ತಿಪಟೂರು:ವಿಜ್ಞಾನ ಸೃಷ್ಟಿಯ ರಹಸ್ಯ ಬೇಧಿಸಿದರೆ, ಕಲೆ, ಪ್ರಕೃತಿಯ ಅನ್ವೇಷಣೆ ಮಾಡುತ್ತೆ ಎಂದು ಕಲಾವಿದ ದಿಲಾವರ್ ರಾಮದುರ್ಗ ಹೇಳಿದರು.
ನಗರದ ಪಲ್ಲಾಗಟ್ಟಿ ಲೇಔಟ್ನಲ್ಲಿ ಜನಸ್ಪಂದನ ಟ್ರಸ್ಟ್ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ತಿಪಟೂರಿನ ಸಾಂಸತಿಕ ಪ್ರತಿನಿಧಿಗಳಿಗೆ ಗೌರವ ಸಮರ್ಪಣೆ ಜನ ಸಂಭ್ರಮದಲ್ಲಿ ಚಿತ್ರ ಕಲಾವಿದ ಎಸ್.ವಿಷ್ಣುಕುಮಾರ್ ಅವರಿಗೆ ಗೌರವ ಸಮರ್ಪಿಸಿ ಮಾತನಾಡಿದರು.
ಪ್ರತಿರೋಧ ಅಥವಾ ಪ್ರತಿಭಟನೆಯ ವಿಚಾರವಂತಿಕೆಯಿಂದ ಬರುವುದೇ ಕಲೆ. ಅಭಿವ್ಯಕ್ತಿ ಏಕೀಭವಿಸಿದಾಗ ಮಾತ್ರ ಉತ್ತಮ ಕಲೆ ರೂಪುಗೊಳ್ಳಲು ಸಾಧ್ಯ. ಇಂತಹ ಕಲೆ ಸಂತರಿಗೆ ಒಲಿಯಲು ಸಾಧ್ಯವಿಲ್ಲ. ಕಲೆಯ ಮೂಲಕ ಇತಿಹಾಸ ಬರೆಯಬಹುದು. ವಿಷ್ಣು ಕುಮಾರ್ರಲ್ಲಿ ಕಲೆಯ ಎಂದೆ ಅನ್ವೇಷಣೆ ಅಡಗಿದೆ. ಆತ್ಮವಂಚನೆ ಮಾಡಿಕೊಳ್ಳುವವರು ನಿಜವಾದ ಕಲಾವಿದರಾಗಲು ಸಾಧ್ಯವಿಲ್ಲ. ಚಿತ್ರ ಕಲಾವಿದರಾಗಿ ನಾಡು ಹೆಮ್ಮೆ ಪಡುವಂತಹ ಸಾಧನೆ ಮಾಡುತ್ತಿರುವ ತಿಪಟೂರಿನವರೇ
ಆದ ಎಸ್.ವಿಷ್ಣುಕುಮಾರ್ ಅವರನ್ನು ಗುರುತಿಸಿ ಜನ ಸಂಭ್ರಮ ಕಾರ್ಯಕ್ರಮದಲ್ಲಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ, ನಗರ ಮತ್ತು ತಾಲೂಕಿನ ಎಲ್ಲರ ಒತ್ತಾಸೆಯಿಂದ ರೂಪುಗೊಂಡ ಜನ ಸ್ಪಂದನ ಟ್ರಸ್ಟ್ ಇಂದಿಗೆ ಯಶಸ್ವಿ 6 ವರ್ಷಗಳನ್ನು ಪೂರೈಸಿದೆ. ಟ್ರಸ್ಟ್ ವತಿಯಿಂದ ನಾಟಕ, ಸಾಂಸತಿಕ ಚಟುವಟಿಕೆಗಳು, ಕರೊನಾ ಸಂದರ್ಭ ಅಶಕ್ತರಿಗೆ ನೆರವು, ನಾಡಿನ ಮತ್ತು ಇತಿಹಾಸದ ಪುಟಗಳಲ್ಲಿ ಉಳಿದಿರುವ ಎಲ್ಲ ಮಹನೀಯರ ಜಯಂತಿ ಸೇರಿ ನಾಡಿನಲ್ಲಿ ಸಾಂಸತಿಕ ವಲಯವನ್ನು ಜಾಗೃತಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗಿದೆ. ಈ ನಿಟ್ಟಿನಲ್ಲಿ ಜನ ಸ್ಪಂದನದ ಮೂಲಕ ತಿಪಟೂರಿನ ಸಾಂಸತಿಕ ಪ್ರತಿನಿಧಿಗಳನ್ನು ಗೌರವಿಸುವುದು ಹೆಮ್ಮೆಯ ಸಂಗತಿ. ತನ್ನೆತ್ತರಕ್ಕೆ ತನ್ನ ಸ್ನೇಹಿತನನ್ನೂ ಕರೆದೊಯ್ಯಬೇಕೆಂಬ ಅಭಿಲಾಷೆ ಉಳ್ಳವ ಮಾತ್ರ ನಿಜವಾದ ಸ್ನೇಹಿತ. ಸಾಂಸತಿಕ ಹಿರಿಮೆ ಸದಾ ಎಚ್ಚರದ ನಡೆಯಲಿ ಸಾಗಲಿ ಎಂದರು.
ಜಪಾನ್ ಮಾದರಿಯಲ್ಲಿ ನಗರ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳುವ ಸಂಕಲ್ಪ ಮಾಡಲಾಯಿತು. ನಾಡಿನ ಸಾಂಸತಿಕ ಪ್ರತಿನಿಧಿಗಳಾದ ಲೇಖಕ ಹಾಗೂ ಕಥೆಗಾರ ಎಸ್.ಗಂಗಾಧರಯ್ಯ, ಲೇಖಕ ಬಿಳಿಗೆರೆ ಕೃಷ್ಣಮೂರ್ತಿ, ಮೈಸೂರು ರಂಗಾಯಣದ ಸತೀಶ್ ತಿಪಟೂರು, ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಚಿತ್ರ್ರಕಲಾವಿದ ಎಸ್. ವಿಷ್ಣುಕುಮಾರ್, ನೃತ್ಯಗಾರ್ತಿ ಹಾಗೂ ಕವಯತ್ರಿ ವಾಣಿಸತೀಶ್, ರಂಗಭೂಮಿ ನಟಿ ಪಿ.ಆರ್.ರಾಜೇಶ್ವರಿ ಅವರುಗಳನ್ನು ಗೌರವಿಸಲಾಯಿತು.