ಅಹಿತಕರ ಘಟನೆ ನಡೆಸದಂತೆ ಎಚ್ಚರಿಕೆ

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡಬಾರದು. ಯಾವುದೇ ಅಹಿತಕರ ಘಟನೆಯಲ್ಲಿ ತೊಡಗಬಾರದು. ಮತದಾರರಿಗೆ ಬೆದರಿಕೆ ಹಾಕಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್​ವಾಸ್ ಸಫೇಟ್ ರೌಡಿ ಶೀಟರ್​ಗಳಿಗೆ ಎಚ್ಚರಿಕೆ ನೀಡಿದರು.

ವಿಜಯಪುರ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ರೌಡಿ ಶೀಟರ್ ಕರೆಸಿ ಪರೇಡ್ ನಡೆಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಚ್ಚರಿಕೆ ನೀಡಿದರು.

ವಿಜಯಪುರ, ಚನ್ನರಾಯಪಟ್ಟಣ, ವಿಶ್ವನಾಥಪುರ ಮೂರು ಪೊಲೀಸ್ ಠಾಣೆ ವ್ಯಾಪ್ತಿಗಳ 65 ಮಂದಿ ಪರೇಡ್​ನಲ್ಲಿ ಭಾಗವಹಿಸಿದ್ದರು.

ಮತದಾನದ ದಿನದಂದು ಮತದಾರರ ಮೇಲೆ ದಬ್ಟಾಳಿಕೆ ನಡೆಸುವುದು, ಹೊರಗಿನ ಜಿಲ್ಲೆಯ ಅಪರಾಧಿಗಳಿಗೆ ಸ್ಥಳೀಯವಾಗಿ ಸಹಾಯ ಮಾಡಿದರೆ ಜಾಮೀನು ರಹಿತ ವಾರೆಂಟ್​ನಡಿ ಬಂಧಿಸುವುದಲ್ಲದೆ, ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪೊಲೀಸ್ ಆರಕ್ಷಕ ವೃತ್ತ ನಿರೀಕ್ಷಕ ಪ್ರಕಾಶ್ ಮಾತನಾಡಿ, ಈಗಾಗಲೇ 150ಕ್ಕೂ ಹೆಚ್ಚು ಅನುಮಾನಸ್ಪದ ರೌಡಿಗಳನ್ನು ಬಂಧಿಸಿ, ತಹಸೀಲ್ದಾರ್ ಮುಂದೆ ಸರಂಡರ್ ಮಾಡಿಸಿ 5 ಲಕ್ಷ ರೂ. ಮುಚ್ಚಳಿಕೆ ಬರೆಸಿಕೊಳ್ಳಲಾಗಿದ್ದು, ಸುಗಮ ಪಾರದರ್ಶಕ ಮತದಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ದೊಡ್ಡಬಳ್ಳಾಪುರ ಡಿವೈಎಸ್​ಪಿ ಮೋಹನ್​ಕುಮಾರ್, ಪೊ›ಬೆಶನರಿ ಡಿವೈಎಸ್​ಪಿ ವಿನಾಯಕ ಬೆಟಗೇರಿ, ವಿಜಯಪುರ ಸಬ್​ಇನ್​ಸ್ಪೆಕ್ಟರ್ ಎಸ್.ನರೇಶ್ ನಾಯಕ್, ವಿಶ್ವನಾಥಪುರ ಸಬ್​ಇನ್​ಸ್ಪೆಕ್ಟರ್ ಮಂಜುನಾಥ್, ಚನ್ನರಾಯಪಟ್ಟಣ ಸಬ್​ಇನ್​ಸ್ಪೆಕ್ಟರ್ ವೆಂಕಟೇಶ್ ಇದ್ದರು.

ಪರೇಡ್​ನಲ್ಲಿ ಭಾಗಿಯಾದ ಎಲ್ಲ ರೌಡಿಶೀಟರ್​ಗಳ ದೂರವಾಣಿಸಂಖ್ಯೆ, ವಿಳಾಸ, ಸಂಬಂಧಿಕರ ವಿವರ, ಮತ್ತಿತರ ವಿವರಗಳನ್ನು ಪಡೆದು ಸಹಿ ಹಾಕಿಸಿಕೊಳ್ಳಲಾಯಿತು.