ಆಧಾರ್​ಗಾಗಿ ತಪ್ಪದ ಅಲೆದಾಟ

ನರೇಗಲ್ಲ: ಆಧಾರ್ ತಿದ್ದುಪಡಿಗಾಗಿ ಅಲೆದಾಡುತ್ತಿರುವ ಹೋಬಳಿ ವ್ಯಾಪ್ತಿಯ ಸಾರ್ವಜನಿಕರ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಸರ್ಕಾರದ ಸೌಲಭ್ಯ ಸದ್ಬಳಕೆ ಹಾಗೂ ದಾಖಲೆಗಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಕಾರ್ಡ್​ನಲ್ಲಿ ಉಂಟಾದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಉರಿ ಬಿಸಿಲನ್ನೂ ಲೆಕ್ಕಿಸದೆ ಜನರು ಕಚೇರಿಗೆ ಅಲೆದಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಉಪ ತಹಸೀಲ್ದಾರ್ ಕಚೇರಿಯಲ್ಲಿನ ಆಧಾರ್ ನೋಂದಣಿ ಕೇಂದ್ರ ಸ್ಥಗಿತವಾಗಿ ಮೂರು ತಿಂಗಳು ಕಳೆದರೂ ಇನ್ನೂ ಪುನಾರಂಭವಾಗಿಲ್ಲ. ಒಂದು ತಿಂಗಳಿನಿಂದ ಅಂಚೆ ಕಚೇರಿಯಲ್ಲಿ ವಾರದ ಎರಡು ದಿನ (ಸೋಮವಾರ ಮತ್ತು ಗುರುವಾರ) ಮಾತ್ರ ನೋಂದಣಿ ಮಾಡಲಾಗುತ್ತಿದೆ. ಅದು ಕೂಡ ದಿನಕ್ಕೆ 20 ಜನರಿಗೆ ಮಾತ್ರ.

ಈ ಹಿಂದೆ ಆಧಾರ್ ನೋಂದಣಿ ಮಾಡಿಸುವ ಸಂದರ್ಭದಲ್ಲಿ ಹೆಸರು, ವಿಳಾಸ, ವಯಸ್ಸು, ಮೊಬೈಲ್ ಸಂಖ್ಯೆ ಇತರೆ ಮಾಹಿತಿಗಳು ತಪ್ಪಾಗಿ ನಮೂದಾಗಿವೆ. ಮದುವೆಯಾದ ಮಹಿಳೆಯರ ಆಧಾರ್​ನಲ್ಲಿ ತಂದೆಯ ಹೆಸರು, ತವರು ಮನೆ ವಿಳಾಸವಿದೆ. ಅದನ್ನು ಬದಲಾಯಿಸುವುದು ಸೇರಿ ಇತರೆ ತಿದ್ದುಪಡಿಗಳಿವೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆಧಾರ್ ನೋಂದಣಿಯಾಗಿದ್ದು, ಅವರ ಆಧಾರ್ ಕಾರ್ಡ್​ನಲ್ಲಿ ಇಂಗ್ಲಿಷ್​ನಲ್ಲಿ ಮಾತ್ರ ಹೆಸರಿದೆ. ಆದರೆ, ಆರ್​ಟಿಇ ಹಾಗೂ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹೆಸರಿರಬೇಕು. ಇಲ್ಲದಿದ್ದರೆ ಹೆಸರು ಸೇರ್ಪಡೆಯಾಗುತ್ತಿಲ್ಲ.

ಗೊಂದಲದಲ್ಲಿ ಪಾಲಕರು: ಆರ್​ಟಿಇಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾ. 20ರಿಂದ ಪ್ರಾರಂಭವಾಗಲಿದೆ. ಆಧಾರ್ ಕಾರ್ಡ್​ನಲ್ಲಿ ಕನ್ನಡದಲ್ಲಿ ಹೆಸರು ಇರಬೇಕು. ಆಧಾರ್ ತಿದ್ದುಪಡಿ ಮಾಡಿಸುವಾಗ ಮಕ್ಕಳ ಬೆರಳಿನ ಗುರುತು (ಬಯೋಮೆಟ್ರಿಕ್) ಹೊಂದಾಣಿಕೆಯಾಗುತ್ತಿಲ್ಲ. ಹೊಂದಾಣಿಕೆಯಾದರೂ ಹೊಸ ಕಾರ್ಡ್​ಬರುತ್ತಿಲ್ಲ. ಆನ್ ಲೈನ್​ನಲ್ಲಿ ಪರೀಕ್ಷಿಸಿದರೆ, ನಿಮ್ಮ ತಿದ್ದುಪಡಿ ರಿಜೆಕ್ಟ್ ಆಗಿದೆ ಎಂದು ತೋರಿಸುತ್ತಿದೆ. ಮತ್ತೊಮ್ಮೆ ತಿದ್ದುಪಡಿ ಮಾಡಿಸಲು ಸರದಿಯಲ್ಲಿ ನಿಲ್ಲಬೇಕು. ಅಂದಿನ ಪಾಳೆ ಬರದಿದ್ದರೆ ಮತ್ತೆ ಮುಂದಿನ ವಾರ ಕಚೇರಿಗೆ ಅಲೆಯಬೇಕು. ಹೀಗಾಗಿ, ಅಧಿಕಾರಿಗಳು ಮುತುವರ್ಜಿವಹಿಸಿ ಗೊಂದಲಕ್ಕೆ ತೆರೆ ಎಳೆಯಬೇಕು ಎನ್ನುವುದು ಪಾಲಕರ ಒತ್ತಾಯವಾಗಿದೆ.

