Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಆನಂದಸ್ವರೂಪಿಗಳಾಗಿ

Sunday, 29.01.2017, 2:03 AM       No Comments

ರ್ವ ಸಾಧು ಮತ್ತು ಅವನ ಶಿಷ್ಯ ನದೀತೀರದಲ್ಲಿ ನಡೆಯುತ್ತಿದ್ದರು. ಆಗ ನದಿಯಲ್ಲಿ ಓರ್ವ ಹೆಂಗಸು ಮುಳುಗುತ್ತಿರುವುದನ್ನು ಕಂಡು ಸಾಧು ನದಿಗೆ ಹಾರಿ ಅವಳನ್ನು ರಕ್ಷಿಸಿದ. ಬ್ರಹ್ಮಚಾರಿಯಾದ ತನ್ನ ಗುರು ಹೆಂಗಸಿನ ಮೈಮುಟ್ಟಿದನಲ್ಲಾ ಎಂದು ಶಿಷ್ಯನಿಗೆ ಅಸಮಾಧಾನವಾಯಿತು. ಕೆಲವು ತಾಸುಗಳ ನಂತರ ಅವರು ಆಶ್ರಮಕ್ಕೆ ಮರಳಿದರು. ಆಗ ಶಿಷ್ಯ ತನ್ನ ಭಾವನೆಯನ್ನು ವ್ಯಕ್ತಪಡಿಸಿದ. ಸಾಧು ಅದಕ್ಕೆ ಹೀಗೆ ಉತ್ತರಿಸಿದ: ‘ನಾನು ಆಕೆಯನ್ನು ಮುಟ್ಟಿದ್ದು ನಿಜ; ಆದರೆ ಅವಳನ್ನು ದಡಕ್ಕೆ ತಂದುಹಾಕಿದ ಕೂಡಲೇ ಅದನ್ನು ಮರೆತೆ. ನೀನು ಅವಳನ್ನು ಮುಟ್ಟದಿದ್ದರೂ ಇಷ್ಟು ಹೊತ್ತಿನವರೆಗೂ ಅವಳನ್ನು ಮನಸ್ಸಿನಲ್ಲಿ ಹೊತ್ತುಕೊಂಡಿರುವೆ’. ಯಾವುದು ಲಿಪ್ತತೆ? ಯಾವುದು ನಿರ್ಲಿಪ್ತತೆ? ನಾವು ಲಿಪ್ತತೆಯನ್ನು ತ್ಯಜಿಸಿ, ಬುದ್ಧಿಯನ್ನು ಪ್ರವಹಿಸಲು ಬಿಡಬೇಕು.

ಎಷ್ಟೋ ಸಲ ನಮ್ಮದೇ ಪರಿಕಲ್ಪನೆಗಳಿಗೆ ಬಲಿಯಾಗಿ, ಸಂಕಟಪಡುತ್ತೇವೆ. ಸಂಕಟಗಳನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಸಂತೋಷಕ್ಕಿಂತ ಈ ಪರಿಕಲ್ಪನೆಗಳೇ ನಮಗೆ ಮುಖ್ಯವಾಗುತ್ತವೆ. ಈ ರೀತಿ ನಾವು ಅನೇಕ ಬಂಧನಗಳನ್ನೂ, ಬೇಲಿಗಳನ್ನೂ ಹುಟ್ಟುಹಾಕುತ್ತೇವೆ. ಅವೇ ನಮ್ಮ ಅಸ್ಮಿತೆ ಹಾಗೂ ಹುಸಿರಕ್ಷಕರೆನಿಸುತ್ತವೆ. ನಾವು ಭ್ರಮೆಯ ಲೋಕದಲ್ಲಿ ಬದುಕತೊಡಗುತ್ತೇವೆ. ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತೇವೆ. ಮೃತ್ಯು ಬಂದು ನಮ್ಮನ್ನು ಸೆಳೆಯುವ ಮುನ್ನ ಎಚ್ಚರಗೊಳ್ಳೋಣ.

