ಆಡಂಬರಕ್ಕೆ ದೇವರ ಪೂಜೆ ಸಲ್ಲ

ಹೊಸನಗರ: ಆಡಂಬರಕ್ಕಾಗಿ ದೇವರ ಪೂಜೆ ಮಾಡಬೇಡಿ. ದೇವರಿಗೆ ಸಲ್ಲಿಸುವ ಪೂಜೆ, ಪ್ರಾರ್ಥನೆಗಳು ಅತ್ಯಂತ ನಿಷ್ಕಲ್ಮಶ ಮನಸ್ಸಿನಿಂದ ಕೂಡಿರಬೇಕು. ಆಗ ಮಾತ್ರ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿದನೂರು ನಗರದಲ್ಲಿ ಶುಕ್ರವಾರ ನೀಲಕಂಠೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ದೇವರು ಕೇವಲ ದೇವಸ್ಥಾನದಲ್ಲಿ ಮಾತ್ರ ಇಲ್ಲ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಅಡಗಿದ್ದಾನೆ. ಆದರೆ ಪರಿಶುದ್ಧ ಮನಸ್ಸು ಇರುವೆಡೆ ಮಾತ್ರ ಭಗವಂತ ನೆಲೆಸುತ್ತಾನೆ. ಒಳಿತು ಕೆಡುಕುಗಳು ಎಲ್ಲರಲ್ಲಿಯೂ ಇರುತ್ತದೆ. ಕೆಡುಕನ್ನು ದೂರವಿರಿಸಿ, ಒಳಿತನ್ನು ಸ್ವೀಕರಿಸಬೇಕು. ಹಾಗೆಯೇ ಅದನ್ನು ಪ್ರಚುರಪಡಿಸಬೇಕು ಎಂದರು.

ಭಗವಂತ ಎಲ್ಲಡೆ ಇದ್ದರೂ, ಜನಸಾಮಾನ್ಯರಿಗೆ ಸುಲಭದಲ್ಲಿ ಸಾಕ್ಷಾತ್ಕಾರ ಆಗಲಾರ. ಈ ಕಾರಣಕ್ಕಾಗಿಯೇ ದೇವಸ್ಥಾನಗಳನ್ನು ನಿರ್ವಿುಸುತ್ತೇವೆ. ಪ್ರಾರ್ಥನೆ, ಆರಾಧನೆ ಮೂಲಕ ಭಗವಂತನ ಕೃಪೆ ಪಡೆಯಲು ಸಾಧ್ಯ ಎನ್ನುವುದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಇದು ಪರಮಸತ್ಯ ಎಬುಂದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.

ಸಾಮಾನ್ಯರ ನಡುವೆಯೂ ಸಾಧಕರಿದ್ದಾರೆ. ಅಂತಹ ಸಾಧಕರನ್ನು ಗುರುತಿಸುವ ಸಲುವಾಗಿ ಭಗವಂತ ತನ್ನಿಷ್ಟದಂತೆ ಶರೀರ ಹೊಂದುತ್ತಾನೆ. ಮನುಷ್ಯನಿಗೆ ತನ್ನ ಹಿಂದಿನ ಕರ್ಮಫಲದಿಂದ ದೇಹ ಪ್ರಾಪ್ತವಾಗಿದೆ. ಭಗವಂತ ತನ್ನ ಇಚ್ಛಾನುಸಾರ ದೇಹ ಹೊಂದಬಲ್ಲ. ಸರ್ವವ್ಯಾಪಿ, ನಿರ್ಗಣನಾದ ಭಗವಂತನನ್ನು ಒಲಿಸಿಕೊಳ್ಳಲು ಭಕ್ತಿಯೊಂದೇ ಮಾರ್ಗ ಎಂದರು.

ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ವೇದಬ್ರಹ್ಮ ವಿನಾಯಕ ಉಡುಪ ಸೇರಿ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಯಿತು. ಇದಕ್ಕೂ ಮುನ್ನ ಶ್ರೀಗಳ ಸಾನ್ನಿಧ್ಯದಲ್ಲಿ ನೀಲಕಂಠ ಮತ್ತು ಶಂಕರೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ, ಕುಂಭಾಭಿಷೇಕ ನಡೆಯಿತು. ಮಹಾಪೂಜೆ, ಪಾದಪೂಜೆ, ಭಿಕ್ಷಾವಂದನೆ, ಮಹಾರುದ್ರಯಾಗದ ಪೂರ್ಣಾಹುತಿ ಮೊದಲಾದ ಧಾರ್ವಿುಕ ಕಾರ್ಯಕ್ರಮ ನಡೆದವು. ಅನುಗ್ರಹ ಭಾಷಣದ ನಂತರ ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ನೀಡಿದರು. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

Leave a Reply

Your email address will not be published. Required fields are marked *