ಆನೆ ದಾಳಿಗೆ ರೈತ ಕಂಗಾಲು

ಚನ್ನಪಟ್ಟಣ: ನಿರಂತರ ಕಾಡಾನೆ ದಾಳಿಯಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆ ಕೈಸೇರದೆ ರೈತರು ಕಂಗಾಲಾಗಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾದ ಅರಣ್ಯ ಇಲಾಖೆ ಕೂಡ ಕೈಚೆಲ್ಲಿ ಕುಳಿತಿದೆ.

ತಾಲೂಕಿನ ಕೋಡಂಬಹಳ್ಳಿ, ಶಾನುಭೋಗನಹಳ್ಳಿ, ಕಾರೇಕೊಪ್ಪ, ಮಾದೇಗೌಡನದೊಡ್ಡಿ ಸೇರಿ ಕಬ್ಬಾಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಕೆಲ ವರ್ಷಗಳಿಂದ ನಿರಂತರ ಕಾಡಾನೆ ದಾಳಿ ನಡೆಯುತ್ತಿದೆ. ರೈತರಿಗೆ ಬೆಳೆ ಕೈಸೇರುವ ಹೊತ್ತಿಗೆ ಕಾಡಾನೆಗಳು ಜಮೀನಿಗೆ ಲಗ್ಗೆ ಇಟ್ಟು ಹಾನಿ ಮಾಡುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಅರೆಕಾಸಿನ ಪರಿಹಾರ: ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಆನೆ ದಾಳಿಯಿಂದ ಲಕ್ಷಾಂತರ ರೂ. ಮೌಲ್ಯದ ಬೆಳೆ ಕಳೆದುಕೊಂಡ ರೈತರಿಗೆ ಅರಣ್ಯ ಇಲಾಖೆ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಈ ಪರಿಹಾರದ ಹಣ ಅರಣ್ಯ ಇಲಾಖೆಗೆ ಅರ್ಜಿ ಹಿಡಿದು ತಿರುಗಾಡಿದ ಬಸ್ ಚಾರ್ಜ್​ಗೂ ಸಾಲುವುದಿಲ್ಲ ಎನ್ನುತ್ತಾರೆ ರೈತರು.

ಆನೆಗಳ ಹಿಂಡು: ಕಾವೇರಿ ವನ್ಯಜೀವಿ ವಲಯದಿಂದ ಆಹಾರ ಅರಸಿ ಬಂದಿರುವ 9 ಆನೆಗಳು ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಕತ್ತಲಾಗುತ್ತಿದ್ದಂತೆ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆಗಳನ್ನು ನಾಶಮಾಡುತ್ತಿವೆ. ಬೆಳೆಯ ಜತೆ ಜಮೀನಿನಲ್ಲಿನ ತೆಂಗು, ಮಾವು ಮೊದಲಾದ ಮರಗಳು, ಕೃಷಿ ಪಂಪ್​ಸೆಟ್ ಯಂತ್ರೋಪಕರಣಗಳಿಗೂ ಹಾನಿ ಉಂಟು ಮಾಡುತ್ತಿವೆ.

ಅರಣ್ಯ ಇಲಾಖೆ ಜೂಟಾಟ: ಕಾವೇರಿ ವನ್ಯಜೀವಿ ವಲಯದಿಂದ ಬರುವ ಆನೆಗಳು ತೆಂಗಿನಕಲ್ಲು ಮತ್ತು ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಬೀಡು ಬಿಡುತ್ತವೆ. ಈ ಎರಡೂ ಅರಣ್ಯಗಳು ಕುರುಚಲು ಪ್ರದೇಶಗಳಾಗಿರುವುದರಿಂದ ಆನೆಗಳ ವಾಸಕ್ಕೆ ಸೂಕ್ತವಾಗಿಲ್ಲ. ಹೀಗಾಗಿ ಆನೆಗಳು ಅರಣ್ಯದಿಂದ ಹೊರ ಬಂದು ಪಕ್ಕದ ರೈತರ ಜಮೀನುಗಳಲ್ಲಿ ದಾಂಧಲೆ ಎಬ್ಬಿಸುತ್ತವೆ.

ತೆಂಗಿನ ಕಲ್ಲು ಅರಣ್ಯ ಪ್ರದೇಶಕ್ಕೆ ಆಗಮಿಸುವ ಆನೆಗಳನ್ನು ಚನ್ನಪಟ್ಟಣ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಬ್ಬಾಳು ಅರಣ್ಯದತ್ತ ಓಡಿಸುತ್ತಾರೆ. ಕಬ್ಬಾಳು ಅರಣ್ಯ ಪ್ರದೇಶದ ಮಂದಿ ತಮ್ಮ ಗಡಿ ದಾಟಿದರೆ ಸಾಕು ಎಲ್ಲಾದರೂ ಹೋಗಲಿ ಎಂದು ಸುಮ್ಮನಾಗುತ್ತಾರೆ. ಹೀಗಾಗಿ ಆನೆಗಳ ಜತೆ ಅರಣ್ಯ ಇಲಾಖೆ ಸಿಬ್ಬಂದಿ ಜೂಟಾಟ ಆಡುತ್ತಿದ್ದಾರೆ ವಿನಃ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.

ಫಲಪ್ರದವಾಗದ ಆಪರೇಷನ್ ಪುಂಡಾನೆ: ಕಬ್ಬಾಳು ಹಾಗೂ ತೆಂಗಿನಕಲ್ಲು ಅರಣ್ಯ ಪ್ರದೇಶದ ರೈತರ ಆಗ್ರಹದ ಮೇರೆಗೆ ಆಪರೇಷನ್ ಪುಂಡಾನೆ ಕಾರ್ಯಾಚರಣೆ ಕೈಗೊಂಡು ಎರಡು ಆನೆ ಸೆರೆ ಹಿಡಿದರಾದರೂ ಕಾಡಾನೆಗಳ ಹಾವಳಿ ಕಡಿಮೆಯಾಗಿಲ್ಲ. ನಿರಂತರ ಕಾಡಾನೆ ದಾಳಿಯಿಂದಾಗಿ ರೈತರು ಬಾಳೆ ಮೊದಲಾದ ವಾರ್ಷಿಕ ಬೆಳೆಗಳನ್ನು ಬೆಳೆಯುವುದೇ ಬಿಟ್ಟು ಬಿಟ್ಟಿದ್ದಾರೆ. ಕಾಡಾನೆಗಳ ಭಯದಿಂದ ರಾತ್ರಿ ವೇಳೆ ತಮ್ಮ ಜಮೀನಿಗೆ ಹೋಗುವುದಕ್ಕೂ ಹೆದರುತ್ತಾರೆ. ಇನ್ನಾದರೂ ಅರಣ್ಯ ಇಲಾಖೆ ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ರೈತರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕಿದೆ.

ಒಂಭತ್ತು ಆನೆಗಳು ಬೀಡು ಬಿಟ್ಟಿದ್ದು, ಇವುಗಳನ್ನು ಕಾಡಿಗೆ ವಾಪಸ್ ಕಳಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ರೈತರಿಗೆ ಯಾವುದೇ ಹಾನಿಯಾಗದಂತೆ ಆನೆಗಳನ್ನು ಕಾಡಿಗೆ ಕಳಿಸಲಾಗುವುದು. ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಲಾಗುವುದು.

| ಮುತ್ತುನಾಯಕ್ ವಲಯ ಅರಣ್ಯಾಧಿಕಾರಿ, ಸಾತನೂರು ವಲಯ

 

ಕಾವೇರಿ ವನ್ಯಜೀವಿ ವಲಯದಿಂದ ಕಾಡಾನೆಗಳು ಬರದಂತೆ ಕ್ರಮ ಕೈಗೊಂಡರೆ ಸಮಸ್ಯೆಗೆ ಪರಿಹಾರ ಕಲ್ಪಿಸ ಬಹುದು. ಈಗಾಗಲೇ ರೈಲ್ವೆ ಕಂಬಿಗಳನ್ನು ಬಳಸಿ ಬ್ಯಾರಿಕೇಡ್ ನಿರ್ವಿುಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿ ಪೂರ್ಣಗೊಂಡಲ್ಲಿ ಕಾಡಾನೆ ದಾಳಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

| ಮಹಮ್ಮದ್ ಮನ್ಸೂರ್ ಆರ್​ಎಫ್​ಒ, ಚನ್ನಪಟ್ಟಣ

 

ನಿರಂತರ ಕಾಡಾನೆ ದಾಳಿಯಿಂದಾಗಿ ನಾವು ಹೈರಾಣಾಗಿದ್ದೇವೆ. ಅರಣ್ಯ ಇಲಾಖೆ ಕಾಡಾನೆಗಳು ಇತ್ತ ಬರದಂತೆ ಶಾಶ್ವತ ಪರಿಹಾರ ಕಲ್ಪಿಸಲಿ. ಮುಖ್ಯಮಂತ್ರಿಗಳು ಕಾಡಾನೆ ದಾಳಿ ತಡೆಗೆ ವಿಶೇಷ ಪ್ಯಾಕೇಜ್ ನೀಡಬೇಕು.

| ರವಿ ಗ್ರಾಪಂ ಸದಸ್ಯ ಶ್ಯಾನುಭೋಗನಹಳ್ಳಿ