ಆತಂಕ ಸೃಷ್ಟಿಸಿದ ಅನಗತ್ಯ ಓಡಾಟ

2 Min Read
ಆತಂಕ ಸೃಷ್ಟಿಸಿದ ಅನಗತ್ಯ ಓಡಾಟ
ಹುಕ್ಕೇರಿ ಪಟ್ಟಣದ ಡಿಸಿಸಿ ಬ್ಯಾಂಕ್ ಬಳಿ ದೈಹಿಕ ಅಂತರ ಮರೆತು ಸರತಿ ನಿಂತಿರುವ ಗ್ರಾಹಕರು.

ಹುಕ್ಕೇರಿ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಜನತಾ ಕರ್ಫ್ಯೂ ಘೋಷಿಸಿದೆ. ಆದರೆ, ಜನರು ಮಾತ್ರ ಅನಗತ್ಯವಾಗಿ ಹೊರಗೆ ಓಡಾಡುತ್ತಿರುವುದು ಹುಕ್ಕೇರಿ ತಾಲೂಕಿನ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ರೈತರಿಗೆ, ಗ್ರಾಹಕರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಜನರು ಮಾತ್ರ ಬ್ಯಾಂಕ್
ವ್ಯವಹಾರ, ಆಸ್ಪತ್ರೆ, ಔಷಧ ಖರೀದಿ ನೆಪ ಹೇಳಿಕೊಂಡು ಓಡಾಡುತ್ತಿದ್ದಾರೆ.

ಬ್ಯಾಂಕ್ ವ್ಯವಹಾರ, ಸರ್ಕಾರಿ ಕಚೇರಿಗಳಿಗೆ ವಿವಿಧ ಕೆಲಸಗಳ ನಿಮಿತ್ತ ಗ್ರಾಮೀಣ ಪ್ರದೇಶಗಳಿಂದ ಜನರು ಪಟ್ಟಣಕ್ಕೆ ಬರುತ್ತಿದ್ದಾರೆ. ಆದರೆ, ಮಾಸ್ಕ್ ಹಾಕಿಕೊಳ್ಳುತ್ತಿಲ್ಲ. ದೈಹಿಕ ಅಂತರ ಕಾಪಾಡಿಕೊಳ್ಳದೆ ವ್ಯವಹರಿಸುತ್ತಿದ್ದಾರೆ. ಬ್ಯಾಂಕ್‌ಗಳಲ್ಲಿ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕೆಲವರು ಜ್ವರ, ಕೆಮ್ಮು ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಇದರಿಂದಾಗಿ ಬ್ಯಾಂಕ್ ಸಿಬ್ಬಂದಿ, ಜನರಲ್ಲಿ ಆತಂಕ ಉಂಟು ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳ ಹೆಸರು ಹೇಳಿ ಓಡಾಟ: ಜನತಾ ಕರ್ಫ್ಯೂ ಘೋಷಿಸಿದರೂ ಕೆಲವರು ವಾಹನಗಳಲ್ಲಿ ಅನಗತ್ಯವಾಗಿ ಸಂಚರಿಸುವುದನ್ನು ಕೈಬಿಟ್ಟಿಲ್ಲ. ಆಸ್ಪತ್ರೆ, ಔಷಧ ಅಂಗಡಿ, ಬ್ಯಾಂಕ್ ಇನ್ನಿತರ ಕೆಲಸಗಳ ಹೆಸರು ಹೇಳಿಕೊಂಡು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಅದನ್ನು ಪ್ರಶ್ನಿಸಿ ವಾಹನ ವಶಕ್ಕೆ ಪಡೆದುಕೊಂಡರೆ ನೇರವಾಗಿ ಜನಪ್ರತಿನಿಧಿಗಳಿಂದ ನಮಗೆ ಹೇಳಿಸುತ್ತಿದ್ದಾರೆ. ಇದರಿಂದಾಗಿ ಜನರನ್ನು ನಿಯಂತ್ರಣ ಮಾಡುವುದು ಕಷ್ಟವಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಹುಕ್ಕೇರಿ ಪಟ್ಟಣದಲ್ಲಿ ಮಾಸ್ಕ್ ಧರಿಸದ 682 ಪ್ರಕರಣ ದಾಖಲಿಸಿ 68,200 ರೂ. ಹಾಗೂ ದೈಹಿಕ ಅಂತರ ಪಾಲಿಸದ 42 ಅಂಗಡಿಕಾರರಿಗೆ 8,400 ರೂ. ದಂಡ ವಿಧಿಸಲಾಗಿದೆ. ಆದರೆ, ಜನರು ಮಾತ್ರ ಅನಗತ್ಯ ಓಡಾಡುವುದನ್ನು ಬಿಡುತ್ತಿಲ್ಲ.
| ಮೋಹನ ಜಾಧವ ಮುಖ್ಯಾಧಿಕಾರಿ ಪುರಸಭೆ ಹುಕ್ಕೇರಿ

ಹುಕ್ಕೇರಿ ಪಟ್ಟಣದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ 52 ಬೈಕ್ ಸೀಜ್ ಮಾಡಿ 12 ಸಾವಿರ ರೂ. ದಂಡ ವಿಧಿಸಲಾಗಿದೆ. ಯುವಜನರು ದ್ವಿಚಕ್ರ ತೆಗೆದುಕೊಂಡು ಅನಗತ್ಯವಾಗಿ ಸಂಚರಿಸುತ್ತಿರುವುದು ತರವಲ್ಲ. ಸೋಂಕು ತಡೆಗೆ ಸಹಕರಿಸಬೇಕು.
| ಸಿದ್ರಾಮಪ್ಪ ಉನ್ನದ ಪಿಎಸ್‌ಐ ಹುಕ್ಕೇರಿ

See also  ಗಡಿಭಾಗದಲ್ಲಿ ಶಾಂತಿ ಕದಡಿದರೆ ಹೋರಾಟ
Share This Article