ಆಚಾರ, ವಿಚಾರ ಜೀವನದಲ್ಲಿ ಪ್ರಮುಖ

ರಿಪ್ಪನ್​ಪೇಟೆ: ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಜಾತ್ರಾ ಮಹೋತ್ಸವದ ಪ್ರಥಮ ದಿನ ಭಾನುವಾರ ರಾತ್ರಿ ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನಾಗವಾಹನ ಉತ್ಸವ ಜರುಗಿತು.

ನಂತರ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯ ವಿಚಾರಶೀಲ ಜೀವಿ. ಚಿಂತನ ಮತ್ತು ಮನನ ಮಾಡುವುದು ಅವನ ಲಕ್ಷಣ. ವಿಚಾರ-ಆಚಾರಗಳು ಮಾನವನ ಜೀವನದಲ್ಲಿ ಎರಡು ಚಕ್ರಗಳಂತೆ. ಆಚಾರವು ಯಾವಾಗ ವಿಚಾರದೊಂದಿಗೆ ಸಮನ್ವಿತವಾಗುತ್ತದೆಯೋ ಆಗ ಜೀವನದಲ್ಲಿ ವಿವೇಕ ಪ್ರಕಟವಾಗುತ್ತದೆ. ವಿವೇಕಪೂರ್ಣ ಆಚರಣೆಯಿಂದ ಮಾನವನ ಜೀವನಕ್ಕೆ ಮಹತ್ವ ಬರುತ್ತದೆ ಎಂದರು. ಉತ್ಸವ ಹಾಗೂ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಪಾಲ್ಗೊಂಡಿದ್ದರು.

ಮಾ.26ರ ಸಂಜೆ 7ಕ್ಕೆ ಜರುಗುವ ಧಾರ್ವಿುಕ ಸಭೆಯಲ್ಲಿ ಶ್ರೀಮಠ ನೀಡುವ 2019-20ರ ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಹಾಗೂ ಮಂಜೂಷಾ ವಸ್ತುಸಂಗ್ರಹಾಲಯದ ನಿರ್ದೇಶಕ, ಲೇಖಕ, ಸಂಶೋಧಕ, ಸಂಪಾದಕ ಡಿ.ಎಸ್.ಶೆಟ್ಟಿ ಅವರಿಗೆ ಶ್ರೀಗಳು ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಮಣಿಪುರದ ವಿಜಯ ಪಾಟ್ನಿ, ಅಸ್ಸಾಂನ ತೀನ್​ಸುಖಿಯಾದ ಪವನ್​ಕುಮಾರ ರಾರಾ, ಬೆಂಗಳೂರಿನ ದೀಪಕ್ ಜೈನ್ ಉಪಸ್ಥಿತರಿರುವರು.