ಆಧುನಿಕ ಕೃಷಿ ಪದ್ಧತಿಯಿಂದ ಅಭಿವೃದ್ಧಿ

ಮಾಲೂರು: ರೈತರು ಆಧುನಿಕ ಕೃಷಿ ಪದ್ಧತಿ ಮೂಲಕ ಸಮಗ್ರ ಕೃಷಿ ಅಳವಡಿಸಿಕೊಂಡರೆ ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಪ್ರಗತಿ ಹೊಂದಬಹುದು ಎಂದು ಕೃಷಿ ವಿಜ್ಞಾನಿ ಡಾ.ನಾಗರಾಜ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಭವನದ ಮೈದಾನದಲ್ಲಿ ಜಿಪಂ, ತಾಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಅಭಿಯಾನ-2019ರ ಕೃಷಿ ವಸ್ತು ಪ್ರದರ್ಶನ ಹಾಗೂ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.

ರೈತರಿಗೆ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡಿ ಯೋಜನೆಗಳ ಯಶಸ್ಸಿಗೆ ಸಹಕಾರ ನೀಡಬೇಕು. ಕೃಷಿ ಇಲಾಖೆಗೆ ಸರ್ಕಾರದಿಂದ ಬರುವಂತಹ ಪ್ರತಿಯೊಂದು ಯೋಜನೆಗಳ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡಿ ಅರ್ಹರಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ತಿಳಿಸಿದರು.

ಜಮೀನಿಗೆ ರಸಾಯನಿಕ ಔಷಧಗಳನ್ನು ಬಳಕೆ ಮಾಡುತ್ತಿರುವುದರಿಂದ ಕೃಷಿ ಭೂಮಿ ಹಾಳಗುತ್ತಿದೆ. ರೈತರು ಹವಾಮನಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆಯಬೇಕು ಎಂದರು.

ಕೃಷಿ ಅಭಿಯಾನ ಕಾರ್ಯಕ್ರಮ 3 ದಿನಗಳ ಕಾಲ ನಡೆಯಲಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಇಲಾಖಾವಾರು ಮಾಹಿತಿ ನೀಡಿಲಿದ್ದಾರೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯರಾಣಿ ತಿಳಿಸಿದರು.

ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇಲಾಖೆಗಳ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಜಿಪಂ ಸದಸ್ಯೆ ಗೀತಾ ವೆಂಕಟೇಶ್​ಗೌಡ, ಎಚ್.ವಿ.ಶ್ರೀನಿವಾಸ್, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ತಾಪಂ ಸದಸ್ಯರಾದ ಶ್ರೀನಾಥ್, ಎಪಿಎಂಸಿ ಸದಸ್ಯರಾದ ಸಂತೇಹಳ್ಳಿ ಸುರೇಶ್, ಪಟ್ಲಪ್ಪ, ಚಂದ್ರಶೇಖರ್, ಕೃಷಿ ಸಹಾಯಕ ಅಧಿಕಾರಿ ಆಗ್ರಿ ಮುನಿರಾಜು, ವಿಜ್ಞಾನಿ ಡಾ.ಅಂಬಿಕಾ, ಪಶು ಇಲಾಖೆ ಅಧಿಕಾರಿ ಡಾ.ರೆಡ್ಡಪ್ಪ ಇದ್ದರು.

Leave a Reply

Your email address will not be published. Required fields are marked *