ಅಸ್ನೋಟಿಕರ್ ಠೇವಣಿ ಉಳಿಸಿಕೊಳ್ಳಲಿ

ಶಿರಸಿ: ಆನಂದ ಅಸ್ನೋಟಿಕರ್ ದೇವೇಗೌಡರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಾರೋ ಅಥವಾ ದೇಶಪಾಂಡೆ ಅವರ ನೇತೃತ್ವದಲ್ಲೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಇದುವರೆಗೂ ವಿರೋಧಿಸುತ್ತಿದ್ದ ದೇಶಪಾಂಡೆ ಈಗ ಒಮ್ಮೆಲೇ ಅವರಿಗೆ ಆತ್ಮೀಯರಾಗಿದ್ದನ್ನು ಜನ ಒಪ್ಪುವುದಿಲ್ಲ ಎಂದು ಮಾಜಿ ಶಾಸಕ, ಬಿಜೆಪಿಯ ಸುನೀಲ ಹೆಗಡೆ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು,‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ ಪಡೆಯಲಿದೆ. 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಜಯಗಳಿಸಲಿದೆ. ಜೆಡಿಎಸ್ ಅಭ್ಯರ್ಥಿ ಗೆಲ್ಲುವ ಮಾತು ಹಾಗಿರಲಿ, ಠೇವಣಿ ಉಳಿಸಿಕೊಳ್ಳಲು ಯತ್ನಿಸಲಿ’ ಎಂದರು.

ಅನಂತಕುಮಾರ ಹೆಗಡೆ ಏನು ಮಾಡಿದ್ದಾರೆ ಎಂದು ಕೇಳುವ ಆನಂದ ಅಸ್ನೋಟಿಕರ್, ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಕಳೆದ ಒಂದು ವರ್ಷದಲ್ಲಿ ಜಿಲ್ಲೆಗೆ ಏನು ಅಭಿವೃದ್ಧಿ ಕಾರ್ಯಗಳನ್ನು ತಂದಿದ್ದಾರೆ? ಕಾರವಾರಕ್ಕೆ ವೈದ್ಯಕೀಯ ಮಹಾವಿದ್ಯಾಲಯ ತಂದಿದ್ದೇನೆ ಎಂದು ಎಲ್ಲಡೆ ಅವರು ಹೇಳುತ್ತ ಸಾಗಿದ್ದಾರೆ. ವೈದ್ಯಕೀಯ ಕಾಲೇಜ್ ಮಂಜೂರಾಗುವಾಗ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಆಗ ಅವರೂ ಬಿಜೆಪಿಯಿಂದಲೇ ಆರಿಸಿ ಬಂದವರಾಗಿದ್ದರು. ಅವರು ಮಾಡಿದ ಕಾರ್ಯ ಬಿಜೆಪಿ ಸರ್ಕಾರದ್ದೇ ಹೊರತೂ ಅವರ ಜೇಬಿನ ಹಣವಲ್ಲ. ಹಣ ತರುವ ಶಕ್ತಿ ಇದ್ದರೆ ಈಗಿನ ರಾಜ್ಯ ಸರ್ಕಾರಿಂದ ತಂದು ತೋರಿಸಲಿ. ಈಗ ಆರ್ ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇನೆ ಎಂದು ಹೇಳಿಕೆ ನೀಡುತ್ತಿರುವ ಅಸ್ನೋಟಿಕರ್, ಇತ್ತೀಚೆಗಷ್ಟೇ ಅವರ ಮೇಲೆ ಹರಿಹಾಯ್ದಿದ್ದರು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ತಾವು ತಂದ ಸಣ್ಣ ಪುಟ್ಟ ಕಾಮಗಾರಿಗಳಿಗೂ ದೊಡ್ಡದಾಗಿ ಜಾಹೀರಾತು ಪ್ರಕಟಿಸಿಕೊಂಡು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಉದ್ಘಾಟಿಸಬಹುದಾದ ಕಾಮಗಾರಿಗಳನ್ನು ಇವರು ಉದ್ಘಾಟಿಸುತ್ತಿರುವುದು ಸಾಧನೆ ಎನಿಸಿಕೊಳ್ಳುತ್ತದೆಯೆ ಎಂದು ಪ್ರಶ್ನಿಸಿದರು.

ಪ್ರಮುಖರಾದ ಈಶ್ವರ ನಾಯ್ಕ, ಚಂದ್ರು ಎಸಳೆ, ಉಮೇಶ ನಾಯ್ಕ, ಗಣಪತಿ ನಾಯ್ಕ, ರಮಾಕಾಂತ ಭಟ್, ಆರ್. ವಿ. ಹೆಗಡೆ ಇತರರಿದ್ದರು.

ಕಾಂಗ್ರೆಸ್ ನಾಯಕರು ಬನಿಯನ್ ಹಾಕಿಕೊಂಡು ನಿದ್ರಿಸುತ್ತಿದ್ದರೂ ಅಸ್ನೋಟಿಕರ್ ಅವರನ್ನು ಎಬ್ಬಿಸಿ ಸಹಕಾರ ಕೇಳುತ್ತಿದ್ದಾರೆ. ಅವರ ಪಕ್ಷದವರೇ ಆದ ಎ. ರವೀಂದ್ರನಾಥ ನಾಯ್ಕ ಅವರನ್ನು ಇನ್ನೂ ಭೇಟಿ ಮಾಡಿಲ್ಲ.| ಸುನೀಲ ಹೆಗಡೆ ಮಾಜಿ ಶಾಸಕ