ರಾಣೆಬೆನ್ನೂರ: ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ನೋಂದಣಿ ಸೇವೆಯು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತೆರೆದಿರುವ ಬಾಪೂಜಿ ಸೇವಾ ಕೇಂದ್ರದ ನೂರು ಸೇವೆಗಳಲ್ಲಿ ಸೇರ್ಪಡೆಯಾಗದ ಕಾರಣ ಗ್ರಾಮೀಣ ಜನತೆ ಪರದಾಡುವಂತಾಗಿದೆ. ನಾಡ ಕಚೇರಿಗಳಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶವಿದ್ದರೂ ಸರ್ವರ್ ಹಾಗೂ ವಿದ್ಯುತ್ ಸಮಸ್ಯೆಯಿಂದ ಸೇವೆ ಉಪಯೋಗಕ್ಕಿಲ್ಲದಂತಾಗಿದೆ.
ಒಂದೇ ಸೂರಿನಡಿ ನೂರು ಸೇವೆ ಒದಗಿಸುವ ದೃಷ್ಟಿಯಿಂದ ಗ್ರಾಪಂನಲ್ಲಿ ಬಾಪೂಜಿ ಸೇವಾ ಕೇಂದ್ರ ತೆರೆಯಲಾಗಿದೆ. ಆದರೆ, ಇದರಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ, ನೋಂದಣಿ ಸೇವೆ ಸೇರ್ಪಡೆಯಾಗದ ಕಾರಣ ಹಳ್ಳಿಗಳ ಜನತೆ ಪರದಾಡುವ ಸ್ಥಿತಿ ನಿರ್ವಣವಾಗಿದೆ.
ನೂರರಲ್ಲಿ ಸೇರಿಸಿ
ತಾಲೂಕಿನ ಕುಪ್ಪೇಲೂರ, ಮೇಡ್ಲೇರಿ, ರಾಣೆಬೆನ್ನೂರ – ಈ ಮೂರು ಸ್ಥಳಗಳಲ್ಲಿ ನಾಡಕಚೇರಿಗಳು ಇವೆ. ಆದರೆ, ಗ್ರಾಮೀಣ ಭಾಗದಲ್ಲಿ ಸರ್ವರ್, ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದರಿಂದ ಆಧಾರ್ ತಿದ್ದುಪಡಿಗೆ ಸಿಬ್ಬಂದಿ ಮುಂದಾಗುತ್ತಿಲ್ಲ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆಧಾರ್ ತಿದ್ದುಪಡಿ, ನೋಂದಣಿ ಸೇವೆ ಆರಂಭಿಸಿದರೆ ಹಳ್ಳಿಗರಿಗೆ ಅನುಕೂಲವಾಗಲಿದೆ. ಈಗ ನಿತ್ಯವೂ ಬೆಳಗ್ಗೆ ಆಟೋ, ಟಂಟಂ ಮಾಡಿಕೊಂಡು ರಾಣೆಬೆನ್ನೂರ ನಗರದ ಅಂಚೆ ಕಚೇರಿಗೆ ಅಲೆಯುತ್ತಿದ್ದೇವೆ. ಆದರೆ, ಕೆಲವರು ರಾತ್ರಿಯೇ ಬಂದು ಸರದಿ ಸಾಲಿನಲ್ಲಿ ಮಲಗುತ್ತಿರುವ ಕಾರಣ ನಸುಕಿನ ಜಾವ ಬರುವವರಿಗೆ ಅರ್ಜಿ ಫಾಮ್ರ್ ಸಹ ದೊರೆಯುತ್ತಿಲ್ಲ ಎಂಬುದು ಗ್ರಾಮೀಣ ಜನರ ದೂರಾಗಿದೆ.
