ಆಗಸ್ಟ್​ನಿಂದ ಬೈಪಾಸ್ ಸಂಚಾರ

ಹುಬ್ಬಳ್ಳಿ: ಸರಕು ಸಾಗಣೆ (ಗೂಡ್ಸ್) ರೈಲುಗಳು ಮುಂದಿನ ತಿಂಗಳಿನಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬರುವುದಿಲ್ಲ !

ಹೌದು, ಗೂಡ್ಸ್ ರೈಲುಗಳಿನ್ನು ಹುಬ್ಬಳ್ಳಿ ಹೊರವಲಯದಲ್ಲಿ ನಿರ್ವಿುಸುತ್ತಿರುವ ಬೈಪಾಸ್ ಮಾರ್ಗದ ಮೂಲಕ ಸಂಚರಿಸಲಿವೆ. ಗೂಡ್ಸ್ ರೈಲುಗಳ ಸಂಚಾರದಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಆಗುತ್ತಿದ್ದ ದಟ್ಟಣೆ ತಪ್ಪಿಸುವುದಕ್ಕಾಗಿ ಪ್ರಾರಂಭಿಸಿದ್ದ ಬೈಪಾಸ್ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.

ಆಗಸ್ಟ್​ನಲ್ಲಿ ಬೈಪಾಸ್ ರೈಲ್ವೆ ಮಾರ್ಗ ಪೂರ್ಣಗೊಳ್ಳಲಿದ್ದು, ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ ಪ್ರಾರಂಭದಲ್ಲಿ ಗೂಡ್ಸ್ ರೈಲುಗಳು ಬೈಪಾಸ್ ಮೂಲಕ ಸಂಚಾರ ಪ್ರಾರಂಭಿಸಲಿವೆ.

ಕುಸುಗಲ್ಲ ಬಳಿಯ ನಿಲ್ದಾಣದಿಂದ ಅಮರಗೋಳ ನಿಲ್ದಾಣದವರೆಗೆ ಸುಮಾರು 23 ಕಿಮೀ ಉದ್ದದ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿಯನ್ನು 65 ಕೋಟಿ ರೂ. ವೆಚ್ಚದಲ್ಲಿ 2016ರ ನವೆಂಬರ್​ನಲ್ಲಿ ಪ್ರಾರಂಭಿಸಿದ್ದ ನೈಋತ್ಯ ರೈಲ್ವೆ ವಲಯ, ಅವಧಿಗಿಂತ ಮುಂಚೆಯೇ ಕಾಮಗಾರಿ ಪೂರ್ಣಗೊಳಿಸಿದೆ.

ನಿಗದಿತ ಅವಧಿಯಂತೆ 2019ರ ನವೆಂಬರ್​ನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, 3 ತಿಂಗಳು ಮುಂಚಿತವಾಗಿ ಕಾಮಗಾರಿ ಪೂರ್ಣಗೊಂಡಿದೆ.

ಬೈಪಾಸ್ ಮಾರ್ಗದಲ್ಲಿ ಈಗಾಗಲೇ 2 ರೈಲ್ವೆ ಮೇಲ್ಸೇತುವೆ, 7 ರೈಲ್ವೆ ಕೆಳ ಸೇತುವೆ, 19 ಸಣ್ಣ ಪ್ರಮಾಣದ ಸೇತುವೆಗಳು, 2 ನಿಲ್ದಾಣಗಳು (ಬೈಪಾಸ್ ಕ್ಯಾಬಿನ್), 2 ರೈಲ್ವೆ ಗೇಟ್​ಗಳು (ಮಾನವ ಸಹಿತ) ಸೇರಿ ಮತ್ತಿತರ ಕಾಮಗಾರಿಗಳು ಪೂರ್ಣಗೊಂಡಿವೆ.

ಹುಬ್ಬಳ್ಳಿ ಜಂಕ್ಷನ್​ನಲ್ಲಿ ಪ್ರಯಾಣಿಕರ ರೈಲುಗಳ ಸಂಚಾರ ಹಾಗೂ ನಿಲುಗಡೆ ಹೆಚ್ಚು ಇರುವುದರಿಂದ ಗೂಡ್ಸ್ ರೈಲುಗಳ ಸಂಚಾರಕ್ಕೆ ಬೇಗ ಹಸಿರು ನಿಶಾನೆ ದೊರಕುತ್ತಿರಲಿಲ್ಲ. ಇದರಿಂದ ಗೂಡ್ಸ್ ರೈಲುಗಳ ಸಂಚಾರ ವಿಳಂಬವಾಗುತ್ತಿತ್ತು. ಬೈಪಾಸ್ ಮಾರ್ಗ ನಿರ್ವಣದಿಂದ ಗೂಡ್ಸ್ ರೈಲುಗಳು ಹುಬ್ಬಳ್ಳಿ ಜಂಕ್ಷನ್​ಗೆ ಬಾರದೇ ಸಂಚರಿಸುವುದರಿಂದ ಪ್ರಯಾಣಿಕರ ರೈಲುಗಳ ಸಂಚಾರಕ್ಕೂ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಹೊಸಪೇಟೆ, ವಾಸ್ಕೊ, ಬೆಂಗಳೂರು, ಮುಂಬೈ ಮತ್ತಿತರೆಡೆ ನಿತ್ಯ ತೆರಳುವ 10-15 ಗೂಡ್ಸ್ ರೈಲುಗಳು ಹುಬ್ಬಳ್ಳಿ ಜಂಕ್ಷನ್ ಬದಲಾಗಿ ಬೈಪಾಸ್ ಮೂಲಕ ಸಂಚರಿಸಲಿವೆ.

ಆಗಸ್ಟ್ ಕೊನೆಗೆ ಬೈಪಾಸ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡು, ಗೂಡ್ಸ್ ರೈಲುಗಳ ಸಂಚಾರ ಪ್ರಾರಂಭಗೊಳ್ಳಲಿದೆ. ಇನ್ನು ಮುಂದೆ ಗೂಡ್ಸ್ ರೈಲುಗಳು ಹುಬ್ಬಳ್ಳಿ ಜಂಕ್ಷನ್​ಗೆ ಬಾರದೇ, ಬೈಪಾಸ್ ಸಂಚರಿಸಲಿವೆ. ಇದರಿಂದ ಗೂಡ್ಸ್ ಹಾಗೂ ಪ್ರಯಾಣಿಕ ರೈಲುಗಳ ಸಂಚಾರದಲ್ಲಿ ಸಾಕಷ್ಟು ಸಮಯ ಉಳಿತಾಯ ಆಗಲಿದೆ.
| ವಿಜಯಾ ಸಾರ್ವಜನಿಕ ಸಂಪರ್ಕ ಅಧಿಕಾರಿ

Leave a Reply

Your email address will not be published. Required fields are marked *