ಆಯ್ಕೆ ವಂಚನೆಗೆ ಬಿಸಿಸಿಐ ದೂರು

ದೆಹಲಿ: ಮೂರು ರಾಜ್ಯಗಳ ರಣಜಿ ತಂಡದಲ್ಲಿ ಸ್ಥಾನ ನೀಡುವ ಭರವಸೆಯೊಂದಿಗೆ ದೆಹಲಿಯ ಮೂವರು ಯುವ ಕ್ರಿಕೆಟಿಗರಿಂದ ತಲಾ 80 ಲಕ್ಷ ರೂ. ಪಡೆದಿದ್ದ ಕ್ರಿಕೆಟ್ ಕೋಚ್ ವಿರುದ್ಧ ಬಿಸಿಸಿಐ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಬಿಸಿಸಿಐ ಜತೆ ಆಟಗಾರರು ಕೂಡ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ರಣಜಿ ತಂಡದಲ್ಲಿ ಸ್ಥಾನ ಪಡೆಯಲು ದುಬಾರಿ ಮೊತ್ತ ನೀಡಿದ್ದ ಆಟಗಾರರಿಗೆ ನಕಲಿ ಆಯ್ಕೆ ಪತ್ರವನ್ನು ನೀಡಿ ಮೋಸ ಮಾಡಲಾಗಿದೆ. ಕಾನಿಶ್ಕ್ ಕೌರ್, ಕಿಶನ್ ಅತ್ರಿ ಹಾಗೂ ಶಿವಂ ಶರ್ಮ ಎಂಬವರು ದೂರು ನೀಡಿದ್ದಾರೆ. ಕಳೆದ ವರ್ಷ ಕ್ರಿಕೆಟ್ ಕೋಚ್ ಒಬ್ಬರು ನಾಗಾಲ್ಯಾಂಡ್, ಮಣಿಪುರ ಹಾಗೂ ಜಾರ್ಖಂಡ್​ನ ರಣಜಿ ತಂಡಗಳಲ್ಲಿ ಅತಿಥಿ ಆಟಗಾರರಾಗಿ ಸ್ಥಾನ ನೀಡುತ್ತೇವೆ. ಅದಕ್ಕಾಗಿ 80 ಲಕ್ಷ ರೂ. ನೀಡಬೇಕು ಎಂದು ಹೇಳಿದ್ದರು ಎಂದು ಕಾನಿಶ್ಕ್ ಕೌರ್ ತಿಳಿಸಿದ್ದಾರೆ. ನಾಗಾಲ್ಯಾಂಡ್ ಕ್ರಿಕೆಟ್ ಮಂಡಳಿಯ ಅಧಿಕಾರಿ ಹಾಗೂ ಮುಖ್ಯ ಕೋಚ್​ಅನ್ನು ಭೇಟಿ ಮಾಡಿಸುತ್ತೇವೆ. ಐದು ಪಂದ್ಯಗಳಿಗೆ 15 ಲಕ್ಷ ರೂ. ಸಿದ್ಧವಿರಬೇಕು ಎಂದಿದ್ದ ಪತ್ರವೊಂದನ್ನೂ ಇವರಿಗೆ ನೀಡಲಾಗಿತ್ತು. ಆದರೆ, 19 ವಯೋಮಿತಿಯ ತಂಡದ ಪರ 2 ಪಂದ್ಯ ಆಡಿದ ಬಳಿಕ ತನಿಖೆಯಲ್ಲಿ ಇವರಲ್ಲಿ ಇರುವುದು ನಕಲಿ ಆಯ್ಕೆ ಪತ್ರ ಎನ್ನುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚ್, ಸಂಸ್ಥೆಯ ಸದಸ್ಯರು ಸೇರಿದಂತೆ ಒಟ್ಟು 11 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.