ಮೃತ್ಯುಶಯ್ಯೆಯಲ್ಲಿ ಮಲಗಿದ್ದ ಮುದುಕ ‘ನನ್ನ ವಾಚು ಎಲ್ಲಿದೆ?’ ಎಂದು ಗಟ್ಟಿಯಾಗಿ ಕೂಗಿದ. ಆತ ಸಾಯುತ್ತಿದ್ದಾನೆ. ಆದರೂ ಕೆಲಸಕ್ಕೆ ಬಾರದ ಕ್ಷುಲ್ಲಕಕ್ಕೆ ಅಂಟಿಕೊಂಡಿದ್ದಾನೆ, ತನ್ನ ಸ್ಥಿತಿಯನ್ನೂ ನೋಡಲಾರದಾಗಿದ್ದಾನೆ. ನಮ್ಮ ಶರೀರಗಳನ್ನು ಸಮಾಧಿಯೊಳಗೆ ಸಾಗಿಸುತ್ತಿದ್ದರೂ ನಮ್ಮ ಭ್ರಮೆಗಳು ಮಾತ್ರ ನಮ್ಮನ್ನು ಎಲ್ಲಿಗೂ ಒಯ್ಯುವುದಿಲ್ಲ.

ಸುಮ್ಮನೆ ಖುಷಿಯಾಗಿರಲು ಕಲಿಯಿರಿ, ಸಂತೋಷವಾಗಿ ಅರಳಿರುವ ಹೂವಿನಂತಿರಿ. ಹೂವು ಷರತ್ತಿಲ್ಲದೆ ಪರಿಮಳವನ್ನು ಬೀರುತ್ತಿರುತ್ತದೆ. ನೀವೂ ಅಂತೆಯೇ ಷರತ್ತಿಲ್ಲದೆ ಅನ್ಯರಿಗೆ ಸಂತೋಷವನ್ನು ಹಂಚುತ್ತಿರಿ. ಹೂವು ಅರಳಿದೆ, ತೆರೆದುಕೊಂಡಿದೆ, ಬೀಸುವ ಗಾಳಿಗೆ ನರ್ತಿಸುತ್ತಿದೆ. ಅದೇ ರೀತಿ ಮನುಷ್ಯನೂ ಬದಲಾವಣೆಯ ಗಾಳಿಗೆ ತೆರೆದುಕೊಂಡು ನರ್ತಿಸಲು ಸಾಧ್ಯವೇ? ಸಾಧ್ಯ. ಆನಂದಕ್ಕೆ ಅಂಟಿಕೊಳ್ಳೋಣ.

ಆನಂದದಲ್ಲಿ ನೆಲೆ ಕಂಡುಕೊಳ್ಳದಿದ್ದರೆ ದುಃಖದಲ್ಲಿ ನೆಲೆಗೊಳ್ಳುವಿರಿ. ದುಃಖದಿಂದ ಹೊರಡುವ ಯೋಚನೆಗಳು ದುಃಖದಿಂದ ಕಲುಷಿತವಾಗುತ್ತವೆ. ಅವು ತಮ್ಮನ್ನು ಸಮರ್ಥಿಸಿಕೊಳ್ಳುತ್ತ, ರಕ್ಷಿಸಿಕೊಳ್ಳುವ ತಂತ್ರಗಳನ್ನು ರೂಪಿಸಿಕೊಳ್ಳುತ್ತವೆ. ಆಗ ವ್ಯಕ್ತಿ ತಾನೇಕೆ ದುಃಖಿಯಾಗಿದ್ದೇನೆ ಎಂಬುದಕ್ಕೆ ರ್ತಾಕ ಕಾರಣಗಳನ್ನು ಕಂಡುಕೊಳ್ಳುತ್ತ ಆ ತರ್ಕಕ್ಕೆ ತಾನೇ ಮರುಳಾಗುತ್ತಾನೆ. ತರ್ಕವು ಒಂದು ರೀತಿಯ ಮಾದಕದ್ರವ್ಯದಂತೆ ವರ್ತಿಸುತ್ತದೆ. ತನ್ನದೇ ಆದ ಯೋಚನೆಗಳಿಗೆ ಕಟ್ಟಿಹಾಕುತ್ತದೆ. ಯಾವುದೇ ತರ್ಕದ ಆಧಾರವಿಲ್ಲದೆ, ಕಾರಣವಿಲ್ಲದೆ, ಸುಮ್ಮನೆ ಆನಂದವಾಗಿರಲು ಕಲಿಯೋಣ. ಆಗ ಮಾತ್ರ ನಾವು ತರ್ಕದ ಬಲೆಯಿಂದ ಪಾರಾಗಬಹುದು. ನಾವು ಗೆದ್ದರೆ, ಗೆದ್ದಂತಾಯಿತು. ಸೋತರೂ ಸೋಲಲು ಕಾರಣವೇನೆಂದು ತಿಳಿಯುವ ಮೂಲಕ ಗೆದ್ದಂತಾಯಿತು. ಈ ರೀತಿಯಾಗಿ ನಾವು ಯಾವಾಗಲೂ ಗೆಲ್ಲುತ್ತೇವೆ. ಯಾವುದೋ ಒಂದು ಕಾರಣದಿಂದ ಹುಟ್ಟಿದ ಸಂತೋಷ ಕಾಲಕ್ರಮೇಣ ದುಃಖವಾಗಿ ಬದಲಾಗಬಹುದು. ಬಹುತೇಕ ಸಂದರ್ಭಗಳಲ್ಲಿ ಕಾರಣ ನಾಶವಾದಾಗ, ಸಂತೋಷವೂ ಮಾಯವಾಗುತ್ತದೆ. ಕಾರಣವಿಲ್ಲದೆ ಖುಷಿಯಾಗಿರಿ. ಇದೇ ನಿಮ್ಮ ಮಂತ್ರವಾಗಲಿ.

