ಆಪರೇಷನ್ ಕಮಲ ಹಲವು ಪ್ರಯತ್ನ ವಿಫಲ

ಬೀರೂರು: ಆಪರೇಷನ್ ಕಮಲ ಪ್ರಯತ್ನ ಇದೇನು ಮೊದಲ ಬಾರಿ ಅಲ್ಲ, ಬಿಜೆಪಿ ಮುಖಂಡರು ಎರಡು ಮೂರು ಬಾರಿ ಕಾಂಗ್ರೆಸ್ ಶಾಸಕರ ಖರೀದಿಗೆ ಪ್ರಯತ್ನ ನಡೆಸಿ ವಿಫಲರಾಗಿದ್ದು, ಜನಾದೇಶದಂತೆ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಬೇಕು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಭದ್ರಗೊಳಿಸಲು ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರು ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಶಾಸಕರು ಮುಂಬೈ ಮತ್ತು ದೆಹಲಿಗೆ ಹೋದಾಕ್ಷಣ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಅರ್ಥ ಕಲ್ಪಿಸಬೇಕಾಗಿಲ್ಲ. ಬಿಜೆಪಿ ಮುಖಂಡರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಅವರಿಗೆ ಸತ್ಯ ಹೇಳಿಯೇ ಗೊತ್ತಿಲ್ಲ. ಕೇವಲ ಎರಡು ದಿನಗಳಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದರು. ಮುಂದೇನಾಯ್ತು? ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರದ ಮೂಲಕ ಟನ್ ಲೆಕ್ಕದಲ್ಲಿ ಹಣ ಕ್ರೋಡಿಕರಣ ಮಾಡಿರುವ ಬಿಜೆಪಿ ನಾಯಕರು, ಈ ಹಣದ ಮೂಲಕ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಬಹುದು ಎಂಬ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಎಷ್ಟೇ ದೊಡ್ಡ ಮೊತ್ತದ ಹಣದ ಅಮಿಷವೊಡ್ಡಿದರೂ ಅವರು ಪಕ್ಷ ಬಿಡುವುದಿಲ್ಲ. ಬಿಜೆಪಿಯ ಇಂತಹ ಹಲವು ಪ್ರಯತ್ನಗಳು ವಿಫಲವಾಗಿವೆ ಎಂದರು.

ಬಿಜೆಪಿ ನಾಯಕರುಗೆ ಕಿಂಚಿತ್ತು ಮಾನ ಮರ್ಯಾದೆ ಇದ್ದರೆ ವಿರೋಧ ಪಕ್ಷವಾಗಿ ಕೆಲಸ ಮಾಡಲಿ, ಹಣವಿದೆ ಎಂದು ಕುದುರೆ ವ್ಯಾಪಾರ ಮಾಡಬೇಡಿ ಎಂದು ಪ್ರಧಾನಿ ಮೋದಿಯವರಿಗೆ ತಿಳಿಸಿದ್ದೇನೆ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಲೇ ಬೇಕೆಂದು ಹಠಕ್ಕೆ ಬಿದ್ದು ಕಾಂಗ್ರೆಸ್ ಶಾಸಕರಿಗೆ ಕೋಟ್ಯಾಂತರ ರೂಪಾಯಿಗಳ ಆಮಿಷ ವೊಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.