ಮುಂಡಗೋಡ: ತಾಲೂಕಿನ ಓರಲಗಿ ಮತ್ತು ಪಾಳಾ ಗ್ರಾಪಂ ವ್ಯಾಪ್ತಿಯ ಅರಣ್ಯದಂಚಿನಲ್ಲಿ ಕಾಡಾನೆಗಳ ಹಿಂಡು ಅಡಕೆ, ಬಾಳೆ ತೋಟ ಮತ್ತು ಗದ್ದೆಗಳಲ್ಲಿ ದಾಳಿ ನಡೆಸಿ ಅಪಾರ ಹಾನಿ ಮಾಡಿದೆ. ಆನೆಗಳನ್ನು ಓಡಿಸಲು ಹೋದ ರೈತರನ್ನು ಭಾನುವಾರ ರಾತ್ರಿ ಬೆನ್ನಟ್ಟಿದ ಘಟನೆಯೂ ನಡೆದಿದೆ.
ಪಾಳಾ, ಓಣಿಕೇರಿ, ಹುಡೇಲಕೊಪ್ಪ ಮತ್ತು ಓರಲಗಿ ಗ್ರಾಮಗಳ ಅರಣ್ಯದಂಚಿನಲ್ಲಿ ಎರಡು ಹಿಂಡುಗಳು ಕಂಡು ಬಂದಿವೆ. ಒಂದು ಹಿಂಡಿನಲ್ಲಿ 6 ಆನೆಗಳು, ಮತ್ತೊಂದರಲ್ಲಿ 4 ಆನೆ ಹಾಗೂ ಒಂಟಿಯಾನೆ ಸೇರಿ ಒಟ್ಟು 11 ಆನೆಗಳು ಒಂದು ವಾರದಿಂದ ಬೀಡು ಬಿಟ್ಟಿವೆ. ಬಾಳೆ, ಅಡಕೆ, ಗೋವಿನ ಜೋಳ ಮತ್ತು ಭತ್ತದ ಹುಲ್ಲಿನ ಬಣವೆಯನ್ನು ತಿಂದು, ತುಳಿದು ನಾಶ ಮಾಡಿವೆ.
ಓರಲಗಿಯ ಹನುಮಂತಪ್ಪ ಕೋಣನಕೇರಿ ಅವರ ಬಾಳೆ ಮತ್ತು ಅಡಕೆ, ಚಂದ್ರಗೌಡ ಪಾಟೀಲ ಅವರ ಭತ್ತದ ಬಣವೆ, ಶಿವಾಜಿ ತೋಟದ ಅವರ ಗೋವಿನಜೋಳ, ಪಾಳಾದ ಬಸನಗೌಡ ಪಾಟೀಲರ ಅಡಕೆ ಮತ್ತು ಬಾಳೆ, ನನ್ನೆಸಾಬ್ ಎಂಬುವರ ಅಡಕೆ ಮತ್ತು ಬಾಳೆ, ಅಮ್ಜದ್ ಖಾನ್ ಜವಳಿ ಅವರ ಗೋವಿನ ಜೋಳದ ಫಸಲು ತಿಂದು, ತುಳಿದು ನಾಶ ಮಾಡಿವೆ. ಅಲ್ಲದೆ, ಆನೆಗಳನ್ನು ಓಡಿಸಲು ಹೋದ ಮಹೇಶ ಮುಕ್ಕಂನವರ, ಶಿವು ಮುಕ್ಕಂನವರ, ಬಸನಗೌಡ ಪಾಟೀಲ ಮತ್ತು ನಾಗನಗೌಡ ಸಿದ್ದನಗೌಡರ ಎಂಬುವರನ್ನು ಬೆನ್ನಟ್ಟಿವೆ. ತಪ್ಪಿಸಿಕೊಳ್ಳಲು ಹೋಗಿ ಅವರು ಗಾಯಗೊಂಡಿದ್ದಾರೆ. ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯವರು ಸಿಡಿಮದ್ದು ಉಪಯೋಗಿಸುತ್ತಿದ್ದಾರೆ. ಪ್ರತಿವರ್ಷ ತಾಲೂಕಿನ ಕೆಲ ಭಾಗಗಳಿಗೆ ಬರುವ ಕಾಡಾನೆಗಳ ಹಿಂಡು ಇಷ್ಟೊತ್ತಿಗಾಗಲೇ ಹಿಂತಿರುಗಬೇಕಿತ್ತು. ಆದರೆ, ಈ ವರ್ಷ ಕೆರೆಗಳಲ್ಲಿ ನೀರು, ಬೆಳೆ ಚೆನ್ನಾಗಿರುವುದರಿಂದ ಮತ್ತು ಮರಿಯಾನೆಗಳು ಇರುವುದರಿಂದ ಇನ್ನೂ ಒಂದು ತಿಂಗಳು ಇಲ್ಲಿಯೇ ಇರಬಹುದೆಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.