ಆಧ್ಯಾತ್ಮಿಕ ಬ್ರಾಹ್ಮಣತ್ವದ ಚಿಂತನೆ ಅಗತ್ಯ

ಶಿವಮೊಗ್ಗ: ಬ್ರಾಹ್ಮಣ ಸಮಾಜ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದರೂ ಬ್ರಾಹ್ಮಣ್ಯ ಮರೆಯುತ್ತಿರುವುದು ಬೇಸರದ ಸಂಗತಿ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎನ್.ಕುಮಾರ್ ಹೇಳಿದರು.

ಶ್ರೀ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಬ್ರಾಹ್ಮಣ ಮಹಾಸಭಾ ಶತಮಾನೋತ್ಸವ ವರ್ಷದ ಸಂಭ್ರಮಾಚರಣೆ ಸಮಾರೋಪದಲ್ಲಿ ಮಾತನಾಡಿದರು. ವಿದ್ಯೆ, ದುಡ್ಡಿನ ಹಿಂದೆ ಹೋಗುತ್ತಿರುವ ಕಾಲಘಟ್ಟದಲ್ಲಿ ನೆಮ್ಮದಿ, ಗೌರವ ಸಿಗುತ್ತಿದೆಯೇ ಎಂಬುದನ್ನು ಎಲ್ಲರೂ ಆಲೋಚಿಸಬೇಕು. ವಿದ್ಯೆ, ದುಡ್ಡು ಬ್ರಾಹ್ಮಣತ್ವಕ್ಕೆ ಅಡ್ಡಿ ಆಗುತ್ತಿದೆ. ಸಾಮಾಜಿಕವಾಗಿ ನಾವೆಲ್ಲರೂ ಬ್ರಾಹ್ಮಣರಾಗಿದ್ದೇವೆ ಹೊರತು ಆಧ್ಯಾತ್ಮಿಕವಾಗಿ ಅಲ್ಲ. ಆಧ್ಯಾತ್ಮಿಕ ಬ್ರಾಹ್ಮಣತ್ವದ ಚಿಂತನೆ ಬೆಳೆಯಬೇಕು ಎಂದು ತಿಳಿಸಿದರು.

ಬ್ರಾಹ್ಮಣ ಸಮುದಾಯದ ಜನರಿಗೆ ತಂತ್ರಜ್ಞಾನ, ಚರ್ಚೆಯಲ್ಲಿ ಪಾಲ್ಗೊಳ್ಳಲು ಸಮಯ ಇರುತ್ತದೆ. ಆದರೆ ಸಂಧ್ಯಾವಂದನೆ ಮಾಡಲು ಸಮಯ ಇರುವುದಿಲ್ಲ. ಕೆಲಸದ ಒತ್ತಡ ಸೇರಿ ವಿವಿಧ ಕಾರಣಗಳಿಂದ ಸಂಧ್ಯಾವಂದನೆ ಮಾಡುವುದಿಲ್ಲ. ಸಂಪ್ರದಾಯ ಆಚರಣೆ ಮಾಡಬೇಕು. ವೈದಿಕರಿಗೆ ನಾವೇ ಸರಿಯಾಗಿ ಗೌರವ ಕೊಡುತ್ತಿಲ್ಲ. ಇನ್ನೂ ಬೇರೆಯವರಿಂದ ನೀರಿಕ್ಷಿಸಲು ಸಾಧ್ಯವೇ? ವೈದಿಕರು ಸ್ವಾಭಿಮಾನದಿಂದ ಜೀವಿಸುವ ವಾತಾವರಣ ರೂಪಿಸಬೇಕು ಎಂದರು.

