ಚಿತ್ರದುರ್ಗ: ಚಿತ್ರದುರ್ಗದಲ್ಲಿ ಐದು ಅಸ್ತಿ ಪಂಜರಗಳು ದೊರೆತ ಮನೆ ಈ ಹಿಂದೆ ಕ್ರಯಪತ್ರ ವಿಷಯಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ವಿಚಿತ್ರ ಎಂದರೆ ಈ ಪ್ರಕರಣದಲ್ಲಿ ಜಗನ್ನಾಥ್ ರೆಡ್ಡಿ ಕುಟುಂಬಸ್ಥರು ಜಯ ಸಾಧಿಸಿದ್ದರೂ ಈ ಮಾಹಿತಿ ಅವರಿಗೆ ತಿಳಿದಿರಬಹುದಾದ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಕೋರ್ಟ್ ತೀರ್ಪು ಬರುವ ವೇಳೆ ಅವರು ಚಿಕಿತ್ಸೆಗೆಂದು ಕೇರಳಕ್ಕೆ ಹೋಗಿದ್ದರಿಂದ ಸಂಪರ್ಕಕ್ಕೆ ಸಿಗದೆ ವಿಷಯ ತಲುಪಿರಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ, ನರೇಂದ್ರ ರೆಡ್ಡಿ ಇದೇ ಮನೆಯಲ್ಲಿ ವಾಸವಿದ್ದರು.
ಸ್ಪೇಸಿಫಿಕ್ ಪರ‌್ಫಾರ್ಮೆನ್ಸ್ ಆಫ್ ಕಾಂಟ್ರಾಕ್ಟ್ (ಸೇಲ್ ಅಗ್ರಿಮೆಂಟ್) ಹಾಗೂ ಕ್ರಯಪತ್ರ ಸಂಬಂಧ ಕೃಷ್ಣಾರೆಡ್ಡಿ ಕೋರ್ಟ್‌ಗೆ ಅಲೆದಾಡಿದ್ದರು. ವಿಚಾರಣೆ ನಡೆಸಿದ್ದ ಸಿವಿಲ್ ನ್ಯಾಯಾಲಯ 2019ರಲ್ಲಿ ಪ್ರಕರಣ ವಜಾಗೊಳಿಸಿ ಕೃಷ್ಣಾರೆಡ್ಡಿ ಪರ ತೀರ್ಪು ಪ್ರಕಟಿಸಿತ್ತು.
ಪ್ರತಿವಾದಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಿರುವ ವಿಷಯವನ್ನು ಕೃಷ್ಣಾ ರೆಡ್ಡಿಗೆ ತಿಳಿಸಲು ಅವರ ಪರ ವಕೀಲರು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಹಿಂದೆ ಭೂ ವಿವಾದ ಕೇಳಿ ಬಂದ ಬಳಿಕ ಇದೀಗ ಈ ವಿಷಯ ಕೇಳಿ ಬಂದಿದೆ.
ದೊಡ್ಡಸಿದ್ದವ್ವನಹಳ್ಳಿಯಲ್ಲಿ ಜಗನ್ನಾಥ್ ರೆಡ್ಡಿ ಕುಟುಂಬಸ್ಥರ ಹೆಸರಲ್ಲಿದ್ದ 15 ಎಕರೆ ಜಮೀನು ಕೂಡ ವಿವಾದದಲ್ಲಿತ್ತು. ಇದನ್ನು ಖಾಸಗಿಯವರು ನಿವೇಶನಗಳಾಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಇದರ ಸ್ಥಿತಿಗತಿ ತಿಳಿದಿಲ್ಲ.
*ಕೇರಳ, ಬೆಂಗಳೂರು ಇತರೆಡೆ ಚಿಕಿತ್ಸೆ
ಐವರಲ್ಲಿ ಮೂವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಕೊಲಂಬಿಯಾ ಏಷ್ಯಾ, ಫೋರ್ಟಿಸ್ ಸೇರಿ ಬೆಂಗಳೂರು ಮತ್ತು ಕೇರಳದ ಇತರೆಡೆ ಚಿಕಿತ್ಸೆಗೆ ಹೋಗಿ ಬರುತ್ತಿದ್ದರೆಂಬ ಅಂಶ ತಿಳಿದು ಬಂದಿದೆ. ಈ ಸಂಬಂಧ ಕೇಸ್ ಶೀಟ್ ಹಾಳೆಗಳು ಮನೆಯೊಳಗೆ ಸಿಕ್ಕಿವೆ. ಆದರೆ, ಫೈಲ್ ಮೇಲ್ಭಾಗ ಚಿಕಿತ್ಸೆ ಪಡೆಯುತ್ತಿದ್ದವರ ಹೆಸರಿಲ್ಲ. ಒಟ್ಟಾರೆ ಇಡೀ ಪ್ರಕರಣ ದಿನಕ್ಕೊಂದು ಅಚ್ಚರಿ ಅಂಶಗಳೊಂದಿಗೆ ಕುತೂಹಲ ಹೆಚ್ಚಿಸುತ್ತಿದೆ.
