ಆದರ್ಶ ಜಿಲ್ಲೆಯನ್ನಾಗಿಸಲು ಕೈ ಜೋಡಿಸಿ

ಚಿಕ್ಕಬಳ್ಳಾಪುರ: ನಗರ ಸೇರಿ ಜಿಲ್ಲಾದ್ಯಂತ 63ನೇ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಿಲ್ಲಾಡಳಿತದಿಂದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಆದರೆ, ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ನಾಡಧ್ವಜ ಹಾರಿಸಲಿಲ್ಲ. ಬದಲಿಗೆ ಅಲಂಕೃತ ರಥದಲ್ಲಿ ಭುವನೇಶ್ವರಿ ಮಾತೆಯ ಮೆರವಣಿಗೆ ನಡೆಸಲಾಯಿತು. ಇನ್ನೂ ಸಚಿವರು ತೆರೆದ ವಾಹನದಲ್ಲಿ ಪಥ ಸಂಚಲನ ವೀಕ್ಷಿಸಿದರು. ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್ ಪಡೆ, ಮಹಿಳಾ ಪೊಲೀಸ್ ಪಡೆ, ಗೃಹರಕ್ಷಕ ದಳ, ಸೆಂಟ್ ಜಾನ್ ಇಂಗ್ಲಿಷ್ ಶಾಲೆ, ಕ್ವಯಟ್ ಕಾರ್ನರ್ ಶಾಲೆ, ಪಿಪಿಎಚ್​ಎಸ್, ಸೆಂಟ್ ಜೋಸೆಫ್, ಪ್ರೆಸಿಡೆನ್ಸಿ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಸರ್ ಎಂ.ವಿ.ಸ್ಮಾರಕ ಪ್ರೌಢಶಾಲೆ, ಭಾರತಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ ಪಥ ಸಂಚಲನ ಮೂಲಕ ಧ್ವಜ ಹಾಗೂ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿತು.

ಶಾಶ್ವತ ನೀರಾವರಿ ಯೋಜನೆಗೆ ಕ್ರಮ: ಚಿಕ್ಕಬಳ್ಳಾಪುರವನ್ನು ಆದರ್ಶ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮನವಿ ಮಾಡಿದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಕನ್ನಡ ನಾಡು, ನುಡಿ ಅಭಿವೃದ್ಧಿ, ಸಾಹಿತ್ಯ ಬೆಳವಣಿಗೆಗೆ ಜಿಲ್ಲೆಯ ಅನೇಕರು ನೀಡಿರುವ ಕೊಡುಗೆ ಅಪಾರ. ಆಂಧ್ರದ ಗಡಿಭಾಗದಲ್ಲಿದ್ದರೂ ಕನ್ನಡಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

ಹೈನುಗಾರಿಕೆ, ಕೃಷಿ, ರೇಷ್ಮೆ ಮತ್ತು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯು ಶಾಶ್ವತ ನೀರಾವರಿ ಸೌಲಭ್ಯ ಸಮಸ್ಯೆ ಎದುರಿಸುತ್ತಿದೆ. ಇದಕ್ಕೆ ಎತ್ತಿನಹೊಳೆ ಮತ್ತು ಎಚ್.ಎನ್.ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಚಿಕ್ಕಬಳ್ಳಾಪುರ ಬಯಲು ಬಹಿರ್ದೆಸೆಮುಕ್ತ ಜಿಲ್ಲೆಯನ್ನಾಗಿ ಘೊಷಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಎಚ್.ವಿ.ಮಂಜುನಾಥ್, ಜಿಲ್ಲಾಧಿಕಾರಿ ಅನಿರುಧ್ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್​ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ, ಜಿಪಂ ಉಪ ಕಾರ್ಯದರ್ಶಿ ಟಿ.ಎಂ.ಶಶಿಧರ್, ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಸಾರಿಗೆ ಸಂಸ್ಥೆ ಸೇರಿ ವಿವಿಧ ಇಲಾಖೆಗಳ ಸ್ತಬ್ಧಚಿತ್ರ ಮೆರವಣಿಗೆ ನಡೆಯಿತು.

