ಆನೆಕೆರೆಯಲ್ಲಿ ಅನಾಚಾರಗಳ ಸಾಗರ

ಹಾನಗಲ್ಲ: ಪಟ್ಟಣದ ಜನತೆಗೆ ಕುಡಿಯುವ ನೀರೊದಗಿಸುವ ಆನೆಕೆರೆ ಅಂಗಳವು ನೀರಿಲ್ಲದ ಕಾರಣ ತ್ಯಾಜ್ಯದ ತಾಣವಾಗಿ ಪರಿವರ್ತನೆಯಾಗಿದೆ.

ಆನೆಕೆರೆ ಪಕ್ಕದಲ್ಲಿಯೇ ಮದ್ಯದ ಅಂಗಡಿ ಇದೆ. ಸಂಜೆಯಾಗುತ್ತಿದ್ದಂತೆಯೇ ಕುಡುಕರು ಕೆರೆಯ ಮಧ್ಯದಲ್ಲಿರುವ ತೂಬುಗಳ ಮೇಲೆ ಕುಳಿತು ಮದ್ಯ ಸೇವಿಸುತ್ತಾರೆ. ನಂತರ ಬಾಟಲಿ, ಪ್ಲಾಸ್ಟಿಕ್ ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಇದಲ್ಲದೆ, ಸಂಜೆ ನಂತರ ಸಣ್ಣ ದೀಪಗಳನ್ನು ಹಚ್ಚಿಕೊಂಡು ಅಲ್ಲಲ್ಲಿ ಗುಂಪು-ಗುಂಪಾಗಿ ಕುಳಿತು ಇಸ್ಪೀಟ್ ಆಡುವ ತಂಡಗಳಿಗೇನೂ ಇಲ್ಲಿ ಕೊರತೆಯಿಲ್ಲ. ಪೊಲೀಸ್, ಪುರಸಭೆ ಅಧಿಕಾರಿಗಳ ಭೀತಿಯಿಲ್ಲದಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.

ದನಕರುಗಳೂ ನೀರಿನಲ್ಲಿ ಮಲಗುತ್ತವೆ. ಕೆರೆಯ ಸುತ್ತಲಿನ ಬಹುತೇಕ ನಿವಾಸಿಗಳೂ ಬಯಲು ಶೌಚಕ್ಕೆ ಕೆರೆಯನ್ನೇ ಆಶ್ರಯಿಸಿದ್ದಾರೆ.

ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಈ ಸಮಯದಲ್ಲಿ ಈ ಎಲ್ಲ ತ್ಯಾಜ್ಯ ಕುಡಿಯುವ ನೀರಿಗೆ ಸೇರಿಕೊಳ್ಳುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಕುಡಿಯುವ ನೀರಿನ ಆಗರವಾಗಿರುವ ಆನೆಕೆರೆ ಸ್ವಚ್ಛವಾಗಿಟ್ಟುಕೊಳ್ಳುವ ಹಾಗೂ ಹೆಚ್ಚು ನೀರು ತುಂಬಿಕೊಳ್ಳುವ ವ್ಯವಸ್ಥೆಯನ್ನು ಪುರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆ ಮಾಡಬೇಕಾಗಿದೆ.

ಆನೆಕೆರೆ ಅವಲಂಬಿಸಿ ನೂರಾರು ಎಕರೆಯಷ್ಟು ಅಡಕೆ ತೋಟಗಳಿವೆ. ಕೆರೆಯ ದಂಡೆಯ ರಸ್ತೆಯುದ್ದಕ್ಕೂ ಅಳವಡಿಸಿದ್ದ ಬೀದಿದೀಪಗಳ ಬ್ಯಾಟರಿಗಳನ್ನು ಕದ್ದೊಯ್ದದ್ದರಿಂದ ಸದಾ ಕತ್ತಲೆ ಆವರಿಸಿರುತ್ತದೆ.

