More

  ಆನೆಗುಂಡಿ ರಸ್ತೆ ದುರವಸ್ಥೆ: ಎರಡು ವರ್ಷದ ಹಿಂದೆ ಜಲ್ಲಿ ಸುರಿದು ಸಮಸ್ಯೆ ಅಭಿವೃದ್ಧಿ ಮನವಿಗಿಲ್ಲ ಮನ್ನಣೆ

  ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ
  ನಾಲ್ಕೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ನಂಚಾರು ಗ್ರಾಮದ ಹೆಬ್ಬಾರ್‌ಬೆಟ್ಟು-ಕೋಟಿಮನೆ-ಅಂಬಾರಮಕ್ಕಿ-ಶ್ರೀ ವಿನಾಯಕ ಲಕ್ಷ್ಮೀವೆಂಕಟರಮಣ ದೇವಸ್ಥಾನ ಹಾಗೂ ಆನೆಗುಂಡಿ ರಸ್ತೆಗೆ ಎರಡು ವರ್ಷದ ಹಿಂದೆ ಜಲ್ಲಿ ಹಾಕಿದ್ದು, ಇಲ್ಲಿಯ ತನಕ ಡಾಮರೀಕರಣಗೊಳ್ಳದೆ ಸಾರ್ವಜನಿಕರು ಪರದಾಡುವಂತಾಗಿದೆ.ಇಲ್ಲಿ ಮರಾಠಿ ಸಮುದಾಯವರು ಹೆಚ್ಚಿದ್ದು, ಓಡಾಟಕ್ಕೆ ಈ ರಸ್ತೆಯನೇ ಅವಲಂಬಿಸಿದ್ದಾರೆ. ನಿತ್ಯ ಶಾಲಾ ವಾಹನ, ಕಾರ್ಖಾನೆ ಕಾರ್ಮಿಕರು, ಹೈನುಗಾರರು, ಕೃಷಿಕರು, ವಿದ್ಯಾರ್ಥಿಗಳು ಸಂಚರಿಸುತ್ತಾರೆ.

  ಹಲವಾರು ವರ್ಷಗಳ ಹಿಂದೆ ಡಾಮರು ಕಂಡಿದ್ದ ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ಅಭಿವೃದ್ಧಿ ಪಡಿಸುವ ಸಲುವಾಗಿ ಅಗೆದು ಹಾಕಿ ಜಲ್ಲಿ ಕಲ್ಲುಗಳನ್ನು ಸುರಿದಿದ್ದಾರೆ. ಇಲ್ಲಿಯ ತನಕ ಡಾಮರು ಹಾಕಿಲ್ಲ. ಸಾರ್ವಜನಿಕರು ರಸ್ತೆ ಕಾಮಗಾರಿ ಯಾವಾಗ ಆಗುತ್ತದೆ ಎಂದು ನಿರೀಕ್ಷಿಸುತ್ತಿದ್ದಾರೆ. ಜಲ್ಲಿ ರಸ್ತೆಯಲ್ಲಿ ಈಗಾಗಲೇ ಹಲವು ಹಲವು ಅಪಘಾತಗಳು ಸಂಭವಿಸಿವೆ.

  ಈ ರಸ್ತೆಯಲ್ಲಿ ಪ್ರಯಾಣ ಮಾಡುವುದು ಕಷ್ಟಕರವಾಗಿದೆ. ಈ ರಸ್ತೆ ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದಿವೆ. ಆದರೆ ಇಲ್ಲಿಯ ತನಕ ಡಾಮರೀಕರಣದ ಭಾಗ್ಯ ಕೂಡಿಬಂದಿಲ್ಲ. ಈ ಭಾಗದ ಜನರ ಕಷ್ಟ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಕೇಳಿಸದಾಗಿದೆ. ಈ ಭಾಗಗಳಲ್ಲಿ 50ಕ್ಕೂ ಅಧಿಕ ಮರಾಠಿ ಮತ್ತಿತರ ಸಮುದಾಯದವರ ಮನೆಗಳಿದ್ದು, ಹೆಚ್ಚಿನವರು ಕೃಷಿಕಾರ್ಯ ಮಾಡುತ್ತಿದ್ದಾರೆ.
  ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಗ್ರಾಮಪಂಚಾಯಿತಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಉತ್ತಮ ರಸ್ತೆ, ಬೀದಿ ದೀಪಗಳು, ಚರಂಡಿ ವ್ಯವಸ್ಥೆಗಳನ್ನು ಮಾಡಲಿ ಎನ್ನುವುದು ಈ ಭಾಗದ ಗ್ರಾಮಸ್ಥರ ಆಶಯ.

  ಸುಮಾರು 200ಮೀಟರ್ ರಸ್ತೆಗೆ ಎರಡು ವರ್ಷದ ಹಿಂದೆ ಜಲ್ಲಿ ಹಾಕಿದ್ದಾರೆ.ಆದರೆ ಇಲ್ಲಿಯ ತನಕ ಡಾಮರು ಹಾಕದೆ ಸಂಚರಿಸಲು ಅನನುಕೂಲವಾಗಿದೆ. ಸ್ಥಳೀಯ ಸಾರ್ವಜನಿಕರು ಶ್ರಮದಾನ ಮಾಡುವ ಮೂಲಕ ಜಲ್ಲಿಯನ್ನು ಸಮತಟ್ಟು ಮಾಡಿ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ.ಶೀಘ್ರದಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಸುಸಜ್ಜಿತ ರಸ್ತೆ ನಿರ್ಮಾಣವಾಗಲಿ.
  ರಾಮಮೂರ್ತಿ ಅಡಿಗ, ನಂಚಾರು ಗ್ರಾಮಸ್ಥ
   

  ಈ ಭಾಗದಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಅಸಮರ್ಪಕ ರಸ್ತೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಸಬ್ಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು, ಪಂಚಾಯಿತಿ ಸಾರ್ವಜನಿಕರ ಸಂಚಾರಕ್ಕೆ ಉತ್ತಮ ರಸ್ತೆಯನ್ನು ನಿರ್ಮಿಸಲಿ .
  ಸತೀಶ್ ಪೂಜಾರಿ ನಂಚಾರು, ನಾಲ್ಕೂರು ಗ್ರಾಪಂ ಸದಸ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts