ಅಹಮ್ಮಿನ ಕೋಟೆಯ ದಾಟಿ

ಮಹಾದೇವ ಬಸರಕೋಡ

ಬದುಕಿನಲ್ಲಿ ಒಂದಷ್ಟು ಸುಖ ಅನುಭವಿಸುತ್ತಿರುವಾಗ, ಸಂತೋಷದಲ್ಲಿರುವಾಗ, ಅಧಿಕಾರದ ಅಮಲು ಆವರಿಸಿಕೊಂಡಾಗ, ಅಗತ್ಯವಿರುವ ಸೌಕರ್ಯಗಳೆಲ್ಲ ದೊರೆತಿರುವಾಗ, ವೈಭೋಗ ಜೀವನ ನಮ್ಮದಾಗಿರುವಾಗ ಪರರ ಅವಶ್ಯಕತೆಗಳ ಬಗೆಗೆ ಉದಾಸೀನರಾಗುತ್ತೇವೆ. ಇತರರ ನೋವು, ಸಂಕಟಗಳು ಗಮನಕ್ಕೆ ಬರುವುದೇ ಇಲ್ಲ. ಸ್ವಾರ್ಥದ ಭ್ರಾಮಕ ಪ್ರಪಂಚದಲ್ಲಿ ಮುಳುಗಿದಾಗ, ನಮ್ಮ ಸುತ್ತಲೂ ಅಹಮ್ಮಿನ ಕೋಟೆ ನಿರ್ವಿುಸಿಕೊಂಡಾಗ ವಾಸ್ತವ ಅರಿಯುವಲ್ಲಿ ವಿಫಲರಾಗುತ್ತೇವೆ. ಇದು ನಿರಾಸೆ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತದೆ.

ಮುಲ್ಲಾ ನಸ್ರುದ್ದೀನ ಮೊಟ್ಟೆಯ ವ್ಯಾಪಾರದಲ್ಲಿ ಬಹುಕಾಲದಿಂದ ತೊಡಗಿಕೊಂಡಿದ್ದ. ಅದು ಅವನ ಉಪಜೀವನದ ದಾರಿಯಾಗಿತ್ತು. ಅದೊಂದು ದಿನ ಅವನ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಅವನಿಗೆ ಕಾಣದಂತೆ ಅಲ್ಲಿನ ಮೊಟ್ಟೆಯನ್ನು ಕೈಯಲ್ಲಿ ಮುಚ್ಚಿಕೊಂಡು, ‘ನನ್ನ ಕೈಯಲ್ಲಿರುವುದು ಏನೆಂದು ಹೇಳಿದರೆ ನಾನು ನಿನ್ನಿಂದ ನೂರು ಮೊಟ್ಟೆಗಳನ್ನು ಖರೀದಿಸುವೆ’ ಎಂದ . ‘ಒಂದು ಸುಳಿವು ಕೊಟ್ಟರೆ ಖಂಡಿತ ನಿನ್ನ ಕೈಲ್ಲಿರುವುದು ಏನೆಂದು ಹೇಳಬಲ್ಲೆ’ ಎಂದ ನಸರುದ್ದೀನ. ಆಗ ಆ ವ್ಯಕ್ತಿ, ‘ಒಂದೇ ಏಕೆ? ಹಲವಾರು ಸುಳಿವು ಕೊಡಬಲ್ಲೆ. ನನ್ನ ಕೈಯಲ್ಲಿರುವುದು ಮೊಟ್ಟೆಯ ಆಕಾರದಲ್ಲಿದೆ. ಅದಕ್ಕೆ ಮೊಟ್ಟೆಯ ವಾಸನೆಯಿದೆ. ಮೊಟ್ಟೆಯ ರುಚಿಯಿದೆ. ಅದರಲ್ಲಿ ಬಿಳಿಯ ಮತ್ತು ಹಳದಿ ಬಣ್ಣದ ಲೋಳೆಯಾಕಾರದ ದ್ರವ್ಯವಿದೆ’ ಎಂದೆಲ್ಲ ಹೇಳಿದ. ಆಗ ನಸ್ರುದ್ದೀನ ನಸುನಕ್ಕು, ‘ಸರಿ, ಸರಿ ಈಗ ನಾನು ನಿನ್ನ ಕೈಯಲ್ಲಿ ಇರುವುದು ಏನೆಂದು ನಿಖರವಾಗಿ ಹೇಳಬಲ್ಲೆ, ನೀನು ನಿನ್ನ ಮಾತಿನಂತೆ ನೂರು ಮೊಟ್ಟೆಗಳನ್ನು ಖರೀದಿಸುವುದು ಖಂಡಿತ ತಾನೆ?’ ಎಂದ. ಆಗ ಆ ವ್ಯಕ್ತಿ ‘ನನ್ನ ಮಾತಿಗೆ ತಪ್ಪುವುದಿಲ್ಲ’ ಎಂದ. ನಸ್ರುದ್ದೀನ, ‘ಖಂಡಿತವಾಗಿ ನಿನ್ನ ಕೈಯಲ್ಲಿರುವುದು ಒಂದು ರೀತಿಯ ಕೇಕ್’ ಎಂದ.

