ಆಯುಕ್ತರ ವಿಷಾದ ಬಳಿಕ ಸಭೆ ಸುಸೂತ್ರ

ಶಿವಮೊಗ್ಗ: ಪಾಲಿಕೆಯಲ್ಲಿ ಮಾ.2ರಂದು ನಡೆದ ಸಾಮಾನ್ಯ ಸಭೆ ವೇಳೆ ಹೊರಹೋದ ಅಧಿಕಾರಿಗಳ ವಿರುದ್ಧ ಶುಕ್ರವಾರ ನಡೆದ ಸಭೆಯಲ್ಲೂ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು. ಆರಂಭದ ಒಂದು ತಾಸು ಸದಸ್ಯರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ ಆಯುಕ್ತೆ ಚಾರುಲತಾ ಸೋಮಲ್ ಅಂದಿನ ಘಟನೆಗೆ ವಿಷಾದ ವ್ಯಕ್ತಪಡಿಸಿದರು.

ಸಭೆಯ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷೆ ಸುರೇಖಾ ಮುರಳೀಧರ್, ಕಳೆದ ವಾರ ನಡೆದ ಸಭೆಯಲ್ಲಿ ಅಧಿಕಾರಿಗಳು ತೋರಿದ ವರ್ತನೆ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಮೇಯರ್ ಅವರನ್ನು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿಯ ಶಂಕರ್ ಗನ್ನಿ, ಅಧಿಕಾರಿಗಳ ವರ್ತನೆಯಿಂದ ಪಾಲಿಕೆ ಸದಸ್ಯರಿಗೆ ಅವಮಾನವಾಗಿದೆ. ನಮ್ಮನ್ನು ಆಯ್ಕೆ ಮಾಡಿದ ಜನರಿಗೂ ಅವಮಾನವಾಗಿದೆ ಎಂದರು. ಕಾಂಗ್ರೆಸ್​ನ ಆರ್.ಸಿ.ನಾಯ್್ಕ ಮಾತನಾಡಿ, ಅಧಿಕಾರಿಗಳು ಓರ್ವ ದಲಿತ ಮಹಿಳೆ(ಮೇಯರ್)ಗೆ ಅವಮಾನ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕ್ಷಮೆ ಇಲ್ಲ-ವಿಷಾದ ಮಾತ್ರ:ಕಾಂಗ್ರೆಸ್​ನ ಎಚ್.ಸಿ.ಯೋಗೇಶ್ ಮಾತನಾಡಿ, ಅಂದು ಸಭೆಗೆ ಗೈರಾದ ಅಧಿಕಾರಿಗಳ ಒಂದು ದಿನದ ವೇತನವನ್ನು ಕಡಿತಗೊಳಿಸಬೇಕೆಂದರು. ಒಂದು ಹಂತದಲ್ಲಿ ಪಾಲಿಕೆ ಆಯುಕ್ತರು ಸಭೆಯಲ್ಲಿ ಕ್ಷಮೆ ಕೋರಬೇಕೆಂದು ಪರೋಕ್ಷವಾಗಿ ಹಲವು ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ಬಿಜೆಪಿಯ ಸುವರ್ಣಾ ಶಂಕರ್, ಆಯುಕ್ತರು ಹಾಗೂ ಅಧಿಕಾರಿಗಳು ಪಾಲಿಕೆ ಸದಸ್ಯರ ಕ್ಷಮೆ ಕೋರಬೇಕೆಂದು ನೇರವಾಗಿ ಹೇಳಿದರು.

ಆ ಸಂದರ್ಭದಲ್ಲಿ ಮೌನ ಮುರಿದ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಆರಂಭದಿಂದಲೂ ನಾವು ಸದಸ್ಯರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ. ಮುಂದೆಯೂ ಈ ಸಹಕಾರ ಸಿಗಲಿದೆ. ಹಿಂದಿನ ಸಭೆಯಲ್ಲಿ ನಡೆದ ಘಟನಾವಳಿಗಳ ಬಗ್ಗೆ ವಿಷಾದವಿದೆ ಎನ್ನುವ ಮೂಲಕ ವಿವಾದಕ್ಕೆ ಇತಿಶ್ರೀ ಹಾಡಿದರು. ಮೇಯರ್ ಲತಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಇದ್ದರು.