ಆರು ತಿಂಗಳಲ್ಲಿ ಖಾದಿ ಸಂಕಷ್ಟ ಪರಿಹಾರ

blank

ಹುಬ್ಬಳ್ಳಿ: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಸರ್ಕಾರದಿಂದ 105 ಕೋಟಿ ರೂ. ಅನುದಾನ ಬರುವುದು ಬಾಕಿ ಇದೆ. ಇದರಲ್ಲಿ 2014ರಿಂದ 2019ರವರೆಗಿನ ಪ್ರೋತ್ಸಾಹಧನ ಪಾವತಿಗೆ ಅನುಕೂಲವಾಗುವಂತೆ 51.49 ಕೋಟಿ ರೂಪಾಯಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ ತಿಳಿಸಿದರು.

blank

ಇಲ್ಲಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಲಾಕ್​ಡೌನ್​ನಿಂದಾಗಿ ಖಾದಿ ಉತ್ಪನ್ನಗಳ ಮಾರಾಟ ಕುಸಿತ ಕಂಡಿದೆ. ಅಂದಾಜು 280 ಕೋಟಿ ರೂ. ಮೌಲ್ಯದ ಖಾದಿ ಉತ್ಪನ್ನಗಳು ಮಾರಾಟವಾಗದೆ ಉಳಿದುಕೊಂಡಿವೆ. ಇದರಿಂದ ಖಾದಿ ಉತ್ಪಾದನೆ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಪ್ರೋತ್ಸಾಹಧನ ವಿತರಣೆ, ಖಾದಿ ಮೇಳ ಏರ್ಪಡಿಸಿ ಮಾರಾಟಕ್ಕೆ ಅನುಕೂಲ ಒದಗಿಸಿ, ಮುಂದಿನ 6 ತಿಂಗಳಲ್ಲಿ ಸಂಕಷ್ಟ ಪರಿಹಾರ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದರು.

ರಾಜ್ಯಾದ್ಯಂತ ಮಂಡಳಿಯಲ್ಲಿ ನೋಂದಾಯಿತವಾದ 207 ಖಾದಿ ಉತ್ಪನ್ನ ಸಂಸ್ಥೆಗಳು ಇವೆ. 10 ಸಾವಿರ ಜನರು ಪೂರ್ಣಾವಧಿ ಖಾದಿ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ಶೇ.85ರಷ್ಟು ಜನ ಮಹಿಳೆಯರು. 60 ವರ್ಷ ಸಮೀಪದ ಕೆಲಸಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಏಳೆಂಟು ಸಾವಿರ ಜನರು ಬಿಡುವಿನ ವೇಳೆಯಲ್ಲಿ ಖಾದಿ ಉತ್ಪಾದನೆ ಮಾಡುತ್ತಾರೆ. 2014ರಿಂದ 2019ರವರೆಗಿನ ಬಾಕಿ ಸಹಾಯಧನವನ್ನು ಈಗಿನ ಸರ್ಕಾರ ಪಾವತಿಸಲಿದೆ. 2019-20, 2020-21ನೇ ಸಾಲಿನ ಬಾಕಿ ಮೊತ್ತವನ್ನು ಆಯವ್ಯಯದಲ್ಲಿ ಸೇರಿಸಿಕೊಡುವಂತೆ ಮುಖ್ಯಮಂತ್ರಿಯವರನ್ನು ಕೋರಿಕೊಂಡಿದ್ದೇವೆ ಎಂದರು.

ಯುವಕರಿಗೆ ತರಬೇತಿ: ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವ ಸ್ವಾಮಿ ಮಾತನಾಡಿ, ನೂಲುವ ಮೂಲಕ ಖಾದಿ ಉತ್ಪನ್ನಗಳನ್ನು ತಯಾರಿಸುವ ಕುಶಲ ಕರ್ವಿುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಖಾದಿ ಉತ್ಪನ್ನಗಳ ತಯಾರಿಕೆಯಲ್ಲಿ ಯುವಕರು ಪಾಲ್ಗೊಳ್ಳುವಂತೆ ಮಾಡಲು ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಶಿಷ್ಯ ವೇತನದೊಂದಿಗೆ ಉತ್ತಮ ರೀತಿಯ ತರಬೇತಿ ನೀಡಲಾಗುವುದು. ಯುವಜನರು ಖಾದಿ ವಸ್ತ್ರಗಳೆಡೆಗೆ ಆಕರ್ಷಿತವಾಗುವಂತೆ ಮಾಡಲು ಹೊಸ ರೀತಿಯ ವಿನ್ಯಾಸಗಳನ್ನು ತರಲಾಗುವುದು ಎಂದರು.

