ತಾಳಗುಪ್ಪ: ಕೃಷಿ ಕಾಯಕವೇ ಜೀವನ ಧರ್ಮವಾಗಿರುವ ದೀವರು ಸಮುದಾಯದ ವಿಶಿಷ್ಟ ಆಚರಣೆಯಾದ ಆರಿದ್ರಾ ಮಳೆ ಹಬ್ಬವನ್ನು ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. 300 ಮನೆಗಳಿರುವ ಮನಮನೆಯಲ್ಲಿ ಗ್ರಾಮ ಸಮಿತಿ ಹಬ್ಬದ ಆಚರಣೆಗೆ ಮಾದರಿ ನೀತಿ ಸಂಹಿತೆ ರೂಪಿಸಿದೆ.
ಹಬ್ಬದ ಆಚರಣೆಯನ್ನು ಪೂಜೆಗಷ್ಟೇ ಸೀಮಿತಗೊಳಿಸಿದೆ. ವೈಯಕ್ತಿಕವಾಗಿ ಕುರಿ ಕಡಿಯಲು ನಿರ್ಬಂಧ ಹೇರಲಾಗಿದೆ. ಸಮಿತಿಯೇ 1 ಸಿಡಿಬನದಲ್ಲಿ ಹಾಗೂ 1 ಗದ್ದಿ ಗುರಿಯಲ್ಲಿ ಒಟ್ಟು ಎರಡು ಕುರಿ ಕಡಿದು ಪ್ರಸಾದ ರೂಪದಲ್ಲಿ ಗ್ರಾಮದವರಿಗೆ ಹಂಚಲು ನಿರ್ಧರಿಸಿದೆ. ಮನೆಯ ಹೆಣ್ಣುಮಕ್ಕಳನ್ನು ಹೊರತುಪಡಿಸಿ ಉಳಿದವರನ್ನು ಆಹ್ವಾನಿಸುವಂತಿಲ್ಲ.
ಭರಣಿಯಲ್ಲಿ ಉತ್ತು, ಮೃಗಶಿರಾದಲ್ಲಿ ಹರ್ತೆ ಕುಂಟೆ ಹೊಡೆದು, ಆಲ ಹೊಡೆದು, ಕಸಗುಡಿಸಿ ಬಿತ್ತನೆ ಗದ್ದೆಯ ದೊಡ್ಡ ಪಾಲು ಕೆಲಸ ಮುಗಿಸುವ ಕೃಷಿಕರು ಮಳೆ ಬೆಳೆ ಸಮೃದ್ಧಗೊಳ್ಳಲು ಆರಿದ್ರಾ ಮಳೆಯ ಪರ್ವಕಾಲದಲ್ಲಿ ಗ್ರಾಮ ದೇವರೂ ಸೇರಿ ಅಗೋಚರ ಶಕ್ತಿಗಳಿಗೆ ಪೂಜೆ ಸಲ್ಲಿಸಿ ಸಂತೃಪ್ತಿಗೊಳಿಸುವ ಪರಿಪಾಠವಿದೆ. ಭೂತ, ಚೌಡಿ ಮೊದಲಾದವುಗಳಿಗೆ ಕೋಳಿ, ಕುರಿ ಬಲಿ ನೀಡಲಾಗುತ್ತದೆ.
ಹಬ್ಬಕ್ಕೆ ಅಳಿಯ-ಮಗಳು, ನೆಂಟರು, ಪರಿಚಿತರನ್ನು ಕರೆದು ಉಣ ಬಡಿಸುವುದು ದೀವರ ಸಂಸ್ಕೃತಿ. ಅಕ್ಕಿ ಕಡುಬು, ಕೋಳಿ, ಕುರಿ ಮಾಂಸ, ಮೀನು, ಮೊಟ್ಟೆಯ ವಿಶೇಷ ಖಾದ್ಯದ ಸಮಾರಾಧನೆಯೇ ನಡೆಯುತ್ತದೆ. ಪ್ರತಿ ಕುಟುಂಬವೂ ಕನಿಷ್ಠ 20 ಸಾವಿರ ರೂ. ವೆಚ್ಚ ಮಾಡುತ್ತವೆ.