ಆತ್ಮವಿಶ್ವಾಸ ಹೆಚ್ಚಿಸುವ ಹೆಜ್ಜೆ

ಪೊಲೀಸ್ ಇಲಾಖೆಯಲ್ಲಿ ಬಹಳ ಕಾಲದಿಂದ ಚಾಲ್ತಿಯಲ್ಲಿದ್ದ ‘ಆರ್ಡರ್ಲಿ’ ಪದ್ಧತಿಗೆ ಅಂತ್ಯಹಾಡುವ ಪರಿಷ್ಕೃತ ಆದೇಶವನ್ನು ಸರ್ಕಾರ ಹೊರಡಿಸಿರುವುದು ಸಕಾರಾತ್ಮಕ ಬೆಳವಣಿಗೆಯೇ ಸರಿ. ಪೊಲೀಸ್ ಹುದ್ದೆಗೆ ಆಯ್ಕೆಯಾದ ನಂತರ, ಕಾನೂನು-ಸುವ್ಯವಸ್ಥೆ ಪಾಲನೆ, ಅಪರಾಧಿಗಳ ಪತ್ತೆ, ಅಪರಾಧ ನಿಯಂತ್ರಣದಂಥ ವಿಷಯಗಳಲ್ಲಿ ತರಬೇತಿ ಪಡೆಯುತ್ತಿದ್ದ ಪೇದೆಗಳು, ಹಿರಿಯ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ‘ತಮ್ಮದಲ್ಲದ’ ಚಾಕರಿ ಮಾಡಬೇಕಾಗಿ ಬರುತ್ತಿದ್ದುದು ಆರ್ಡರ್ಲಿ ಪದ್ಧತಿಯಲ್ಲಿ ಅಂತರ್ಗತವಾಗಿದ್ದ ಕರಾಳ ಪರಿಪಾಠ. ಅಧಿಕಾರಿಗಳ ಮಕ್ಕಳನ್ನು ಶಾಲೆಗೆ ಕರೆದೊಯ್ದು ಮರಳಿ ಕರೆತರುವುದರಿಂದ ಮೊದಲ್ಗೊಂಡು ಅವರ ಮನೆಗೆ ಹಾಲು-ತರಕಾರಿ-ದಿನಸಿ ಪದಾರ್ಥಗಳನ್ನು ತರುವುದು, ನಾಯಿಗಳ ಆರೈಕೆ- ಇವು ಪೇದೆಗಳು ಸ್ವಾಭಿಮಾನವನ್ನು ಬದಿಗೊತ್ತಿ ಮಾಡಬೇಕಾಗಿ ಬರುತ್ತಿದ್ದ ‘ವ್ಯಾಪ್ತಿಯಾಚೆಯ’ ಕೆಲಸಗಳು. ಇಷ್ಟಾಗಿಯೂ, ಶಿಸ್ತುಕ್ರಮ ಮತ್ತು ಅದು ತಂದೊಡ್ಡುವ ಅಭದ್ರತೆಯ ಭಯದ ಕಾರಣದಿಂದಾಗಿ ಈ ಅಮಾನವೀಯ ಪದ್ಧತಿಯ ವಿರುದ್ಧ ಬಡಪಾಯಿ ಪೇದೆಗಳು ದನಿಯೆತ್ತುವಂತಿರಲಿಲ್ಲ. ಸೇನೆಯಲ್ಲಿಯೂ ಸಹಾಯಕ ಪದ್ಧತಿ ವಿರುದ್ಧ ಇತ್ತೀಚೆಗೆ ಇಬ್ಬರು ಸೈನಿಕರ ವಿಡಿಯೋ ಸಂದೇಶ ಚರ್ಚೆಗೆ ಗ್ರಾಸವಾಗಿದ್ದು ಗಮನಾರ್ಹ.

ಈಗ ಸರ್ಕಾರ ಹೊರಡಿಸಿರುವ ಪರಿಷ್ಕೃತ ಆದೇಶದ ಅನುಸಾರ, ಹಿರಿಯ ಪೊಲೀಸ್ ಅಧಿಕಾರಿಗಳು ತಳಹಂತದ ಸಿಬ್ಬಂದಿಯನ್ನು ಇಂಥ ಕಾರ್ಯಗಳಿಗೆ ಬಳಸಿಕೊಳ್ಳುವಂತಿಲ್ಲ; ಬದಲಿಗೆ ಇಲಾಖೆಯಲ್ಲಿರುವ ಸಹಾಯಕರನ್ನು ಇಂಥ ಕೆಲಸಗಳಿಗೆ ನೇಮಿಸಿಕೊಳ್ಳಬಹುದಾಗಿದೆ.

