ಆಂಬುಲೆನ್ಸ್​ನಲ್ಲಿಯೇ ಹೆರಿಗೆ!

ಹುಬ್ಬಳ್ಳಿ: ಸಹಜ ಹೆರಿಗೆ ಕಷ್ಟ, ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದರಿಂದ ಕಿಮ್ಸ್​ಗೆ ಕರೆದುಕೊಂಡು ಹೋಗುತ್ತಿರುವಾಗ ಗರ್ಭಿಣಿ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಗರದಲ್ಲಿ ನಡೆದಿದೆ.

108 ಆರೋಗ್ಯ ಕವಚ, ಆಂಬುಲೆನ್ಸ್​ಗಳಲ್ಲಿ ಹೆರಿಗೆಗಳಾಗುವುದು ಸಹಜ. ಆದರೆ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ವಿಶೇಷ ಪ್ರಕರಣ ಇದಾಗಿದೆ.

ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಾದ ನಗರದ ಯಲ್ಲಾಪುರ ಓಣಿಯ ನಿವಾಸಿ ಲಕ್ಷ್ಮೀ ಎನ್ನುವವರು ಹೆರಿಗೆ ನೋವಿನಿಂದ ಬಳಲುತ್ತಿರುವಾಗ, ನಾರ್ಮಲ್ ಹೆರಿಗೆ ಆಗುವುದಿಲ್ಲ, ಸಿಜೇರಿಯನ್ ಮಾಡಬೇಕು. ಹಾಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದರು.

ಕೂಡಲೆ ಆಂಬುಲೆನ್ಸ್ನಲ್ಲಿ ಚಿಟಗುಪ್ಪಿ ಆಸ್ಪತ್ರೆಯಿಂದ ಕಿಮ್ಸ್ಗೆ ಕರೆದುಕೊಂಡು ಹೋಗುವ ಮಾರ್ಗದಲ್ಲಿ ಗರ್ಭಿಣಿಗೆ ತೀವ್ರ ನೋವು ಕಾಣಿಸಿಕೊಂಡಿದೆ. ಆಂಬುಲೆನ್ಸ್ ನರ್ಸ್ ಯಲ್ಲಪ್ಪ ಮಡಿವಾಳರ ನಾರ್ಮಲ್ ಹೆರಿಗೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.