ಚನ್ನರಾಯಪಟ್ಟಣ: ನಾಡು, ನುಡಿಯ ಸೇವೆಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಕೊಡುಗೆ ಅಪಾರ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಮೈಸೂರು ವೃತ್ತದಲ್ಲಿರುವ ಶಂಕರ್ ನಾಗ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ 15ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡದ ವಿವಿಧ ರೀತಿಯ ಒಗಟುಗಳ ಮೂಲಕ ಆಟೋಗಳ ಮೇಲೆ ಬರಹಗಳನ್ನು ಬರೆಯಿಸಿಕೊಂಡು ಸಂಚರಿಸುವ ಆಟೋ ಚಾಲಕರು, ಕನ್ನಡ ಭಾಷೆ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆಟೋ ಚಾಲಕರು ಮತ್ತು ಮಾಲೀಕರ ಸಂಘ ಉತ್ಸಾಹದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಇತರ ಸಂಘಟನೆಗಳಿಗೆ ಮಾದರಿ ಎಂದು ಶ್ಲಾಘಿಸಿದರು.
ದಿನದ 24 ಗಂಟೆಯೂ ಗ್ರಾಹಕರ ಸೇವೆಯಲ್ಲಿ ತೊಡಗಿರುವ ಆಟೋ ರಿಕ್ಷಾ ಚಾಲಕರ ಸೇವೆ ಅನನ್ಯ. ಪ್ರಾಮಾಣಿಕ ಸೇವಾ ಮನೋಭಾವದಿಂದ ಕೆಲಸ ಮಾಡುವ ಪ್ರತಿಯೊಬ್ಬರ ಜೀವನ ಸುಂದರವಾಗಿರುತ್ತದೆ. ಅವರ ಸೇವೆಗೆ ಬೆಲೆ ಕಟ್ಟಲು ಆಗುವುದಿಲ್ಲ. ಮಧ್ಯರಾತ್ರಿಯಲ್ಲಿ ದೂರದ ಊರುಗಳಿಂದ ಬರುವ ಗ್ರಾಮೀಣ ಭಾಗದ ಜನರನ್ನು ಸುರಕ್ಷಿತವಾಗಿ ಅವರ ಮನೆಯ ಮುಂಭಾಗಕ್ಕೆ ತಲುಪಿಸುವ ಕಾಯಕ ಮಾಡುತ್ತಿದ್ದಾರೆ. ಅಂತಹ ಚಾಲಕರಿಗೆ ನಾನು ಕೈ ಮುಗಿದು ಧನ್ಯವಾದ ಹೇಳುತ್ತೇನೆ. ದುಡಿಮೆಗೆ ಚಾಲನೆ ವೃತ್ತಿ ಆವಲಂಬಿಸಿದ್ದು, ಇದನ್ನೇ ನಂಬಿ ಜೀವನ ನಡೆಸುವ ಚಾಲಕರು ಕರ್ತವ್ಯದ ಜತೆಗೆ ಸಂಸಾರದ ಜವಾಬ್ದಾರಿ ಇರುತ್ತದೆ. ಆದ್ದರಿಂದ ಆಟೋ ಚಾಲಕರು ಏಕಾಗ್ರತೆಯಿಂದ ವಾಹನ ಚಾಲನೆ ಮಾಡಬೇಕು. ಚಾಲನಾ ಪರವಾನಗಿ, ವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಜೀವನ ನಿರ್ವಹಣೆಗಾಗಿ ಆಟೋ ಚಾಲನೆಯನ್ನು ಅವಲಂಬಿಸಿರುವ ಚಾಲಕರು ಹಾಗೂ ಅಪಘಾತಗಳಾದರೆ ನೆರವಿಗೆ ಬರುತ್ತವೆ ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಚಾಲಕರ ಬೇಡಿಕೆಯಂತೆ ಮೈಸೂರು ವೃತ್ತದಲ್ಲಿ ಮಂಟಪ ನಿರ್ಮಿಸಿ, ಕುವೆಂಪು ಅವರ ಪ್ರತಿಮೆ ಸ್ಥಾಪನೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಗೃಹ ನಿರ್ಮಾಣ ಮಾಡಲಾಗುವುದು. ಚಾಲಕರ ಯಾವುದೇ ಕೆಲಸವನ್ನು ಮಾಡಿಕೊಡಲು ಶಾಸಕರು ಹಾಗೂ ನಾವು ಸಿದ್ಧವಿರುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಜೆ.ದಿವ್ಯಾ ಮಾತನಾಡಿದರು. ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಜಗದೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎನ್.ಮಂಜುನಾಥ್, ಶಂಕರ್ ನಾಗ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಪುರಿ ಮಂಜಪ್ಪ, ಅಧ್ಯಕ್ಷ ರವಿ, ಉಪಾಧ್ಯಕ್ಷ ಚಿಕ್ಕಯ್ಯ, ಕಾರ್ಯದರ್ಶಿ ಮಂಜು, ಸಹ ಕಾರ್ಯದರ್ಶಿ ಸುರೇಶ್, ಖಜಾಂಚಿ ಚಂದ್ರು, ಸಂಚಾಲಕರಾದ ಹರೀಶ್, ದಿಲೀಪ್, ಸಂತೋಷ್, ಮತ್ತಿ , ಸ್ವಾಮಿ ಕೋಟೆ ಸಂಘದ ಸದಸ್ಯರು ಭಾಗವಹಿಸಿದ್ದರು.