ಉನ್ನತಾಧಿಕಾರಿಗಳ ಮನೆಯಲ್ಲಿ ಆರ್ಡರ್ಲಿಗಳಾಗಿ ಕೆಲಸ ಮಾಡುತ್ತಿದ್ದ ಸುಮಾರು 3 ಸಾವಿರ ಪೇದೆಗಳು ಈ ಸುದ್ದಿ ಕೇಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿರಲಿಕ್ಕೂ ಸಾಕು. ಕಾರಣ, ಭದ್ರತೆ, ಕಾನೂನು-ಸುವ್ಯವಸ್ಥೆ ಸಂಬಂಧಿತ ನಿಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ತಳಹಂತದ ಸಿಬ್ಬಂದಿ ಆರ್ಡರ್ಲಿಗಳಾಗಿಯೂ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯಿಂದಾಗಿ ಅಸಮಾಧಾನಪಟ್ಟುಕೊಳ್ಳು ತ್ತಿದ್ದುದು, ಅದು ವಿಭಿನ್ನ ನೆಲೆಗಟ್ಟುಗಳಲ್ಲಿ ಕಾರ್ಯಕ್ಷಮತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದುದು ವಾಡಿಕೆಯಾಗಿಬಿಟ್ಟಿತ್ತು. ಪೊಲೀಸ್ ಇಲಾಖೆ ಮಾತ್ರವೇ ಅಲ್ಲ, ವ್ಯವಸ್ಥೆಯ ಯಾವುದೇ ಇಲಾಖೆಯಲ್ಲಿ ತಳಹಂತದ ಸಿಬ್ಬಂದಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಉನ್ನತಾಧಿಕಾರಿಗಳಿಗೆ ಸಹಾಯಕರ ಅಗತ್ಯವಿರುತ್ತದೆ ಎಂಬುದೂ ನಿಜವೇ; ಆದರೆ ಅವರಿಗೆ ವಹಿಸಲಾಗುವ ಕೆಲಸದ ಸ್ವರೂಪ ಎಂಥದ್ದೂ ಎಂಬುದನ್ನೂ ಇಲ್ಲಿ ಪರಿಗಣಿಸಬೇಕಲ್ಲವೇ? ಬಗೆಬಗೆಯ ಒತ್ತಡಗಳ ನಡುವೆ ಕಾರ್ಯನಿರ್ವಹಿಸುವುದರ ಜತೆಗೆ, ಸ್ವಾಭಿಮಾನಕ್ಕೆ ಪೆಟ್ಟುನೀಡುವ ಆರ್ಡರ್ಲಿ ಕೆಲಸಗಳಲ್ಲೂ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ತಳಹಂತದ ಪೊಲೀಸ್ ಸಿಬ್ಬಂದಿಯದಾಗಿತ್ತು. ಹೀಗಾಗಿ ಜನಪರ ಧೋರಣೆ, ಜನಸ್ನೇಹಿ ವರ್ತನೆಗಳ ವಿಷಯ ಬಂದಾಗೆಲ್ಲ ‘ಪೊಲೀಸರಿಂದ ಅವನ್ನು ನಿರೀಕ್ಷಿಸಲಾಗದು’ ಎಂಬ ಅಭಿಪ್ರಾಯ ಜನಮಾನಸದಲ್ಲಿ ರೂಪುಗೊಂಡದ್ದಿದೆ. ಇದರ ಹಿನ್ನೆಲೆಯಲ್ಲಿ ಏನೇನು ಕಾರಣಗಳು, ಸೂಕ್ಷ್ಮಗಳು ಇದ್ದಿರಬಹುದು ಎಂಬುದನ್ನೂ ಒಮ್ಮೆ ಅವಲೋಕಿಸುವುದು ಅಗತ್ಯವಾಗಿತ್ತು. ಅಂಥದೊಂದು ಚಿಕಿತ್ಸಕ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಆರ್ಡರ್ಲಿ ಪದ್ಧತಿಯ ರದ್ದತಿಗೆ ಮುಂದಾಗಿರುವುದು ಪೊಲೀಸರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಹೆಜ್ಜೆಯೇ ಸರಿ. ಕಾಲಕ್ಕೆ ತಕ್ಕಂತೆ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳಿಗೆ, ನಿಯಮಗಳ ಪರಿಷ್ಕರಣೆಗೆ ಮುಂದಾಗಬೇಕಾಗಬೇಕಾಗುತ್ತದೆ ಎಂಬುದಕ್ಕೆ ಇದೊಂದು ಒಂದು ಉಲ್ಲೇಖಾರ್ಹ ಉದಾಹರಣೆ ಎಂದರೆ ಅತಿಶಯೋಕ್ತಿಯಲ್ಲ. ಪೊಲೀಸ್ ಸಿಬ್ಬಂದಿ ಈ ಆತ್ಮವಿಶ್ವಾಸದ ಚಿತ್ತಸ್ಥಿತಿಯನ್ನು ವರ್ಧಿಸಿಕೊಂಡು, ಅದನ್ನು ಕಾರ್ಯನಿರ್ವಹಣೆಯಲ್ಲೂ ತೋರಿಸುವಂತಾಗಲಿ. ಅವರು ಇನ್ನಷ್ಟು ಜನಪರವಾಗಿ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತಾದರೆ ಅದು ಸಮಾಜದ ಆರೋಗ್ಯಕ್ಕೇ ಪೂರಕವಲ್ಲವೇ?

Leave a Reply

Your email address will not be published. Required fields are marked *