ಆರೋಗ್ಯಕರ ಸಮಾಜಕ್ಕೆ ಯೋಚನಾ ರೀತಿ ಮುಖ್ಯ

ಧಾರವಾಡ: ಪ್ರಸ್ತುತ ಸಮಾಜ ಪ್ರಬುದ್ಧವಾಗಿದೆ. ಆದರೆ, ಋಣಾತ್ಮಕ ಯೋಚನೆಗಳೇ ಹೆಚ್ಚಿದ್ದರಿಂದ ಸಮಾಜ ಆರೋಗ್ಯಕರವಾಗಿಲ್ಲ. ಹೀಗಾಗಿ ಆರೋಗ್ಯಕರ ಸಮಾಜ ನಿರ್ವಣಕ್ಕೆ ಸಮರ್ಪಕ ಯೋಚನಾ ರೀತಿ ಬಹಳ ಮುಖ್ಯವಾದುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಭಾರತೀಯ ಮನೋವೈದ್ಯರ ಸಂಘದ ಕರ್ನಾಟಕ ಶಾಖೆ ವತಿಯಿಂದ ಸತ್ತೂರಿನ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ 28ನೇ ವಾರ್ಷಿಕ ರಾಜ್ಯ ಮಟ್ಟದ ಮನೋ ವೈದ್ಯರ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೌಢ್ಯಗಳು ಸಾಕಷ್ಟು ಸಂದರ್ಭದಲ್ಲಿ ನಮ್ಮ ಸಂತೋಷ ಹಾಳು ಮಾಡುತ್ತವೆ. ಜ್ಯೋತಿಷಿ ಒಬ್ಬ ವ್ಯಕ್ತಿಯನ್ನು ನಂಬಿಸಲು ಕೆಲ ನಿಮಿಷಗಳು ಸಾಕು. ಆದರೆ ವ್ಯಕ್ತಿಯ ನಿಜವಾದ ಸಮಸ್ಯೆ ಗುರುತಿಸಿ ಆತನಿಗೆ ಸರಿಯಾದ ಚಿಕಿತ್ಸೆ ನೀಡಲು ಶ್ರಮಿಸುವ ಮನೋವೈದ್ಯ ವ್ಯಕ್ತಿಯ ನಂಬಿಕೆ ಗಳಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಸರಿಯಲ್ಲದ್ದನ್ನೂ ನಂಬುವ ಮನೋಭಾವ ನಮ್ಮ ಸಮಾಜದಲ್ಲಿ ಬೆಳೆದಿರುವುದು ಬೇಸರದ ಸಂಗತಿ ಎಂದರು.

ಸಾವಿರಾರು ಜನರು ದೇವಸ್ಥಾನಕ್ಕೆ ಗೊಂದಲದ ಮನಸ್ಸಿನಿಂದಲೇ ಆಗಮಿಸುತ್ತಾರೆ. ಆದರೆ ಅವರು ತಾವೇ ಗೊಂದಲಕ್ಕೀಡಾಗದೆ ಮತ್ತೊಬ್ಬರಿಂದ ಗೊಂದಲಕ್ಕೀಡಾಗಿರುತ್ತಾರೆ ಎಂದ ಡಾ. ಹೆಗ್ಗಡೆ, ಮನೋವೈದ್ಯರಂತೆ ತಾವು ಸಹ ಸಾವಿರಾರು ಜನರ ಸಮಾಲೋಚನೆ ನಡೆಸುತ್ತಿರುವುದಾಗಿ ಹೇಳಿದರು.