ಈ ಹಿಂದೆ ನರೇಗಲ್ಲ ಉಪ ತಹಸೀಲ್ದಾರ್ ಕಚೇರಿಯಲ್ಲಿ ಆಧಾರ್ ನೋಂದಣಿ ಕೇಂದ್ರದಲ್ಲಿ ನರೇಗಲ್ಲ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ ಸೇರಿದಂತೆ 37 ಗ್ರಾಮಗಳ ಜನರು ಆಧಾರ್ ತಿದ್ದುಪಡಿಗಾಗಿ ಬರುತ್ತಿದ್ದರು. ನಂತರ ಗ್ರಾ.ಪಂ. ಕಚೇರಿಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿತ್ತು. ಆದರೆ, ಗ್ರಾ.ಪಂ ಆಧಾರ್ ನೋಂದಣಿ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಆಧಾರ್ ನೋಂದಣಿ, ತಿದ್ದುಪಡಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನರೇಗಲ್ಲನ ಉಪ ತಹಸೀಲ್ದಾರ್ ಕಚೇರಿಯ ಆಧಾರ್ ನೋಂದಣಿ ಕೇಂದ್ರ ತಾಂತ್ರಿಕ ಕಾರಣಗಳಿಂದ ಬಂದ್ ಆಗಿತ್ತು. ಎರಡು ದಿನಗಳ ಹಿಂದೆ ಸರಿ ಮಾಡಿದರೂ ಮತ್ತೆ ಪ್ರಿಂಟರ್ ಕೆಟ್ಟಿದೆ. ಆಧಾರ್ ಪ್ರಾಧಿಕಾರದಿಂದ ದುರಸ್ತಿಯಾಗಬೇಕು. ದುರಸ್ತಿಗಾಗಿ ಈಗಾಗಲೇ ಮೇಲಧಿಕಾರಿಗಳ ಗಮಕ್ಕೆ ತರಲಾಗಿದೆ. ಶೀಘ್ರವೇ ಆಧಾರ್ ನೋಂದಣಿ ಪ್ರಾರಂಭಿಸಲಾಗುತ್ತದೆ.
| ಗುರುಸಿದ್ದಯ್ಯ ಹಿರೇಮಠ, ತಹಸೀಲ್ದಾರ್

ಆಧಾರ್​ನಲ್ಲಿ ನನ್ನ ಹೆಸರು ತಪ್ಪಾಗಿ ನಮೂದಾಗಿದೆ. ಅದನ್ನು ತಿದ್ದುಪಡಿಮಾಡಲು ಗುರುವಾರ ಬೆಳಗ್ಗೆಯೇ ಅಂಚೆ ಕಚೇರಿಗೆ ಬಂದಿದ್ದೆ. ಆದರೆ, ಕೇವಲ 20 ಜನರಿಗೆ ಮಾತ್ರ ಅವಕಾಶವಿದ್ದು, ಮತ್ತೆ ಸೋಮವಾರ ಬರುವಂತೆ ತಿಳಿಸಿದ್ದಾರೆ. ಆದ್ದರಿಂದ ಈ ಹಿಂದಿನಂತೆ ಖಾಸಗಿಯವರಿಗೂ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಿದರೆ ತಿದ್ದುಪಡಿ, ನೋಂದಣಿ ಸಮಸ್ಯೆ ಬಗೆಹರಿಯಲಿದೆ.
| ರಾಮಣ್ಣ ಹಾಳಕೇರಿ, ಹಿರಿಯ ನಾಗರಿಕರು ನರೇಗಲ್ಲ