*ಸಂಬಂಧಿಕರಿಂದ 3ನೇ ದಿನದ ಕಾರ್ಯ
ಮೃತರ ಮೂರನೇ ದಿನದ ಕಾರ್ಯವನ್ನು ಜೋಗಿಮಟ್ಟಿ ರಸ್ತೆಯ ರುದ್ರಭೂಮಿಯಲ್ಲಿ ಅವರ ಸಂಬಂಧಿಕರು ಸೋಮವಾರ ನೆರವೇರಿಸಿದರು. ಸಂಬಂಧಿಗಳಾದ ತಿಮ್ಮಾರೆಡ್ಡಿ, ಪುರುಷೋತ್ತಮ ರೆಡ್ಡಿ, ಪ್ರಕಾಶ್ ರೆಡ್ಡಿ, ಪ್ರಹ್ಲಾದ್ ರೆಡ್ಡಿ, ಶ್ರೀಧರ್ ರೆಡ್ಡಿ, ವೆಂಕಟೇಶ್ ರೆಡ್ಡಿ, ಪೃಥ್ವಿ ರೆಡ್ಡಿ, ಪವನ್ ಇತರರಿದ್ದರು.
*ಸಂಪರ್ಕ ಕಡಿತ
ಈ ಕುಟುಂಬ ಕಳೆದ 15 ವರ್ಷಗಳಲ್ಲಿ ಸಂಬಂಧಿಗಳು, ಹಿತೈಷಿಗಳು, ಸ್ನೇಹಿತರ ಸಂಪರ್ಕ ಕಡಿತಗೊಳಿಸಿಕೊಂಡು ಬಂದಿದೆ. ಇದಕ್ಕೆ ಅತಿಯಾದ ಮಾನಸಿಕ ನೋವು ಕಾರಣವಿರಬಹುದು. ಯಾರೊಂದಿಗೂ ತಮ್ಮ ಕುಟುಂಬದ ಸಮಸ್ಯೆ ಎಂದಿಗೂ ಹಂಚಿಕೊಂಡಿಲ್ಲ ಎನ್ನುತ್ತಾರೆ ಸಂಬಂಧಿ ಪವನ್.
*ಡೆತ್‌ನೋಟ್ ಪತ್ತೆ? ಸುಳಿವು ಬಿಟ್ಟುಕೊಡದ ಪೊಲೀಸರು
ಮನೆಯಲ್ಲಿ ಸಿಕ್ಕಿದೆಂದು ಹೇಳಲಾಗಿರುವ ಡೆತ್‌ನೋಟ್‌ನಲ್ಲಿ ಡಿಎಸ್‌ಹಳ್ಳಿ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ವಿವಾದ ಹಾಗೂ ಅದಕ್ಕೆ ಸಂಬಂಧಿಸಿದಂತೆ ಇಬ್ಬರ ಕಿರುಕುಳ ಹಾಗೂ ಇನ್ನಿತರ ಕಾರಣಗಳಿಗೆ ಸಂಬಂಧಿಸಿದಂತೆ ಕುಟುಂಬದ ಸಾಮೂಹಿಕ ಆತ್ಮಹತ್ಯೆಗೆ ಕಾರಣವಾಯಿತೇ?
ಈಗ ಪೊಲೀಸರು, ಆ ಇಬ್ಬರ ವಿಚಾರಣೆಗೆ ಮುಂದಾಗಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರೇ ಉತ್ತರಿಸಬೇಕಿದೆ. ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿರುವ ಈ ಪ್ರಕರಣದಲ್ಲಿ ಡೆತ್‌ನೋಟ್ ದೊರಕಿದೆ ಎಂದು ಸುದ್ದಿ ವ್ಯಾಪಕವಾಗಿ ಹರಡಿದೆ. ಆದರೆ, ಪೊಲೀಸರು ಖಚಿತಪಡಿಸಿಲ್ಲ.