ಕತ್ತಲಾಗುತ್ತಿದ್ದಂತೆ ಕೆರೆಯ ಕೆಳಗಿನ ಹೊಲ- ಗದ್ದೆಗಳ ಮಾಲೀಕರು ಕದ್ದು ನೀರು ಹರಿಸಿಕೊಳ್ಳುವ ತವಕದಲ್ಲಿರುತ್ತಾರೆ. ಇದಕ್ಕಾಗಿ ಕೆರೆಯ ತೂಬುಗಳನ್ನು ಸುತ್ತಿಗೆ, ಹಾರೆ, ಗುದ್ದಲಿಗಳಿಂದ ಹೊಡೆದು ತೆರವುಗೊಳಿಸುತ್ತಾರೆ. ಕುಡಿಯುವ ನೀರಿನ ಕೆರೆಯೀಗ ಇಂಥ ಎಲ್ಲ ಆತಂಕ ಎದುರಿಸಿಯೂ ಬೇಸಿಗೆ ಕಾಲದಲ್ಲಿ ಇಲ್ಲಿನ ನಾಗರಿಕರಿಗೆ ಕುಡಿಯಲು ನೀರನ್ನು ಕಾಯ್ದಿಟ್ಟುಕೊಳ್ಳಬೇಕಿದೆ. ನೀರನ್ನು ಕಾಯುವವರಾರು. ಅದು ಹೇಗೆ ಕಾಯ್ದುಕೊಳ್ಳಬೇಕೆಂಬ ಸಮಸ್ಯೆಯಲ್ಲಿ ಸಣ್ಣ ನೀರಾವರಿ, ಪುರಸಭೆ ಅಧಿಕಾರಿಗಳು, ಸಿಬ್ಬಂದಿ ನಲಗುತ್ತಿದ್ದಾರೆ.

ಕೆರೆಯ ನೀರನ್ನು ತೋಟಗಳಿಗೆ ಮಾತ್ರ ಹಾಯಿಸಿಕೊಳ್ಳುವುದು ವಾಡಿಕೆ. ಆದರೆ, ಇತ್ತೀಚೆಗೆ ಬೇರೆ ಫಸಲುಗಳಿಗೆ ರೈತರು ಹಾಯಿಸಿಕೊಳ್ಳುವ ಉದ್ದೇಶದಿಂದ ತೂಬುಗಳನ್ನು ಕಿತ್ತು, ಹಾರೆಗಳಿಂದ ಮೀಟಿ ದುಸ್ಥಿತಿಗೆ ತಂದಿಟ್ಟಿದ್ದಾರೆ. ಸಣ್ಣ ನೀರಾವರಿ ಇಲಾಖೆ ಮುಂಗಾರು ಪೂರ್ವದಲ್ಲೇ ದುರಸ್ತಿಗೊಳಿಸದಿದ್ದರೆ ಮಳೆಗಾಲದಲ್ಲಿ ನೀರು ಪೋಲಾಗಲಿದೆ. ಮುಂಜಾಗ್ರತೆ ವಹಿಸುವುದು ಅವಶ್ಯಕ. ಮಳೆಗಾಲಕ್ಕಿಂತ ಮೊದಲೇ ಕೆರೆಯನ್ನು ಪುರಸಭೆಯವರು ಸ್ವಚ್ಛಗೊಳಿಸಬೇಕು.
| ಬಾಳಾರಾಮ ಗುರ್ಲಹೊಸೂರ, ತೋಟದ ಮಾಲೀಕ ಹಾನಗಲ್ಲ

ಕೆರೆಯ ಆವರಣಕ್ಕೆ ತಂತಿ ಬೇಲಿ ನಿರ್ವಿುಸಿದ್ದರೂ ಜನರು ಜಾನುವಾರುಗಳನ್ನು ಬೇರೆ ಮಾರ್ಗಗಳಿಂದ ತಂದು ಬಿಡುತ್ತಾರೆ. ಬಯಲು ಶೌಚ ನಿಷೇಧಿಸಿದ್ದರೂ ಸಿಬ್ಬಂದಿ ಕಣ್ತಪ್ಪಿಸಿ ಹೋಗುತ್ತಾರೆ. ಜನರಲ್ಲಿ ಕುಡಿಯುವ ನೀರನ್ನು ಮಲೀನಗೊಳಿಸದಂತೆ ಕಾಪಾಡುವ ಸಾಮೂಹಿಕ ಜವಾಬ್ದಾರಿ, ಜಾಗೃತಿ ಬರಬೇಕು. ಎಲ್ಲವನ್ನೂ ಇಲಾಖೆಗಳೇ ಮಾಡುವಂತಾಗಬಾರದು.
| ನಾಗರಾಜ ಮಿರ್ಜಿ, ಇಂಜಿನಿಯರ್, ಪುರಸಭೆ

Leave a Reply

Your email address will not be published. Required fields are marked *