ಆಯ್ಕೆಗಾರನಿಗೆ ಆಟಗಾರ ಹಲ್ಲೆ!

ನವದೆಹಲಿ: ಕ್ರಿಕೆಟ್ ವ್ಯವಹಾರಗಳಲ್ಲಿ ತೀವ್ರತರದ ಆರೋಪ ಗಳನ್ನು ಎದುರಿಸುತ್ತಿರುವ ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಮತ್ತೊಂದು ಪ್ರಕರಣದಿಂದ ಸುದ್ದಿಯಾಗಿದೆ. ಡಿಡಿಸಿಎಯ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ವೇಗಿ ಅಮಿತ್ ಭಂಡಾರಿ ಮೇಲೆ ಆಟಗಾರನೊಬ್ಬನಿಂದಲೇ ಹಲ್ಲೆಯಾಗಿದ್ದು, ತಲೆ ಹಾಗೂ ಕಿವಿಗೆ ಗಂಭೀರ ಪ್ರಮಾಣದ ಪೆಟ್ಟುಗಳಾಗಿವೆ. 23 ವಯೋಮಿತಿ ತಂಡದ ಆಯ್ಕೆ ಟ್ರಯಲ್ಸ್ ನಲ್ಲಿ ಫೇಲ್ ಆಗಿದ್ದ ಆಟಗಾರ, ಸೇಂಟ್ ಸ್ಟೀಫನ್ಸ್ ಮೈದಾನದಲ್ಲಿ ದೆಹಲಿ ತಂಡದ ಅಭ್ಯಾಸ ಪಂದ್ಯದ ವೇಳೆ ಹಲ್ಲೆ ನಡೆಸಿದ್ದಾರೆ.

ದೆಹಲಿ ತಂಡ ಫೆ. 21ರಂದು ಆರಂಭ

ಆಗಲಿರುವ ಸಯ್ಯುದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಗಾಗಿ ಸೇಂಟ್ ಸ್ಟೀಫನ್ಸ್ ಮೈದಾನದಲ್ಲಿ ಅಭ್ಯಾಸ ಪಂದ್ಯ ಆಡುತ್ತಿದೆ. ಗಾಯಗೊಂಡಿದ್ದ ಅಮಿತ್ ಭಂಡಾರಿ ಅವರನ್ನು ಆಯ್ಕೆ ಸಮಿತಿಯ ಇನ್ನೊಬ್ಬ ಸದಸ್ಯ ಸುಖ್​ವಿಂದರ್ ಸಿಂಗ್, ಸಿವಿಲ್ ಲೈನ್ಸ್​ನಲ್ಲಿರುವ ಸಂತ್ ಪರಮಾನಂದ ಆಸ್ಪತ್ರೆಗೆ ಕೂಡಲೆ ದಾಖಲಿಸಿದರು. ಪೊಲೀಸರು ಬರುವ ಮುನ್ನವೇ ಆಟಗಾರ ಹಾಗೂ ಆತನ ಸಹಪಾಠಿಗಳು ಮೈದಾನದಿಂದ ಕಾಲ್ಕಿತ್ತಿದ್ದಾರೆ.

‘ಪ್ರಕರಣದ ಬಗ್ಗೆ ಗಮನಹರಿಸಿದ್ದೇವೆ. ಅಮಿತ್ ಭಂಡಾರಿ ಅವರು ಹೇಳಿಕೆ ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳುತ್ತೇವೆ’ ಎಂದು ದೆಹಲಿ ಪೊಲೀಸ್ ಉಪವರಿಷ್ಠಾಧಿಕಾರಿ ನೂಪುರ್ ಪ್ರಸಾದ್ ತಿಳಿಸಿದ್ದಾರೆ. ಅಮಿತ್ ಭಂಡಾರಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿರುವ ಡಿಡಿಸಿಎ ಅಧ್ಯಕ್ಷ ರಜತ್ ಶರ್ಮ, ‘ಅವರು ಬಹಳ ಆಘಾತಗೊಂಡಿದ್ದಾರೆ. ಇದು ಸಹಜ ಕೂಡ. ಮುಂಜಾಗ್ರತಾ ಕ್ರಮವಾಗಿ ಮುಂದಿನ 24 ಗಂಟೆಗಳ ಕಾಲ ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ವಹಿಸಲಾಗುತ್ತದೆ’ ಎಂದು ಹೇಳಿದ್ದಾರೆ. ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್, ಕೃತ್ಯ ಎಸಗಿದ ಆಟಗಾರನಿಗೆ ಆಜೀವ ನಿಷೇಧ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ವೀರೇಂದ್ರ ಸೆಹ್ವಾಗ್ ಕೂಡ ಘಟನೆಯನ್ನು ಖಂಡಿಸಿದ್ದಾರೆ. -ಪಿಟಿಐ/ಏಜೆನ್ಸೀಸ್