ಬದಲಾಗಿಲ್ಲ ಪರಿಸ್ಥಿತಿ
ಇದೀಗ ಶಾಲೆ-ಕಾಲೇಜ್ಗಳ ವಸತಿ ನಿಲಯಕ್ಕೆ ಅರ್ಜಿ ಹಾಕಲು ಹಾಗೂ ವಿದ್ಯಾರ್ಥಿಗಳ ಸಹಾಯಧನದ ಅರ್ಜಿಗಾಗಿ, ಕೃಷಿ ಸೌಲಭ್ಯಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿ ಕೇಳುತ್ತಿದ್ದಾರೆ. ಆದರೆ, ಆಧಾರ್ ಕಾರ್ಡ್ನಲ್ಲಿ ಕೊಂಚ ಬದಲಾವಣೆಯಿದ್ದರೆ ಯಾವ ಅರ್ಜಿಗಳ ಸ್ವೀಕೃತಿ ಆಗುವುದಿಲ್ಲ. ಆದ್ದರಿಂದ ಆಧಾರ್ ತಿದ್ದುಪಡಿ ಮಾಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ನಿತ್ಯ ಕೇವಲ 10ರಿಂದ 40 ಅರ್ಜಿಗಳನ್ನು ಸ್ವೀಕರಿಸುತ್ತಿರುವ ಕಾರಣ ತ್ವರಿತ ಅರ್ಜಿ ವಿಲೇವಾರಿಗೆ ಹಿನ್ನಡೆಯಾಗಿದೆ. ಅಲ್ಲದೆ, ಮೊದಲಿಗೆ ಬಂದವರಿಗೆ ಸೀಮಿತ ಅರ್ಜಿ ಫಾಮ್ರ್ ನೀಡುತ್ತಿರುವುದರಿಂದ ಜನತೆ ಅಂಚೆ ಕಚೇರಿ, ಮಿನಿ ವಿಧಾನಸೌಧ ಎದುರು ರಾತ್ರಿಯೇ ಹಾಸಿಗೆ ಸಮೇತ ಬಂದು ಸರದಿ ಸಾಲಿನಲ್ಲಿ ನಿದ್ದೆ ಮಾಡುವ ಪರಿಸ್ಥಿತಿ ಮುಂದುವರಿದಿದೆ.
ಸ್ಪಂದಿಸದ ಇಬ್ಬರು ಸಚಿವರು
2-3 ತಿಂಗಳಿಂದ ಜಿಲ್ಲೆಯಲ್ಲಿ ಆಧಾರ್ ಕಾರ್ಡ್ಗಾಗಿ ಜನತೆ ಸಂಕಷ್ಟ ಎದುರಿಸುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಈವರೆಗೆ ಎಚ್ಚೆತ್ತುಕೊಂಡಿಲ್ಲ. ಹೆಚ್ಚುವರಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುವ ಮಾಹಿತಿಯನ್ನು ಆಯಾ ತಾಲೂಕಿನ ತಹಸೀಲ್ದಾರರು ಹೇಳುತ್ತಿದ್ದಾರೆ ಹೊರತು ಅದು ಕಾರ್ಯರೂಪಕ್ಕೆ ಬಂದಿಲ್ಲ. ಇನ್ನು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಹಾಗೂ ಪೌರಾಡಳಿತ ಸಚಿವ ಆರ್. ಶಂಕರ ಇದ್ದರೂ ಪ್ರಯೋಜನ ಇಲ್ಲದಂತಾಗಿದೆ. ಇಬ್ಬರಲ್ಲಿ ಒಬ್ಬರೂ ಆಧಾರ್ ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
ರಾತ್ರಿ 12 ಗಂಟೆಗೆ ಬಂದು ಸರದಿ ಸಾಲಿನಲ್ಲಿ ಮಲಗಿದ್ದೇವೆ. ಅರ್ಜಿ ಫಾಮರ್್ಗಾಗಿ ಕಾಯ್ದು ಸುಸ್ತಾಗಿ ಹೋಗುತ್ತಿದ್ದೇವೆ. ಆದರೂ ಅರ್ಜಿ ಫಾಮ್ರ್ ಸಿಗುತ್ತಿಲ್ಲ. ಗ್ರಾಪಂಗೆ ಈ ಸೇವೆ ವಿಸ್ತರಿಸಿದರೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿರುವ ಇಬ್ಬರು ಸಚಿವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸ್ಪಂದಿಸಬೇಕು.
| ಶಿವಪ್ಪ ಗೌಡ್ರ, ಕುಪ್ಪೇಲೂರ ಗ್ರಾಮಸ್ಥ
ಆಧಾರ್ ತಿದ್ದುಪಡಿಯನ್ನು ಗ್ರಾಪಂನಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಿಗೆ ನೀಡಿಲ್ಲ. ನಾಡಕಚೇರಿಯಲ್ಲಿ ಮಾತ್ರ ಈ ಸೌಲಭ್ಯವಿದೆ. ಆದರೆ, ನಾಡಕಚೇರಿಯಲ್ಲಿ ಸರ್ವರ್ ಸಮಸ್ಯೆಯಿರುವ ಕಾರಣ ಎಲ್ಲರೂ ಅನಿವಾರ್ಯವಾಗಿ ನಗರಕ್ಕೆ ಬರುತ್ತಿದ್ದಾರೆ.
| ಎಸ್.ಎಂ. ಕಾಂಬಳೆ, ರಾಣೆಬೆನ್ನೂರ ತಾಪಂ ಇಒ