ಆಯುಷ್ಮಾನ್ ಕಾರ್ಡ್​ಗೆ ಹಣ ವಸೂಲಿ

ಸಿದ್ದಾಪುರ: ತಾಲೂಕು ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಕಾರ್ಡ್ ಮಾಡಿಸಲು ಹೋದರೆ ಅಲ್ಲಿನ ಸಿಬ್ಬಂದಿ ಜನರಿಂದ ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಕ್ಷಿಗಳಿದೆ. ವ್ಯವಸ್ಥೆ ಸರಿಪಡಿಸದಿದ್ದರೆ ಮುಂದೆ ನಾವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಾಪಂ ಸದಸ್ಯ ನಾಸೀರ್ ಖಾನ್ ತಾಲೂಕು ವೈದ್ಯಾಧಿಕಾರಿಗೆ ಎಚ್ಚರಿಸಿದರು.

ತಾಪಂ ಅಧ್ಯಕ್ಷ ಸುಧೀರ್ ಬಿ.ಗೌಡರ್ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿದ ಮಾಸಿಕೆ ಕೆಡಿಪಿ ಸಭೆಯಲ್ಲಿ ಅವರು ವಿಷಯ ಪ್ರಸ್ತಾಪಿಸಿದರು. ಪ್ರತಿಕ್ರಿಯಿಸಿದ ಪ್ರಭಾರಿ ವೈದ್ಯಾಧಿಕಾರಿ ಡಾ. ಪ್ರಕಾಶ ಪುರಾಣಿಕ, ‘ಇದು ನಮ್ಮ ಗಮನಕ್ಕೆ ಬಂದಿಲ್ಲ. ಸಾಕ್ಷಿಗಳಿದ್ದರೆ ನೀಡಿ. ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದಾಗ ಸಮಯ ಬಂದಾಗ ಮತ್ತಷ್ಟು ದಾಖಲೆಗಳೊಂದಿಗೆ ನೀಡುತ್ತೇನೆ ಎಂದು ನಾಸೀರ್ ಖಾನ್ ಹೇಳಿದರು.

ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ತಾಲೂಕಿನ ಹೇರೂರು ವಿಭಾಗ ಬಿಟ್ಟು ಉಳಿದೆಲ್ಲೆಡೆ ಮಂಗನ ಕಾಯಿಲೆ ಇದೆ. ತಾರಗೋಡ, ಅರಶೀನಗೋಡ, ಬಾಳಗೋಡ ಹಾಗೂ ಸೂರಗಾಲ್​ನಲ್ಲಿ ಮಂಗನ ಕಾಯಿಲೆ ಹೆಚ್ಚಿದೆ. ಈ ಭಾಗದಲ್ಲಿ ಜನ ಹೆಚ್ಚು ಜಾಗೃತಿ ವಹಿಸಬೇಕಾಗಿದೆ. ತಾಲೂಕಿನಲ್ಲಿ ಮೂವರಿಗೆ ಇಲಿ ಜ್ವರವೂ ಕಾಣಿಸಿಕೊಂಡಿದೆ ಎಂದರು.

ತಾಲೂಕಿನ ಹಲವು ಅಂಗನವಾಡಿಗಳಲ್ಲಿ ನೀರಿನ ಟ್ಯಾಂಕ್, ಶೌಚಗೃಹ ಸ್ವಚ್ಛತೆ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಎಲ್ಲ ಅಂಗನವಾಡಿಗಳಿಗೆ ಸಿಡಿಪಿಒ ಭೇಟಿ ನೀಡಿ ಪರಿಶೀಲಿಸಬೇಕು. ಇಲ್ಲದಿದ್ದರೆ ಏನೇ ತೊಂದರೆಯಾದರೂ ನೀವೇ ಜವಾಬ್ದಾರರು ಎಂದು ತಾಪಂ ಅಧ್ಯಕ್ಷ ಸುಧೀರ್ ಗೌಡರ್ ಸಿಡಿಪಿಒಗೆ ಎಚ್ಚರಿಕೆ ನೀಡಿದರು.

ತಾಪಂ ಇಒ ದಿನೇಶ, ಸದಸ್ಯರಾದ ವಿವೇಕ್ ಭಟ್ಟ, ರಘುಪತಿ ಹೆಗಡೆ, ಭಾಗ್ಯಶ್ರೀ ನಾಯ್ಕ, ಪದ್ಮಾವತಿ ಮಡಿವಾಳ ಹಾಗೂ ಉಪಸ್ಥಿತರಿದ್ದರು.

ಕಿಸಾನ್ ಯೋಜನೆಯ ಪ್ರಚಾರ ಕಡಿಮೆ: ಪಿಎಂ ಕಿಸಾನ್ ಯೋಜನೆ ಕುರಿತು ಪ್ರಚಾರ ಕಡಿಮೆ ಆಗಿದೆ. ಇಂದಿನವರೆಗೆ ಶೇ.50ರಷ್ಟು ರೈತರು ಮಾತ್ರ ಅರ್ಜಿ ತುಂಬಿದ್ದಾರೆ. ತಾಲೂಕಿನಲ್ಲಿ 1994 ಸಣ್ಣ ರೈತರಿದ್ದಾರೆ. ಅವರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ತಹಸೀಲ್ದಾರ್ ಕಚೇರಿಯಲ್ಲಿ ಆರ್​ಟಿಸಿ ಕೊಡಲು ನಾಲ್ಕು ಕೌಂಟರ್ ತೆರೆಯಲಾಗಿದೆ ಎಂದು ತಹಸೀಲ್ದಾರ್ ಗೀತಾ ಸಿ.ಜಿ. ಹೇಳಿದರು. ಮಧ್ಯೆ ಪ್ರವೇಶಿಸಿದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ನಾಲ್ಕು ಕೌಂಟರ್ ತೆರೆದಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ. ಸರ್ವರ್ ತೊಂದರೆಯಿಂದ ಜನರು ವಾಪಸ್ ಹೋಗುವ ಸ್ಥಿತಿ ಉಂಟಾಗಿದೆ’ ಎಂದು ದೂರಿದರು.