ಎರಡು ತಂಡಗಳ ನಡುವೆ ಫುಟ್ಬಾಲ್ ಆಟ ನಡೆಯುತ್ತಿತ್ತು. ಸಾಧುವೊಬ್ಬ ಅದನ್ನು ಮೌನವಾಗಿ ವೀಕ್ಷಿಸುತ್ತಿದ್ದ. ಪ್ರತಿಸಲ ಯಾವುದೇ ತಂಡ ಗೋಲ್ ಹೊಡೆದಾಗ ಆತ ಸಂತೋಷದಿಂದ ಕುಣಿಯುತ್ತಿದ್ದ. ಆಗ ಯಾರೋ ಆತನನ್ನು ‘ನೀನು ಯಾವ ತಂಡದ ಅಭಿಮಾನಿ?’ ಎಂದು ಕೇಳಿದರು. ಆತ ಹೀಗೆ ಉತ್ತರಿಸಿದ: ‘ಯಾವ ತಂಡದ ಅಭಿಮಾನಿಯೂ ಅಲ್ಲ; ಕೇವಲ ಆಟವನ್ನು ಆನಂದಿಸುತ್ತಿದ್ದೇನೆ’. ಇಂಥ ನೆಲೆಯಿಂದ ತೊಡಗಿಕೊಂಡಾಗ ಒಂದು ವಿಶಿಷ್ಟ ಮುಗ್ಧತೆ ನಮ್ಮಲ್ಲಿ ಅರಳುತ್ತದೆ. ಆಗ ‘ಏನು ಇದೆಯೋ, ಹೇಗೆ ಇದೆಯೋ’ ಆ ಸ್ಥಿತಿಯನ್ನು ಪ್ರತಿಫಲಿಸುವುದು ಸಾಧ್ಯವಾಗುತ್ತದೆ. ಜೀವನದ ಸಮಸ್ತ ಸೌಂದರ್ಯವನ್ನೂ, ಅಪರಿಪೂರ್ಣತೆಯಲ್ಲಿಯೇ ಅಡಕವಾಗಿರುವ ಚೆಲುವನ್ನೂ ನೋಡಲು ಹಾಗೂ ಸ್ವೀಕರಿಸಲು ಕಲಿಯುತ್ತೇವೆ. ‘ಏನೋ ಇರಬೇಕೋ’ ಅದರಲ್ಲಿ ಅಲ್ಲ, ‘ಏನು ಇದೆಯೋ’ ಅದರಲ್ಲಿನ ಚೆಲುವನ್ನು ಕಾಣುತ್ತೇವೆ. ಅಂತಹ ವಾತಾವರಣದಲ್ಲಿ ವ್ಯಕ್ತಿಯ ಸಂಬಂಧಗಳು ಹೊಸ ಎತ್ತರಗಳನ್ನು ತಲುಪುತ್ತವೆ. ಆಗ ಬದುಕಿನ ಶಿಖರಗಳನ್ನು ಹೇಗೋ ಹಾಗೆ ಕಣಿವೆಗಳನ್ನೂ ಆನಂದಿಸಲು ಸಾಧ್ಯವಾಗುತ್ತದೆ.

(ಲೇಖಕರು ಅಂತಾರಾಷ್ಟ್ರೀಯ ಮ್ಯಾನೇಜ್​ವೆುಂಟ್ ಗುರುಗಳು)

 

Leave a Reply

Your email address will not be published. Required fields are marked *

Back To Top