ಮುಂದುವರಿದಿರುವ ಸಮುದಾಯ ಬ್ರಾಹ್ಮಣ ಎಂದೇ ಕರೆಸಿಕೊಳ್ಳುವ ಜನರು ಧರ್ಮಪಾಲನೆ ಮಾಡದಿದ್ದರೆ ಹಿಂದುಳಿದ ಜನಾಂಗ ಆಗುತ್ತೇವೆ. ಬ್ರಾಹ್ಮಣ ಸಂಪ್ರದಾಯ ಆಚರಣೆಗಳನ್ನು ಅನುಸರಿಸಿ ಪಾಲಿಸುವ ಅಗತ್ಯವಿದೆ. ಯುವಜನತೆ ಸಾಂಸ್ಕೃತಿಕ ಹಾಗೂ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರಿ ಉದ್ಯೋಗಗಳಲ್ಲಿ ಅವಕಾಶ ಇಲ್ಲವೆಂದು ಅರ್ಜಿ ಹಾಕುವುದಕ್ಕೆ ಮುಂದಾಗುವುದಿಲ್ಲ. ವ್ಯವಸ್ಥೆ ದೂಷಿಸುತ್ತ ಕೂರುತ್ತಾರೆ. ಆದರೆ ಮೆರಿಟ್ ಆಧಾರದಲ್ಲಿಯೂ ಉದ್ಯೋಗ ಪಡೆದುಕೊಳ್ಳಲು ಅವಕಾಶ ಇರುತ್ತದೆ. ಇರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉದ್ಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ಕರ್ಣಾಟಕ ಬ್ಯಾಂಕ್ ಸಿಇಒ ಎಂ.ಎಸ್.ಮಹಾಬಲೇಶ್ವರ್ ಮಾತನಾಡಿ, ಬ್ರಾಹ್ಮಣ ಎಂದರೆ ಜಾತಿವಾಚಕ ಎನ್ನುವುದು ಬಹುತೇಕರ ಅನಿಸಿಕೆ. ಆದರೆ ಬ್ರಾಹ್ಮಣ ವೃತ್ತಿವಾಚಕ ಆಗಿದ್ದು, ಬ್ರಾಹ್ಮಣತ್ವ ಹುಟ್ಟಿನಿಂದ ಬರುವುದಿಲ್ಲ. ಕರ್ಮದಿಂದ ಬರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಇಬ್ಬರು ಮಕ್ಕಳು ಹೊಂದುವುದು ಅವಶ್ಯಕ:ಬ್ರಾಹ್ಮಣ ಸಮುದಾಯದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿ ಶೇ.5ರಷ್ಟಿದ್ದ ಬ್ರಾಹ್ಮಣ ಸಮುದಾಯ ಶೇ. 2-3ಕ್ಕೆ ಬಂದಿದೆ. ಇದೇ ರೀತಿ ಅನೇಕ ವರ್ಷ ಕಳೆದರೆ ಬ್ರಾಹ್ಮಣ ಸಮುದಾಯದ ಜನರೇ ಇರುವುದಿಲ್ಲ. ಒಂದೇ ಮಗು ಸಾಕೆಂಬ ನಿರ್ಣಯದಿಂದ ಸಮಸ್ಯೆ ಉದ್ಭವಿಸಿದೆ ಎಂದು ಎನ್.ಕುಮಾರ್ ಹೇಳಿದರು. ದೇಶದಲ್ಲಿ ಸಂಸ್ಕೃತಿ, ಪರಂಪರೆ ಉಳಿಸಿಕೊಂಡು ಬರುತ್ತಿರುವವರು ಬ್ರಾಹ್ಮಣರು. ಮುಂದಿನ ಪೀಳಿಗೆಗೆ ಸಂಸ್ಕೃತಿ ಪರಿಚಯಿಸಲು ಬ್ರಾಹ್ಮಣರೇ ಇರದಿದ್ದರೆ ಹೇಗೆ, ಇಬ್ಬರು ಮಕ್ಕಳು ಹೊಂದುವುದು ಅವಶ್ಯಕ. ಪಾಲಕರು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಯುವಜನತೆಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಹೈಕೋರ್ಟ್ ಹಿರಿಯ ವಕೀಲ ಅಶೋಕ್ ಹಾರ್ನಳ್ಳಿ, ಶ್ರೀ ಗಾಯತ್ರಿ ಪ್ರತಿಷ್ಠಾನದ ಡಾ. ಎಚ್.ವಿ.ಸುಬ್ರಹ್ಮಣ್ಯ, ಅರಸಾಳು ರಂಗನಾಥರಾವ್, ಬೆನಕ ಭಟ್ಟರು, ಚಂದ್ರಶೇಖರ ಭಟ್, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್ ಇದ್ದರು.