ಗಜೇಂದ್ರಗಡ: ಕರೊನಾ ಮಹಾಮಾರಿಯಿಂದ ಜನತೆ ಸಾಕಷ್ಟು ತೊಂದರೆಗೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಮೀಪದ ಕಾಲಕಾಲೇಶ್ವರ ಗ್ರಾಮದ ಬಳಿಯ ಡೇರಿಯೊಂದರ ಪಕ್ಕದಲ್ಲಿ ಯಾರೋ ಉಪಯೋಗಿಸಿದ ಸಿರಿಂಜ್ ಹಾಗೂ ಇತರೆ ಚಿಕಿತ್ಸಾ ಸಲಕರಣೆಗಳನ್ನು ಎಸೆದಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.
ಬುಧವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಸಿರಿಂಜ್ಗಳನ್ನು ತುಂಬಿದ್ದ ಪ್ಲಾಸ್ಟಿಕ್ ಚೀಲ ಸಾರ್ವಜನಿಕರಿಗೆ ಕಂಡಿದೆ. ಇದು ವಾಯುವಿಹಾರಿಗಳಲ್ಲಿ ಆತಂಕ ಮೂಡಿಸಿದೆ. ಇದು ಯಾವುದೋ ಆಸ್ಪತ್ರೆಯವರು ಬಳಕೆ ಮಾಡಿ ಎಸೆದಿರುವುದೋ ಅಥವಾ ಜನರೇ ಉಪಯೋಗಿಸಿ ಎಸೆದಿರುವುದೋ ಪರಿಶೀಲಿಸಿ, ಮತ್ತೆ ಈ ರೀತಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಎಸೆಯದಂತೆ ಸೂಚಿಸಬೇಕು ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಹೀಗೆ ಎಲ್ಲೆಂದರಲ್ಲಿ ಬಳಕೆ ಮಾಡಿದ ವೈದ್ಯಕೀಯ ವಸ್ತುಗಳನ್ನು ಬಿಸಾಡುವುದರಿಂದ ಮೂಕ ಪ್ರಾಣಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಕರೊನಾ ಸಂದರ್ಭದಲ್ಲಿ ಇಂತಹ ಕೃತ್ಯ ಮಾಡುವುದು ಆತಂಕಕಾರಿ. ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯ ವಕೀಲ ಆರ್.ಎಂ. ರಾಯಬಾಗಿ ಆಗ್ರಹಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿನ ಬಯೋ ತಾಜ್ಯವನ್ನು ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ವೆುಂಟ್ನ ಏಜೆನ್ಸಿಯವರು ತೆಗೆದುಕೊಂಡು ಹೋಗಲು ಒಪ್ಪಂದವಾಗಿರುತ್ತದೆ. ಉಪಯೋಗಿಸಿದ ಆಸ್ಪತ್ರೆ ಪರಿಕರಗಳನ್ನು ಅವರಿಗೆ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬಾರದು. ಅದು ಅಪರಾಧ ಕೂಡ. ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿ, ತ್ಯಾಜ್ಯ ತೆರವುಗೊಳಿಸಲು ತಿಳಿಸಲಾಗುವುದು.
| ಡಾ. ಬಿ.ಎಸ್.ಭಜಂತ್ರಿ, ತಾಲೂಕು ವೈದ್ಯಾಧಿಕಾರಿ