ಗುರಿ ಹೆಚ್ಚಳ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (ಪಿಎಂಇಜಿಪಿ) ಅಡಿ ರಾಜ್ಯದಲ್ಲಿ 888 ಖಾದಿ ಉತ್ಪಾದನೆ ಹಾಗೂ ಸೇವಾ ಘಟಕ ಸ್ಥಾಪನೆಗೆ ಸಹಾಯಧನ ನೀಡಲು ಗುರಿ ಹೊಂದಲಾಗಿತ್ತು. ಲಾಕ್​ಡೌನ್​ನಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗುರಿ ಹೆಚ್ಚಿಸಿದೆ. ಒಟ್ಟು 2000 ಫಲಾನುಭವಿಗಳಿಗೆ ಹಣ ಮಂಜೂರು ಮಾಡುವ ಗುರಿ ಹೊಂದಲಾಗಿದೆ. ಖಾದಿ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಸ್ಥಾಪನೆಗೆ ನಗರ ವ್ಯಾಪ್ತಿಯಲ್ಲಿ 10 ಲಕ್ಷ ರೂ. ಹಾಗೂ ಮಹಾನಗರ ವ್ಯಾಪ್ತಿಗಳಲ್ಲಿ 25 ಲಕ್ಷ ರೂ. ಸಹಾಯಧನ ನೀಡಲಾಗವುದು ಎಂದರು.

ಖಾದಿ ಅರ್ಬನ್ ಪ್ಲಾಜಾ: ಖಾದಿ ಉತ್ಪನ್ನಗಳ ಸಂಸ್ಥೆಗಳು ನಶಿಸಿಹೋಗಬಾರದು. ಬೆಂಗಳೂರು, ಮೈಸೂರು ಬಳ್ಳಾರಿಯಲ್ಲಿ ಖಾದಿ ಅರ್ಬನ್ ಪ್ಲಾಜಾಗಳನ್ನು ಸ್ಥಾಪಿಸಲು ಯೋಚಿಸಲಾಗುತ್ತಿದೆ. ಸದ್ಯ ಖಾದಿ ನೂಲುವವರಿಗೆ ಪ್ರತಿ ಮೀಟರ್​ಗೆ 7 ರೂ. ಪ್ರೋತ್ಸಾಹಧನ ಇದ್ದು, ಹೆಚ್ಚಿಸುವಂತೆ ಸರ್ಕಾರವನ್ನು ಕೋರಲಾಗುವುದು ಎಂದರು. ಮಂಡಳಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಿ.ಪಿ. ನಾರಾಯಣಕರ ಸುದ್ದಿಗೋಷ್ಠಿಯಲ್ಲಿದ್ದರು.

ಇ-ಮಾರ್ಕೆಟಿಂಗ್ ವ್ಯವಸ್ಥೆ: ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಆನ್​ಲೈನ್ ಮೂಲಕ ಅಮೆಜಾನ್, ಫ್ಲಿಪ್​ಕಾರ್ಟ್ ಮಾದರಿಯಲ್ಲಿ, ಖಾದಿ ಉತ್ಪನ್ನಗಳನ್ನು ಮಾರಾಟ ಮಾಡಲು ಇ-ಮಾರ್ಕೆಟಿಂಗ್ ಸ್ಥಾಪಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಸಿಇಒ ಜಯವಿಭವಸ್ವಾಮಿ ತಿಳಿಸಿದರು.

Share This Article
blank

ಈ 4 ವಿಷಯಗಳ ಬಗ್ಗೆ ಮಾತನಾಡಬೇಡಿ! ಯಶಸ್ವಿ ಜೀವನ ನಿಮ್ಮದೆ…. successful life

successful life: ಪ್ರತಿಯೊಬ್ಬರ ಜೀವನವೂ ಅನಿರೀಕ್ಷಿತ ತಿರುವುಗಳಿಂದ ತುಂಬಿರುತ್ತದೆ. ಯಶಸ್ಸು, ವೈಫಲ್ಯ, ಸಂತೋಷ, ದುಃಖ, ಅದೃಷ್ಟ,…

ನೀವು ಎಷ್ಟೇ ಸಂಪಾದಿಸಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ಸಾಲದಲ್ಲಿ ಮುಳುಗುತ್ತಿದ್ದೀರಾ? ಇಲ್ಲಿವೆ ಸಲಹೆಗಳು..Money Tips

Money Tips: ನಾವು ದಿನ ನಿತ್ಯ ಕಷ್ಟ ಪಟ್ಟು ದುಡಿದು ಹಣ ಸಂಪಾದಿಸುತ್ತೇವೆ. ಆದರೆ ನಮ್ಮ…

blank