ಅದಕ್ಕೆಂದೇ, ಭ್ರಮೆಯಿಂದ ಹೊರಬಂದು ವಾಸ್ತವವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ನಮಗೆಲ್ಲ ವೈಭೋಗಗಳಿದ್ದರೂ ಸುತ್ತಮುತ್ತಲಿನವರೆಲ್ಲ ನೋವು, ಸಂಕಟ, ದುಃಖಗಳಲ್ಲಿದ್ದರೆ ನಾವು ಕೂಡ ಸಂತೋಷದಿಂದ ಇರಲು ಸಾಧ್ಯವಿಲ್ಲ ಎಂಬ ಸತ್ಯ ಮನಗಾಣಬೇಕು. ಒಂದಷ್ಟು ಪ್ರಜ್ಞಾವಂತರಾಗಬೇಕು. ಮಮತಾಮಯಿಗಳಾಗಬೇಕು. ಬೇರೆಯವರ ನೋವು, ಸಂಕಟಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಇನ್ನೊಬ್ಬರಿಗಾಗಿ ಒಂದಷ್ಟು ಒಳ್ಳೆಯ ಕೆಲಸ ಮಾಡಬೇಕು. ಪರರ ವಿಷಯದಲ್ಲಿ ಕಾಳಜಿ, ಮಮತೆ ತೋರಿದರೆ ನಮ್ಮ ಬಗೆಗೆ ಇತರರಲ್ಲಿ ಒಳ್ಳೆಯ ಭಾವ ಮೂಡಲು ಕಾರಣವಾಗುತ್ತದೆ. ನಮ್ಮ ಕಾರಣದಿಂದಾಗಿ ಅವರು ಸಂತೋಷವಾಗಿದ್ದಾರೆ ಎಂಬ ಭಾವ ಅವರಲ್ಲಿ ಮೂಡಿದಾಗ, ಅದನ್ನು ನಾವು ಗಮನಿಸಿದಾಗ ಅದರಿಂದ ನಮ್ಮಲ್ಲಿ ಮೂಡುವ ಒಂದು ಬಗೆಯ ಖುಷಿ, ಆಹ್ಲಾದಕರ ಅನುಭವ ನಿಜಕ್ಕೂ ಶ್ರೇಷ್ಠವಾದದ್ದು. ಅದಕ್ಕೆ ಬೆಲೆ ಕಟ್ಟಲಾಗದು. ಅಂತಹ ಧನ್ಯತಾಭಾವ ನಮ್ಮದಾದಾಗ ಬದುಕು ಸಾರ್ಥಕವೆನಿಸುತ್ತದೆ.

(ಲೇಖಕರು ಅಧ್ಯಾಪಕರು ಹಾಗೂ ಹವ್ಯಾಸಿ ಬರಹಗಾರರು)