ಕಾನಹೊಸಹಳ್ಳಿ: ತಾಯಕನಹಳ್ಳಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಪೂಜಾ ಕಾರ್ಯಗಳು, ಹೋಮ, ಹವನ ನೆರವೇರಿದವು. ಸಂಜೆ ದೇವಸ್ಥಾನದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೂಲಕ ಸಕಲ ವಾದ್ಯಗಳೊಂದಿಗೆ ರಥದ ಬಳಿಗೆ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಚೂರುಮೆಣಸು ತೂರಿ ಭಕ್ತಿ ಸಮರ್ಪಿಸಿದರು. ರಥವನ್ನು ಪಾದಗಟ್ಟೆಯವರೆಗೆ ಎಳೆದು ನಂತರ ಮೂಲ ಸ್ಥಳಕ್ಕೆ ತರಲಾಯಿತು. ನಂದಿಧ್ವಜ ಕುಣಿತ, ಸಮಾಳ, ಹಲಗೆ, ಉರುಮೆ ಸೇರಿದಂತೆ ಇತರ ಜಾನಪದ ವಾದ್ಯಗಳು ರಥೋತ್ಸವದ ಮೆರಗು ಹೆಚ್ವಿಸಿದವು.
ರಥೋತ್ಸವಕ್ಕೂ ಮುನ್ನ ಆಂಜನೇಯ ಸ್ವಾಮಿಯ ಮುಕ್ತಿಪಟವನ್ನು ಬಿ.ಮಹಾಲಿಂಗಪ್ಪ 46,100 ರೂ.ಗೆ ಹರಾಜಿನಲ್ಲಿ ಪಡೆದರು. ಮಾಜಿ ಸಚಿವ ಬಿ.ಶ್ರೀರಾಮುಲು, ಇತರ ಗಣ್ಯರು ಭಾಗವಹಿಸಿದ್ದರು.