ಅನುಜ್ ದೇಢಾರಿಂದ ಕೃತ್ಯ

ರಾಷ್ಟ್ರೀಯ 23 ವಯೋಮಿತಿ ಟೂರ್ನಿಗೆ ತಮ್ಮನ್ನು ಪರಿಗಣಿಸದ ಕಾರಣಕ್ಕೆ 23 ವಯೋಮಿತಿ ತಂಡದ ಆಟಗಾರ ಅನುಜ್ ದೇಢಾ ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ‘ಅನುಜ್ ಹಲವು ದಿನಗಳಿಂದ ಭಂಡಾರಿಗೆ ಬೆದರಿಕೆ ಹಾಕುತ್ತಿದ್ದ. ಆತ ಸ್ಥಳೀಯ ಗೂಂಡಾಗಳನ್ನು ಕರೆಸಿಕೊಂಡು, ರಾಷ್ಟ್ರೀಯ ತಂಡದ ಅಭ್ಯಾಸ ಪಂದ್ಯದ ವೇಳೆ ಹಲ್ಲೆ ಮಾಡಿದ್ದಾನೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ನವೆಂಬರ್​ನಲ್ಲಿ ಡಿಡಿಸಿಎ ಪ್ರಕಟಿಸಿದ್ದ 23 ವಯೋಮಿತಿ ತಂಡದ ಟ್ರಯಲ್ಸ್​ನ ಆರಂಭಿಕ 79 ಆಟಗಾರರ ಪಟ್ಟಿಯಲ್ಲಿ ದೇಢಾರ ಹೆಸರಿತ್ತು. ಆದರೆ ಟ್ರಯಲ್ಸ್​ನಲ್ಲಿ ಕೆಟ್ಟ ನಿರ್ವಹಣೆ ತೋರಿದ ಕಾರಣಕ್ಕೆ ಅವರನ್ನು ಕೈಬಿಡಲಾಗಿತ್ತು.

ಹಾಕಿ ಸ್ಟಿಕ್, ರಾಡ್, ಚೈನ್​ಗಳಿಂದ ಹಲ್ಲೆ

ದೆಹಲಿ ಕೋಚ್ ಮಿಥುನ್ ಮನ್ಹಾಸ್ ಜತೆ ಭಂಡಾರಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ 15ಕ್ಕೂ ಹೆಚ್ಚಿನ ಗೂಂಡಾಗಳು ಮೊದಲು ದೊಡ್ಡ ದನಿಯಲ್ಲಿ ಬೆದರಿಕೆ ಹಾಕುತ್ತಿದ್ದರು. ದೆಹಲಿ ತಂಡದ ಆಟಗಾರರು ಹಾಗೂ ಸಿಬ್ಬಂದಿ ಭಂಡಾರಿ ಅವರನ್ನು ರಕ್ಷಿಸುವ ವೇಳೆಗಾಗಲೇ, ಹಾಕಿ ಸ್ಟಿಕ್, ಸೈಕಲ್ ಚೈನ್ ಹಾಗೂ ರಾಡ್​ಗಳಿಂದ ಅವರ ಮೇಲೆ ಹಲ್ಲೆ ನಡೆಸಲಾಯಿತು.

ದೆಹಲಿ ಪೊಲೀಸ್ ಕಮೀಷನರ್ ಅಮೂಲ್ಯ ಪಟ್ನಾಯಕ್​ರ ಜತೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಆರೋಪಿ ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ. ಡಿಡಿಸಿಎ ಈ ಕುರಿತಾಗಿ ದೂರನ್ನೂ ನೀಡಿದೆ. ಒಬ್ಬ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

| ರಜತ್ ಶರ್ಮ, ಡಿಡಿಸಿಎ ಅಧ್ಯಕ್ಷ