ಆಧಾರ್ ತಿದ್ದುಪಡಿ ಮಸೂದೆಗೆ ಅಸ್ತು

ನವದೆಹಲಿ: ಆಧಾರ್ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಸಮ್ಮತಿ ಸೂಚಿಸಿದೆ. ಮುಂದಿನ ಅಧಿವೇಶನದಲ್ಲಿ ಇದನ್ನು ಮಂಡನೆ ಮಾಡಲು ನಿರ್ಧರಿಸಲಾಗಿದೆ. ಇದು ಸಂಸತ್​ನಲ್ಲಿ ಅನುಮೋದನೆ ಪಡೆದುಕೊಂಡರೆ ಬ್ಯಾಂಕ್ ಖಾತೆ ತೆರೆಯಲು ಮತ್ತು ಮೊಬೈಲ್ ಫೋನ್ ಸಂಪರ್ಕ ಪಡೆದುಕೊಳ್ಳಲು ಆಧಾರ್ ಗುರುತಿನ ಚೀಟಿ ಸಲ್ಲಿಸಬೇಕಾಗುತ್ತದೆ. 2016ರ ಆಧಾರ್ ಕಾಯ್ದೆ ತಿದ್ದುಪಡಿ ಮತ್ತು 2019ರ ಮಾರ್ಚ್​ನಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆ ಬದಲಾಗಿ ಈ ಮಸೂದೆ ಮಂಡಿಸಲಾಗುತ್ತಿದೆ.

ಮಾನದಂಡಗಳನ್ನು ಉಲ್ಲಂಘಿಸುವವ ರಿಗೆ ಮತ್ತು ಖಾಸಗಿತನಕ್ಕೆ ಧಕ್ಕೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವುದಕ್ಕೂ ಮಸೂದೆಯಲ್ಲಿ ಅವಕಾಶ ನೀಡಲಾಗಿರುತ್ತದೆ. ನಿಬಂದನೆಗಳನ್ನು ಉಲ್ಲಂಘಿಸುವವರಿಗೆ 1 ಕೋಟಿ ರೂ. ದಂಡ ವಿಧಿಸುವುದಕ್ಕೆ ಅವಕಾಶವಿದೆ. ಉಲ್ಲಂಘನೆ ಮುಂದುವರಿಸಿದಲ್ಲಿ ದಿನಕ್ಕೆ 10 ಲಕ್ಷ ರೂ.ನಂತೆ ಹೆಚ್ಚುವರಿ ದಂಡ ವಿಧಿಸಬಹುದಾಗಿದೆ. ಸೆಂಟ್ರಲ್ ಐಡೆಂಟಿಟಿ ಡೇಟಾ ಸಂಗ್ರಹಕ್ಕೆ ಅನಧಿಕೃತ ಪ್ರವೇಶ ಮತ್ತು ಡೇಟಾ ಟ್ಯಾಂಪರಿಂಗ್​ಗೆ ಜೈಲುಶಿಕ್ಷೆಯನ್ನು ಈಗಿರುವ 3 ವರ್ಷದಿಂದ 10 ವರ್ಷಕ್ಕೆ ವಿಸ್ತರಿಸಲಾಗಿದೆ.

ಮೀಸಲಾತಿ ಮಸೂದೆೆಗೆ ಒಪ್ಪಿಗೆ: ಜಮ್ಮು- ಕಾಶ್ಮೀರ ಮೀಸಲಾತಿ(ತಿದ್ದುಪಡಿ) ಮಸೂದೆ-2019ಕ್ಕೂ ಸಂಪುಟ ಸಮ್ಮತಿ ಒಪ್ಪಿಗೆ ಸೂಚಿಸಿದೆ. ಕಾಶ್ಮೀರದ ಗಡಿ ಭಾಗದಲ್ಲಿ ವಾಸವಾಗಿರುವ ಜನರಿಗೆ ನೇರ ನೇಮಕಾತಿ, ಪದೋನ್ನತಿ ಮತ್ತು ಹಲವು ವೃತ್ತಿಪರ ಕೋರ್ಸ್​ಗಳಿಗೆ ದಾಖಲಾತಿ ಮುಂತಾದ ಸೌಲಭ್ಯಗಳು ಸಿಗಲಿವೆ. ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ 7000 ಸ್ಥಾನಗಳಿಗೆ ಶಿಕ್ಷಕರ ನೇಮಕಾತಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

ಕಾಶ್ಮೀರ ರಾಷ್ಟ್ರಪತಿ ಆಡಳಿತ ವಿಸ್ತರಣೆ

ಜಮ್ಮು- ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳ ಅವಧಿಗೆ ಮುಂದುವರಿಸಲು ನಿರ್ಧರಿಸಲಾಗಿದೆ. 2019ರ ಜುಲೈ 3ರಿಂದ ಇದು ಅನ್ವಯವಾಗಲಿದೆ.

2 Replies to “ಆಧಾರ್ ತಿದ್ದುಪಡಿ ಮಸೂದೆಗೆ ಅಸ್ತು”

Comments are closed.