ಆಂಗ್ಲ ಮಾಧ್ಯಮದ ಪ್ರವೇಶಕ್ಕೆ ನೂಕುನುಗ್ಗಲು

ಚನ್ನಪಟ್ಟಣ: ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಮಕ್ಕಳನ್ನು ದಾಖಲಿಸಲು ಬುಧವಾರ ನೂಕುನುಗ್ಗಲು ಏರ್ಪಟ್ಟ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಪಾಲಕರ ಸಭೆ ನಡೆಸಿ ಸಮಾಧಾನ ಪಡಿಸಿದರು.

ಅರಳಾಳು ಸಂದ್ರ ಮತ್ತು ಹೊಂಗನೂರು ಗ್ರಾಮದಲ್ಲಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿದ್ದು, ಎಲ್​ಕೆಜಿ ತರಗತಿಗೆ ಕೇವಲ 30 ಮಕ್ಕಳ ದಾಖಲಾತಿಗೆ ಅವಕಾಶವಿದ್ದು, ನೂರಕ್ಕೂ ಹೆಚ್ಚು ಪಾಲಕರು ದಾಖಲಾತಿಗೆ ಅವಕಾಶ ನೀಡುವಂತೆ ಹಠಕ್ಕೆ ಬಿದ್ದ ಪರಿಣಾಮ ಗೊಂದಲ ನಿರ್ವಣವಾಗಿತ್ತು.

ಶಿಕ್ಷಣ ಇಲಾಖೆ ನಿಮಮದಂತೆ ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಮುಂದಿನ ವರ್ಷದಿಂದ ಶಾಲೆ ಮತ್ತು ತರಗತಿಗಳನ್ನು ಹೆಚ್ಚು ಮಾಡಲಾಗುತ್ತದೆ ಪಾಲಕರು ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಮನವಿ ಮಾಡಿದರು.

ಪಾಲಕರ ಪಟ್ಟು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾತಿಗೆ ಸಮ್ಮತಿಸದ ಪಾಲಕರು, ನಾವು ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದು, ಆ ಶಾಲೆಗೆ ಹಣ ಕಟ್ಟಲು ಸಾಧ್ಯವಿಲ್ಲ. ನಮ್ಮ ಮಗು ಆಂಗ್ಲ ಮಾಧ್ಯಮದಲ್ಲಿ ಓದಬೇಕು ಎಂಬುದು ನಮ್ಮಾಸೆ. ದಯಮಾಡಿ ಅವಕಾಶ ಮಾಡಿಕೊಡಿ ಎಂದು ಪಟ್ಟು ಹಿಡಿದರು.

ಹಿಂದೆ ಆರ್​ಟಿಇ ಕಾಯ್ದೆ ಇದ್ದ ಕಾರಣ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಬಹುದಾಗಿತ್ತು. ಆದರೆ ಈ ಬಾರಿ ಸರ್ಕಾರಿ ಶಾಲೆ ಇರುವ ಗ್ರಾಮಗಳಲ್ಲಿ ಆರ್​ಟಿಇ ಅಡಿಯಲ್ಲಿ ಮಕ್ಕಳನ್ನು ದಾಖಲು ಮಾಡಲು ಅವಕಾಶ ನೀಡುತ್ತಿಲ್ಲ, ಹೀಗಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ಎಂಬುದು ಗಗನ ಕುಸುಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡು ದಿನ ಅವಕಾಶ ನೀಡಿ: ಪಾಲಕರ ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚುವರಿ ತರಗತಿ ತೆರೆಯುವ ಅಧಿಕಾರ ನನಗೆ ಇಲ್ಲ. ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ಮತ್ತು ಮುಖ್ಯಮಂತ್ರಿಗಳ ವಿಶೇಷಾಧಿಕಾರಿಗೆ ತಿಳಿಸಿ ಹೆಚ್ಚುವರಿ ಶಾಲೆ ತೆರೆಯುವಂತೆ ವರದಿ ನೀಡುತ್ತೇನೆ. ನನಗೆ ಎರಡು ದಿನ ಕಾಲಾವಕಾಶ ನೀಡಿ ಎಂದು ಹೇಳಿ ಬಿಇಒ ಸೀತಾರಾಮು ಸಭೆಯನ್ನು ಮುಕ್ತಾಯಗೊಳಿಸಿದರು.

Leave a Reply

Your email address will not be published. Required fields are marked *