Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಆರೋಗ್ಯಕ್ಕೆ ಬೇಕು ಕ್ಯಾಲ್ಶಿಯಂಯುಕ್ತ ಆಹಾರ

Saturday, 01.07.2017, 3:00 AM       No Comments

| ಡಾ. ವೆಂಕಟ್ರಮಣ ಹೆಗಡೆ

ಹಿಂದಿನ ಲೇಖನದಲ್ಲಿ ಕ್ಯಾಲ್ಶಿಯಂ ಲೂಟಿಕೋರರ ಬಗ್ಗೆ ತಿಳಿದುಕೊಂಡಿದ್ದೇವೆ. ಇಂದು ಕ್ಯಾಲ್ಶಿಯಂ ದೊರೆಯಲು ಯಾವ ಆಹಾರ ಸೇವಿಸಬೇಕು ಎಂದು ತಿಳಿಯೋಣ.

ನಮ್ಮ ದೇಹಕ್ಕೆ ಬೇಕಾದ ಮುಖ್ಯ ಪೋಷಕಾಂಶಗಳಲ್ಲಿ ಕ್ಯಾಲ್ಶಿಯಂ ಕೂಡ ಒಂದು. ಕ್ಯಾಲ್ಶಿಯಂ ಕೊರತೆಯಿಂದ ಸಾಕಷ್ಟು ತೊಂದರೆಗಳುಂಟಾಗುತ್ತದೆ. ಮೂಳೆಗಳು ಸದೃಢವಾಗಿರಲು ಕ್ಯಾಲ್ಶಿಯಂ ಬೇಕೇಬೇಕು. ಸಣ್ಣ ಏಟಿಗೂ ಪದೇಪದೆ ಫ್ರಾಕ್ಚರ್ ಉಂಟಾದರೆ ಅದರರ್ಥ ಕ್ಯಾಲ್ಶಿಯಂ ಕೊರತೆಯಿಂದ ಮೂಳೆ ಬಲಹೀನವಾಗಿದೆ ಎಂಬುದಾಗಿ. ಹಾಗಾಗಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂ ದೇಹಕ್ಕೆ ಬೇಕು.

ಯುವಕರಾಗಿದ್ದಾಗ ಕ್ಯಾಲ್ಶಿಯಂ ಹೆಚ್ಚಿರುವ ಆಹಾರ ಸೇವಿಸಬೇಕು. ಹೆಚ್ಚು ವ್ಯಾಯಾಮ ಮಾಡಬೇಕು. ಆಗ ಕ್ಯಾಲ್ಶಿಯಂ ಅಂಶ ಮೂಳೆಗಳಲ್ಲಿ ಸೇರಿ ಮೂಳೆಗಳು ಗಟ್ಟಿಯಾಗುತ್ತವೆ. ಅದು ಮುಂದಿನ ದಿನಗಳಲ್ಲಿ, ವಯಸ್ಸಾದ ನಂತರದಲ್ಲಿಯೂ(40-50 ವರ್ಷಗಳ ನಂತರ) ಮೂಳೆಗಳು ಸದೃಢವಾಗಿರಲು ಸಹಾಯ ಮಾಡುತ್ತದೆ. ಹಾಗಾಗಿ ಕ್ಯಾಲ್ಶಿಯಂ ಹೆಚ್ಚಿರುವ ಆಹಾರದ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು. ವ್ಯಾಯಾಮ ಮಾಡಿದಾಗ ದೇಹದಲ್ಲಿ ಒತ್ತಡವುಂಟಾಗಿ ಕ್ಯಾಲ್ಶಿಯಂ ಸರಿಯಾಗಿ ಮೂಳೆಗಳಲ್ಲಿ ಸೇರಿಕೊಳ್ಳಲು ಸಾಧ್ಯವಾಗುತ್ತದೆ. ಹೇಗೆ ಯುವಕರಾಗಿದ್ದಾಗ ದುಡಿದು ಬ್ಯಾಂಕಿನಲ್ಲಿ ಠೇವಣಿ ಇಡುತ್ತೇವೆಯೋ ಹಾಗೇ ಕ್ಯಾಲ್ಶಿಯಂನ್ನು ದೇಹದಲ್ಲಿ ಡಿಪೊಸಿಟ್ ಮಾಡಬೇಕು.

