವ ಅಡ್ಡ ಪರಿಣಾಮಗಳು. ಇದರಿಂದ ದೂರವಿರಲು ಪುದಿನ ಸಹಾಯ ಮಾಡುತ್ತದೆಂದು ಕೆಲವೊಂದು ಅಧ್ಯಯನಗಳು ಸ್ಪಷ್ಟಪಡಿಸಿವೆ. ಕೂದಲಿನ ಆರೋಗ್ಯಕ್ಕೆ ಪುದಿನ ಒಳ್ಳೆಯದು. ರಕ್ತಸಂಚಾರವನ್ನು ಹೆಚ್ಚಿಸಿ ಕೂದಲ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಹೊಟ್ಟನ್ನು ಕಡಿಮೆ ಮಾಡಲು ಕೂಡ ಸಹಕಾರಿ.

Leave a Reply

Your email address will not be published. Required fields are marked *