ಆಣೂರ ರೈತರ ಮನವೊಲಿಕೆ

ಹಾವೇರಿ: ಆಣೂರ ಕೆರೆಗೆ ನೀರು ತುಂಬಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಮತದಾನದಿಂದ ಹೊರಗುಳಿಯುವುದಾಗಿ ಎಚ್ಚರಿಕೆ ನೀಡಿದ್ದ ಆಣೂರ ಗ್ರಾಮದ ರೈತರನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ. ಪರಶುರಾಮ, ಜಿ.ಪಂ. ಸಿಇಒ ಕೆ. ಲೀಲಾವತಿ ಹಾಗೂ ಇತರ ಅಧಿಕಾರಿಗಳ ತಂಡ ರೈತರನ್ನು ಭೇಟಿ ಮಾಡಿ ಕೆರೆ ತುಂಬಿಸುವ ಯೋಜನೆಯ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.

ಗುರುವಾರ ಮಧ್ಯಾಹ್ನ ಆಣೂರಿಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಭೇಟಿ ನೀಡಿದ ಅಧಿಕಾರಿಗಳ ತಂಡ ಕೆರೆಯ ದಡದಲ್ಲಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ, ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಮಾತನಾಡಿ, ಈಗಾಗಲೇ ಆಣೂರ ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ಡಿಪಿಆರ್ ಹೊರಡಿಸಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಣ ಬಿಡುಗಡೆಗೆ ತಾಂತ್ರಿಕ ತೊಂದರೆಗಳಿವೆ. ಚುನಾವಣೆ ನೀತಿ ಸಂಹಿತೆ ಪೂರ್ಣಗೊಂಡ ಮೇಲೆ ಈ ಕುರಿತಂತೆ ಕ್ರಮ ವಹಿಸಲಾಗುವುದು. ಇಲ್ಲಿನ ರೈತರ ಪರಿಸ್ಥಿತಿ ಜಿಲ್ಲಾಡಳಿತದ ಗಮನದಲ್ಲಿದೆ. ಆದ್ಯತೆಯ ಮೇಲೆ ನಿಮ್ಮ ಸಮಸ್ಯೆಗೆ ಸ್ಪಂದಿಸಲಾಗುವುದು. ತಮ್ಮ ತೀರ್ಮಾನ ಬದಲಿಸಿ ಮತದಾನದಿಂದ ಹೊರಗುಳಿಯುವ ನಿರ್ಧಾರವನ್ನು ಕೈಬಿಡುವಂತೆ ಮನವಿ ಮಾಡಿಕೊಂಡರು.

ಗ್ರಾಮಸ್ಥರು, ಈ ಭಾಗದ ಜನರ ಕುಡಿಯುವ ನೀರಿನ ಪರಿಸ್ಥಿತಿ ಹಾಗೂ ಆಣೂರ ಕೆರೆಯನ್ನು ತುಂಬಿಸುವುದರಿಂದ ಆಣೂರ ಸೇರಿ ಈ ಭಾಗದ ರೈತರಿಗೆ ಆಗುವ ಅನುಕೂಲಗಳು ಹಾಗೂ ಸರ್ಕಾರ ಮತ್ತು ಜಿಲ್ಲಾಡಳಿತ ಈ ಕೆರೆ ತುಂಬಿಸುವ ಯೋಜನೆಗೆ ಕೊಡಬೇಕಾದ ಮಹತ್ವದ ಕುರಿತು ವಿವರಿಸಿದರು.

ಬ್ಯಾಡಗಿ ಸಹಾಯಕ ಚುನಾವಣಾಧಿಕಾರಿ ಸಿದ್ದರಾಜು, ಡಿವೈಎಸ್​ಪಿ ಕುಮಾರಪ್ಪ ಹಾಗೂ ವಿವಿಧ ಅಧಿಕಾರಿಗಳು, ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.

ಕೆರೆ ತುಂಬಿಸುವ ಆದೇಶ ನೀಡಿ:ಚುನಾವಣೆಯನ್ನು ಬಹಿಷ್ಕರಿಸುವ ಉದ್ದೇಶ ಯಾವ ರೈತರಿಗೂ ಇಲ್ಲ. ಚುನಾವಣಾ ಕಾರ್ಯಗಳಿಗೆ ಯಾವುದೇ ಅಧಿಕಾರಿಗಳಿಗೆ ಅಡ್ಡಿಪಡಿಸುವುದಿಲ್ಲ. ಯಾರಿಗೂ ಮತದಾನ ಬಹಿಷ್ಕರಿಸುವಂತೆ ನಾವು ಹೇಳಿಲ್ಲ. ನಮ್ಮ ಸಂಕಷ್ಟವನ್ನು ಅರ್ಥಮಾಡಿಕೊಂಡು ಬಹುದಿನಗಳ ಬೇಡಿಕೆಯಾದ ಆಣೂರ ಕೆರೆಯನ್ನು ತುಂಬಿಸುವ ಕೆಲಸವಾಗಬೇಕಾಗಿದೆ. ಮತದಾನದ ದಿನದೊಳಗೆ ಕೆರೆ ತುಂಬಿಸುವ ಆದೇಶವನ್ನು ನಮಗೆ ನೀಡಿದರೆ ಎಲ್ಲರೂ ಮತದಾನದಲ್ಲಿ ಭಾಗವಹಿಸುವುದಾಗಿ ತಿಳಿಸಿದರು

Leave a Reply

Your email address will not be published. Required fields are marked *