ಕಿಮ್್ಸ ನಿರ್ದೇಶಕ ದತ್ತಾತ್ರೇಯ ಬಂಟ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಧಾರವಾಡದ ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ ಹಾಗೂ ಬೆಂಗಳೂರಿನ ಡಾ. ವಿಜಯ ಹರ್ಬಿಶೆಟ್ಟರ ಅವರಿಗೆ ಡಾ. ಎಸ್.ಎಸ್. ಜಯರಾಮ ಪ್ರಶಸ್ತಿ, ಧಾರವಾಡ ಎಸ್​ಡಿಎಂನ ಮನೋವೈದ್ಯೆ ಡಾ. ಶರಣ್ಯಾ ಶೆಟ್ಟಿ ಅವರಿಗೆ ಡಾ. ಕೆ.ಎಂ. ಧ್ರುವಕುಮಾರ ಪ್ರಶಸ್ತಿ, ಹಾನಗಲ್​ನ ರೋಷಿಣಿ ಇಂಟಿಗ್ರೇಟೆಡ್ ರಿಹ್ಯಾಬ್ ಸೆಂಟರ್​ಗೆ ಸ್ಪಂದನ ಪ್ರಶಸ್ತಿ ಸೇರಿ ವಿವಿಧ ಸಂಸ್ಥೆಗಳಿಗೆ ಹಾಗೂ ಮನೋವೈದ್ಯ ಶಾಸ್ತ್ರ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಎಸ್​ಡಿಎಂ ವೈದ್ಯಕೀಯ ನಿರ್ದೇಶಕ ಡಾ. ನಿರಂಜನಕುಮಾರ, ರಾಜ್ಯಾಧ್ಯಕ್ಷ ಅಭಯ ಮಟ್ಕರ, ಭಾರತೀಯ ಮನೋವೈದ್ಯರ ಸಂಘದ ಅಧ್ಯಕ್ಷ ಡಾ. ಅಜಿತ್ ಭಿಡೆ, ಡಾ. ಸೋಮಶೇಖರ ಬಿಜ್ಜಳ, ಡಾ. ಪ್ರಲ್ಹಾದ ಕಂಚಿ, ಡಾ. ಹೇಮಂತಕುಮಾರ ಬಿ.ಜಿ, ಡಾ. ಚಂದ್ರಶೇಖರ, ಡಾ. ಪಿ.ಕೆ. ಕಿರಣಕುಮಾರ, ಡಾ. ಆನಂದ ಪಾಂಡುರಂಗಿ, ಡಾ. ವಿನೋದ ಕುಲಕರ್ಣಿ, ಇತರರು ಇದ್ದರು.

ನಂತರ ನಡೆದ ‘ಡಿಜಿಟಲ್ ಯುಗ ಹಾಗೂ ಮನೋರೋಗ ಶಾಸ್ತ್ರ’ ವಿಷಯ ಕುರಿತ ಚರ್ಚೆ, ಸಂವಾದ, ಗೋಷ್ಠಿಗಳಲ್ಲಿ ರಾಜ್ಯ ಸೇರಿ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ. ಮಹೇಶ ದೇಸಾಯಿ ಸ್ವಾಗತಿಸಿದರು. ಡಾ. ಶಿವಾನಂದ ಹಿರೇಮಠ ಹಾಗೂ ಡಾ. ಕೀರ್ತನಾ ನಿರೂಪಿಸಿದರು.

ನಾನು ಇನ್ನೊಬ್ಬರಿಗಿಂತ ಶ್ರೀಮಂತ, ಶಕ್ತಿಶಾಲಿ, ಸುಖವಾಗಿ ಬಾಳಬೇಕು ಎನ್ನುವ ಭಾವನೆ ನಮ್ಮಲ್ಲಿ ಹಲವಾರು ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ನಾವು ಖುಷಿಯಾಗಿರಲು ನಮ್ಮ ಬಗ್ಗೆ ನಂಬಿಕೆ, ಕೆಲಸದಲ್ಲಿ ತೃಪ್ತಿ ಇರಬೇಕು. ಇದು ಧೈರ್ಯ ನೀಡುವುದಲ್ಲದೆ, ಸುಖವಾಗಿ ಜೀವನ ನಡೆಸಲು ಸಹಕಾರಿಯಾಗುತ್ತದೆ.

ಡಾ. ಡಿ. ವೀರೇಂದ್ರ ಹೆಗ್ಗಡೆ