ಗಮನಸೆಳದ ಆಕರ್ಷಕ ನೃತ್ಯ: ಸೆಂಟ್ ಜೋಸೆಫ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ(ಬಾರಿಸು ಕನ್ನಡ ಡಿಂಡಿಮವ), ನ್ಯೂ ಹೊರೈಜಾನ್ ಪ್ರೌಢಶಾಲೆ(ಕನ್ನಡ ನಾಡಿನ ಜೀವ ನದಿ ಕಾವೇರಿ), ಇಂಡಿಯನ್ ಪಬ್ಲಿಕ್ ಶಾಲೆ(ನಮ್ಮವ್ವಕಣೋ ಕನ್ನಡ), ಚಿಂತಾಮಣಿ ತಾಲೂಕು ರಾಗುಟ್ಟಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ಶಾಲೆ(ಕನ್ನಡವೇ ನಮ್ಮಮ್ಮ), ಶಿಡ್ಲಘಟ್ಟದ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳ(ಜೋಗದ ಸಿರಿ ಬೆಳಕಿನಲ್ಲಿ) ನೃತ್ಯ ಎಲ್ಲರ ಗಮನಸೆಳೆಯಿತು. ಪಥ ಸಂಚಲನದಲ್ಲಿ ವಾಪಸಂದ್ರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪ್ರಥಮ, ಪಿಪಿಎಚ್​ಎಸ್ ದ್ವಿತೀಯ, ಕ್ವಯಟ್ ಕಾರ್ನರ್ ಶಾಲೆ ತೃತೀಯ ಬಹುಮಾನ ಪಡೆಯಿತು.

ಪ್ರಶಸ್ತಿ ಪ್ರದಾನ: ಚಿಕ್ಕಬಳ್ಳಾಪುರ ತಾಲೂಕು ಎಸ್.ಗೊಲ್ಲಹಳ್ಳಿ ಗೊಂಬೆ ನಾರಾಯಣಪ್ಪ(ಜಾನಪದ ಕಲೆ), ಕೊತ್ತನೂರಿನ ಗೌರಮ್ಮ(ಕೃಷಿ), ಪಾಲರ್ ಪತ್ರಿಕೆ ಸಂಪಾದಕ ಬಿ.ಪುಟ್ಟರಾಜು(ಪತ್ರಿಕೋದ್ಯಮ), ಚಿಂತಾಮಣಿ ತಾಲೂಕು ತಳಗವಾರ ಆನಂದ್(ಸಂಗೀತ, ಪ್ರವಚನ, ಗಮಕ ಕಲೆ), ಗೌರಿಬಿದನೂರು ತಾಲೂಕು ಹೊಸೂರಿನ ಎಚ್.ಎಸ್.ವೆಂಕಟೇಶಮೂರ್ತಿ(ರಂಗಭೂಮಿ), ಶಿಡ್ಲಘಟ್ಟದ ಡಿ.ಜಿ.ಮಲ್ಲಿಕಾರ್ಜುನ( ಛಾಯಾಚಿತ್ರ ಗ್ರಾಹಕ) ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಹಾಯಕ ಸಬ್ ಇನ್ಸ್​ಪೆಕ್ಟರ್ ಸಿ.ಕೆ.ಮಂಜುನಾಥ್, ಆರ್.ಮಂಜುನಾಥ್, ಅಶ್ವತ್ಥಪ್ಪ, ಮುಖ್ಯ ಪೇದೆ ವೆಂಕಟರವಣ ಮತ್ತು ಪೇದೆ ಬಿ.ಕೆ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಶಾಸಕರ ಗೈರಿಗೆ ಆಕ್ರೋಶ: ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ಡಾ.ಕೆ.ಸುಧಾಕರ್ ಗೈರಾಗಿದ್ದರು. ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಆಗಮಿಸಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಆಂಗ್ಲ ಭಾಷೆಯಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯ ಹೇಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅನುದಾನ ಬಿಡುಗಡೆಗೆ ಕೇಂದ್ರ ಸ್ಪಂದನೆ: ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಅನುದಾನ ಬಿಡುಗಡೆ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದ 108 ತಾಲೂಕುಗಳನ್ನು ಬರಪೀಡಿತ ತಾಲೂಕುಗಳನ್ನಾಗಿ ಸರ್ಕಾರ ಘೊಷಿಸಿದೆ. 16,600 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ. ಇದರ ಪರಿಹಾರಕ್ಕೆ 2464 ಕೋಟಿ ರೂ. ಅನುದಾನ ನೀಡಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್​ಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ತ್ವರಿತವಾಗಿ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಸೂಕ್ತ ಪರಿಹಾರ ನೀಡುವ ಭರವಸೆ ಸಿಕ್ಕಿದೆ ಎಂದರು.