ಎಫ್‌ಎಸ್‌ಎಲ್ ತಜ್ಞರಿಗೆ ಏನಾದರೂ ದೊರೆತಿರಬೇಕು, ನಮಗಂತೂ ಡೆತ್‌ನೋಟ್ ಸಿಕ್ಕಿಲ್ಲವೆಂದು ತನಿಖಾಧಿಕಾರಿ ಹೇಳಿದ್ದಾರೆ. ದಿನಾಂಕವಿಲ್ಲದ ಬರಹದ ಹಾಳೆಯೊಂದು ಸಿಕ್ಕಿದ್ದಾಗಿ ಈ ಹಿಂದೆ ಮಾಹಿತಿ ನೀಡಿದ್ದ ಎಸ್‌ಪಿ ಧರ್ಮೇಂದರ್‌ಕುಮಾರ್, ಅದರಲ್ಲಿ ಏನಿದೆ ಎಂಬುದರ ವಿವರವನ್ನು ತಿಳಿಸಿರಲಿಲ್ಲ.
ಖಾಸಗಿ ಕಂಪನಿ ಇಂಜಿನಿಯರ್ ಆಗಿದ್ದ ಪುತ್ರ ನರೇಂದ್ರ ವಿರುದ್ಧ ಬಿಡದಿ ಠಾಣೆಯಲ್ಲಿದ್ದ ಕೇಸ್, ಅನಾರೋಗ್ಯ ಇತ್ಯಾದಿ ವಿಚಾರಗಳು ದುರಂತಕ್ಕೆ ಕಾರಣವಾಯಿತೇ ಇತ್ಯಾದಿ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಮನೆಗೆ ಅನೇಕ ಬಾರಿ ಕಳ್ಳರು ನುಗ್ಗಿರುವ ಹಾಗೂ ಬೀದಿ ನಾಯಿಗಳು ಹೊಕ್ಕಿರುವ ಶಂಕೆ ಕೂಡ ಇದ್ದು, ಬೆರಳಚ್ಚು ಮತ್ತಿತರ ದಾಖಲೆಗಳ ತನಿಖೆ ಮುಂದುವರಿದಿದೆ.
ಬಾಕ್ಸ್*ತುಮಕೂರಲ್ಲಿ 2 ತಿಂಗಳ ಸೇವೆ ಬಳಿಕ ನಿವೃತ್ತಿ
ಲೋಕೋಪಯೋಗಿ ಇಲಾಖೆ ತುಮಕೂರು ವಿಭಾಗದ ಕಚೇರಿಯಲ್ಲಿ ಎನ್.ಕೆ.ಜಗನ್ನಾಥರೆಡ್ಡಿ ಅವರು ಕಾರ‌್ಯನಿರ್ವಾಹಕ ಇಂಜಿನಿಯರ್ ಆಗಿ 1988 ಏಪ್ರಿಲ್30ರಿಂದ 1988 ಜೂನ್ 27ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಭದ್ರಾ ಮೇಲ್ದಂಡೆ ಕುರಿತು ಚರ್ಚಿಸಿದ್ದರು.
ಬಾಕ್ಸ್*ಭದ್ರಾ ಮೇಲ್ದಂಡೆ ಯೋಜನೆ ಕುರಿತು ಚರ್ಚಿಸಿದ್ದರು
ಅಂದಾಜು 25 ವರ್ಷಗಳ ಹಿಂದೆ ಇರಬಹುದು, ಸೇವೆಯಿಂದ ನಿವೃತ್ತಿಯಾಗಿದ್ದ ಜಗನ್ನಾಥರೆಡ್ಡಿ ಅವರು ಭದ್ರಾ ಮೇಲ್ದಂಡೆ ಯೋಜನೆ ಕುರಿತಂತೆ ತಮ್ಮೊಂದಿಗೆ ಚರ್ಚಿಸಿದ್ದರೆಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನೆನಪಿಸಿಕೊಂಡರು. ಪತ್ರಿಕೆಗಳಲ್ಲಿ ಅವರ ಫೋಟೊ ನೋಡಿದ ಬಳಿಕ ಈ ಅಂಶ ನೆನಪಾಯಿತು ಎಂದರು.