ಕ್ಯಾಲ್ಶಿಯಂ ಹೆಚ್ಚಿರುವ ಆಹಾರ ಪದಾರ್ಥಗಳು ಯಾವುವೆಂಬುದನ್ನು ತಿಳಿದುಕೊಳ್ಳೋಣ. ಎಳ್ಳು ಅತೀ ಹೆಚ್ಚು ಕ್ಯಾಲ್ಶಿಯಂ ಹೊಂದಿರುವ ಪದಾರ್ಥ. 100ಗ್ರಾಂ ಎಳ್ಳಿನಲ್ಲಿ 850 ಮಿ.ಗ್ರಾಂ ಕ್ಯಾಲ್ಶಿಯಂ ಇದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳು ಕ್ಯಾಲ್ಶಿಯಂ ಇನ್ನೊಂದು ಮುಖ್ಯ ಆಗರ. 250 ಗ್ರಾಂ ಹಾಲಿನ ಉತ್ಪನ್ನವು 150 ಮಿ.ಗ್ರಾಂ ಕ್ಯಾಲ್ಶಿಯಂ ಒದಗಿಸುತ್ತದೆ. ಹಾಲಿನಲ್ಲಿನ ಕ್ಯಾಲ್ಶಿಯಂನ್ನು ದೇಹವು ಚೆನ್ನಾಗಿ ಹೀರುತ್ತದೆ. ದೇಹಕ್ಕೆ ಬಹಳ ಒಪ್ಪುವಂತಹ ಪದಾರ್ಥ ಹಾಲು. ಆಡಿನ ಹಾಲೂ ಕ್ಯಾಲ್ಶಿಯಂನ ಪ್ರಮುಖ ಮೂಲವಾಗಿದ್ದು, ಸುಮಾರು 350 ಮಿ.ಗ್ರಾಂ ಕ್ಯಾಲ್ಶಿಯಂ ಹೊಂದಿದೆ. ಚೀಸ್ ಹಾಗೂ ಪನ್ನೀರ್ ಸಹ ಕ್ಯಾಲ್ಶಿಯಂ ಹೊಂದಿದ್ದು, ಚೀಸ್ 750 ಮಿ.ಗ್ರಾಂ ಹಾಗೂ ಪನ್ನೀರ್ 100 ಮಿ.ಗ್ರಾಂ ಕ್ಯಾಲ್ಶಿಯಂ ಒಳಗೊಂಡಿದೆ.

ಸೊಪ್ಪುಗಳು ಕ್ಯಾಲ್ಶಿಯಂ ಹೊಂದಿದ್ದು, ಪ್ರಮುಖವಾಗಿ ನುಗ್ಗೆಸೊಪ್ಪು ಹೆಚ್ಚಿನ ಕ್ಯಾಲ್ಶಿಯಂ (200ಮಿ.ಗ್ರಾಂ) ಹೊಂದಿದೆ. ಅದೇ ರೀತಿ ಪಾಲಕ್, ಮೆಂತ್ಯ ಸೊಪ್ಪು ಸುಮಾರು 80ರಿಂದ 100 ಎಂಜಿ ಕ್ಯಾಲ್ಶಿಯಂ ಒದಗಿಸುತ್ತದೆ. ತರಕಾರಿಗಳಲ್ಲಿ ಕ್ಯಾಬೇಜ್ ಮತ್ತು ಬ್ರೋಕೋಲಿಯು 100 ಮಿ.ಗ್ರಾಂ ಕ್ಯಾಲ್ಶಿಯಂ ಹೊಂದಿದೆ. ಬೆಂಡೆಕಾಯಿ(70 ಮಿ.ಗ್ರಾಂ)ಕ್ಯಾಲ್ಶಿಯಂ ಹೊಂದಿದೆ. ಕಿತ್ತಳೆಯು 60 ಮಿ.ಗ್ರಾಂ ಕ್ಯಾಲ್ಶಿಯಂ ಹೊಂದಿದ್ದು, ಇತರ ಹಣ್ಣುಗಳೂ ಸ್ವಲ್ಪ ಪ್ರಮಾಣದಲ್ಲಿ ಕ್ಯಾಲ್ಶಿಯಂ ಹೊಂದಿದೆ.

ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ 300 ಮಿ.ಗ್ರಾಂ ಕ್ಯಾಲ್ಶಿಯಂ , ಒಂದರಿಂದ ಒಂಭತ್ತು ವರ್ಷದ ಮಕ್ಕಳಿಗೆ 800 ಮಿ.ಗ್ರಾಂ, ಒಂಭತ್ತರಿಂದ ಹದಿನೇಳು ವರ್ಷದವರಿಗೆ 1300 ಮಿ.ಗ್ರಾಂ, ಮಧ್ಯವಯಸ್ಕರಿಗೆ 1100 ಮಿ.ಗ್ರಾಂ ಕ್ಯಾಲ್ಶಿಯಂ ಬೇಕಿದ್ದು, ನಂತರದಲ್ಲಿ 1000 ಮಿ.ಗ್ರಾಂ ಕ್ಯಾಲ್ಶಿಯಂ ಒದಗಿದರೆ ಸಾಕು. ಆದರೆ ಮಹಿಳೆಯರಿಗೆ ಮೆನೊಪಾಸ್​ನ ನಂತರದಲ್ಲಿ 200 ಮಿ.ಗ್ರಾಂ ಹೆಚ್ಚಿನ ಕ್ಯಾಲ್ಶಿಯಂ ಬೇಕಾಗುತ್ತದೆ. ಹೀಗೆ ವಯೋಮಾನದ ಮೇಲೆ ಎಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂನ ಅವಶ್ಯಕತೆಯನ್ನು ಅರಿತು ನಮ್ಮ ಆಹಾರ ಪದ್ಧತಿಯನ್ನು ರೂಪಿಸಿಕೊಳ್ಳಬೇಕು.

ನಾವು ದಿನದ ಮೂರು ಹೊತ್ತು ಅನ್ನ, ಚಪಾತಿ ಸೇವಿಸುತ್ತಿದ್ದೇವೆ. 100 ಗ್ರಾಂ ಅನ್ನ-ಚಪಾತಿಯು ಕೇವಲ 30 ಮಿ.ಗ್ರಾಂ ಮಾತ್ರ ಕ್ಯಾಲ್ಶಿಯಂ ಹೊಂದಿರುತ್ತದೆ. ಅರ್ಥಾತ್ ನಮಗೆ ಒಂದು ವೇಳೆ 1000 ಮಿ.ಗ್ರಾಂ ಕ್ಯಾಲ್ಶಿಯಂ ಬೇಕಾದಲ್ಲಿ ನಾವು ಮೂರು ಕೆಜಿ ಅನ್ನ ಊಟ ಮಾಡಬೇಕು. ಇದು ಅಸಾಧ್ಯವೇ ಸರಿ. ಹಾಗಾಗಿ ಬೇರೆ ಪದಾರ್ಥಗಳಿಂದ ಕ್ಯಾಲ್ಶಿಯಂ ಪಡೆಯಬೇಕು. ಇದರಿಂದಾಗಿ ಬೇರೆ ಬೇರೆ ಆಹಾರ ಪದಾರ್ಥಗಳಿಂದ ಹಲವು ಪೂರಕ ಪೋಷಕಾಂಶಗಳೂ ದೊರೆಯತ್ತವೆ.

Leave a Reply

Your email address will not be published. Required fields are marked *

Back To Top