ಆರೋಗ್ಯರಕ್ಷಣೆಯಲ್ಲಿ ವಿಟಮಿನ್ ಕೆ

ವಿಟಮಿನ್ ಕೆ ಎನ್ನುವುದು ಒಂದೇ ರೀತಿಯಾದ ಫ್ಯಾಟ್ ಸೊಲ್ಯೂಬಲ್ (ಕೊಬ್ಬಿನಲ್ಲಿ ಕರಗುವ) ವಿಟಮಿನ್​ಗಳ ಗುಂಪಾಗಿದೆ. ವಿಟಮಿನ್ ಕೆ ಎನ್ನುವುದು ವಿಟಮಿನ್ ಕೆ-1 ಮತ್ತು ವಿಟಮಿನ್ ಕೆ-2ಗಳೆಂಬ ಎರಡು ವಿಧಗಳ ಗುಂಪು. ಈ ವಿಟಮಿನ್​ಗಳು ಅನೇಕ ರೀತಿಯ ಪ್ರೋಟೀನ್​ಗಳು ದೇಹದಲ್ಲಿ ಸಂಪೂರ್ಣವಾಗಿ ಸಂಶ್ಲೇಷಣೆಗೊಳ್ಳಲು ಬೇಕಾದ ಅಂತೆಯೇ ಕ್ಯಾಲ್ಶಿಯಂ ಮೂಳೆಗಳಲ್ಲಿ ಹಾಗೂ ಇನ್ನಿತರ ಅಂಗಾಂಗಳಲ್ಲಿ ಶೇಖರಣೆಗೊಳ್ಳುವ ಪ್ರಕ್ರಿಯೆಯ ನಿರ್ವಹಣೆಗೆ ಹಾಗೂ ಇನ್ನೂ ಅನೇಕ ದೈಹಿಕ ಪ್ರಕ್ರಿಯೆಗಳಿಗೆ ಮುಖ್ಯವಾಗಿ ಬೇಕಾದಂತಹ ಪೋಷಕಾಂಶವಾಗಿದೆ.

ರಕ್ತವು ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅತ್ಯಗತ್ಯವಾದಂತಹ ಪೋಷಕಾಂಶ ಇದಾಗಿದೆ. ಅತೀ ಹೆಚ್ಚಿನ ರಕ್ತಸ್ರಾವದಿಂದ ರಕ್ಷಿಸುತ್ತದೆ. ವಿಟಮಿನ್ ಕೆ-1 ಹಸಿರು ತರಕಾರಿಗಳಿಂದ, ಇನ್ನಿತರ ತರಕಾರಿಗಳಿಂದ ಲಭ್ಯವಾಗುತ್ತದೆ. ಮಾಂಸಗಳಿಂದ, ಚೀಸ್​ಗಳಿಂದ, ಮೊಟ್ಟೆಗಳಿಂದ ಮತ್ತು ವಿಶೇಷವಾಗಿ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿಂದ ವಿಟಮಿನ್ ಕೆ-2 ತಯಾರಾಗುತ್ತದೆ.

ಪ್ರೊಥ್ರೊಂಬಿನ್ ಎನ್ನುವುದು ಒಂದು ರೀತಿಯ ಪ್ರೋಟೀನ್. ಇದು ರಕ್ತವು ಹೆಪ್ಪುಗಟ್ಟಲು ಬೇಕಾದಂತಹ ಮುಖ್ಯ ಅಂಶ. ಈ ಅಂಶದ ಉತ್ಪತ್ತಿಗೆ ವಿಟಮಿನ್ ಕೆ ಅಗತ್ಯ. ರಕ್ತ ತೆಳುವಾಗುವ ಔಷಧಗಳನ್ನು ತೆಗೆದುಕೊಳ್ಳುತ್ತಿರುವವರು ತಜ್ಞವೈದ್ಯರ ಸಲಹೆ ಪಡೆಯದೆ ಅಧಿಕವಾಗಿ ವಿಟಮಿನ್ ಕೆ ತೆಗೆದುಕೊಳ್ಳಬಾರದು. ವಿಟಮಿನ್ ಕೆ ಪೋಷಕಾಂಶದ ಕೊರತೆಯಾಗುವುದು ಬಹಳ ಕಡಿಮೆ. ಕೆಲವೊಂದು ಸಂದರ್ಭಗಳಲ್ಲಿ ಈ ವಿಟಮಿನ್​ನ ಕೊರತೆಯಿದ್ದಲ್ಲಿ ರಕ್ತಸ್ರಾವವು ನಿಲ್ಲಲು ಹೆಚ್ಚು ಸಮಯವನ್ನು ತೆಗೆದುಕೊಳ್ಳಬಹುದು. ಈ ಸಂದರ್ಭಗಳಲ್ಲಿ ಸೂಕ್ತ ರಕ್ತಪರೀಕ್ಷೆ ಮಾಡಿ ವಿಟಮಿನ್ ಕೆ ಕೊರತೆಯಿದ್ದಲ್ಲಿ ಪೂರಕವಾಗಿ ನೀಡಬೇಕಾಗಬಹುದು.

ಕ್ಯಾಬೇಜ್ ಕುಟುಂಬವರ್ಗಕ್ಕೆ ಸೇರಿದ ಪದಾರ್ಥಗಳು ವಿಟಮಿನ್ ಕೆ ಹೊಂದಿರುತ್ತವೆ. ಸಸ್ಯಗಳಿಂದ ಲಭ್ಯವಾದ ವಿಟಮಿನ್ ಕೆ1ನ್ನು ದೊಡ್ಡ ಕರುಳಿನಲ್ಲಿನ ಬ್ಯಾಕ್ಟೀರಿಯಾಗಳು ವಿಟಮಿನ್ ಕೆ2-ಸಂಗ್ರಹಿತ ರೂಪಕ್ಕೆ ಬದಲಾಯಿಸುತ್ತವೆ. ಇದನ್ನು ದೇಹವು ಕೊಬ್ಬಿನ ಅಂಗಾಂಗಗಳಲ್ಲಿ ಮತ್ತು ಯಕೃತ್ತಿನಲ್ಲಿ ಸಂಗ್ರಹಿಸುತ್ತದೆ. ವಿಟಮಿನ್ ಕೆ ಇಲ್ಲದಿದ್ದಲ್ಲಿ ಪ್ರೊಥ್ರೊಂಬಿನ್ ಉತ್ಪತ್ತಿ ಸಾಧ್ಯವಾಗದು. ಆದ್ದರಿಂದ ನಮ್ಮ ದೇಹದ ಸಂಪೂರ್ಣ ಆರೋಗ್ಯದ ರಚನೆಯಲ್ಲಿ ವಿಟಮಿನ್ ಕೆ ಪ್ರಮುಖ ಸ್ಥಾನವನ್ನೇ ಅಲಂಕರಿಸುತ್ತದೆ.