ಅಸ್ತಮಾ ಮತ್ತು ವೈದ್ಯಕೀಯ ಪದ್ಧತಿಗಳು

ಅಸ್ತಮಾಕಾಯಿಲೆ ಇರುವವರಿಗೆ ಇಂಥದ್ದೇ ತಿನ್ನಬೇಕು ಎನ್ನುವಂಥ ನಿರ್ದಿಷ್ಟ ಆಹಾರಪದ್ಧತಿಯೇನೂ ಇಲ್ಲ. ಆದರೆ ಯಾವುದನ್ನಾದರೂ ತಿಂದಮೇಲೆ, ಅದು ಆರೋಗ್ಯಕ್ಕೆ ಹಾಳು ಎಂದು ಅರಿವಿಗೆ ಬಂದರೆ ಮತ್ತೆ ಅದನ್ನು ಸೇವಿಸದಿರುವುದು ಉತ್ತಮ. ಈ ಕಾಯಿಲೆ ಇರುವ ಎಲ್ಲರಿಗೂ ಒಂದು ನಿರ್ದಿಷ್ಟ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಾಳು ಎಂದು ಕೂಡ ಹೇಳುವ ಹಾಗಿಲ್ಲ. ಒಬ್ಬರಿಗೆ ಯಾವುದೋ ಆಹಾರವನ್ನು ಸೇವಿಸಿದರೆ ತೊಂದರೆಯಾಗುತ್ತದೆ. ಮತ್ತೊಬ್ಬರಿಗೆ ಇನ್ಯಾವುದೋ ಬಗೆಯ ಆಹಾರಸೇವನೆ ಒಳ್ಳೆಯದಲ್ಲ. ಹೀಗಾಗಿ ತಮಗೆ ಯಾವ ಆಹಾರಸೇವನೆ ಆಗಿಬರುವುದಿಲ್ಲವೋ ಅಂಥದ್ದನ್ನು ತ್ಯಜಿಸುವುದು ಒಳ್ಳೆಯದು. ಅದಕ್ಕೆ ಅಲರ್ಜಿ ಎಂದು ಹೇಳುತ್ತಾರೆ. ಇದೇನೂ ಅನುವಂಶೀಯ ಕಾಯಿಲೆಯಲ್ಲ.

ಚಳಿಗಾಲದಲ್ಲಿ ಈ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚು. ಚಳಿಗೆ ಶ್ವಾಸಕೋಶದ ಪೈಪ್​ಗಳೆಲ್ಲ ಸ್ವಲ್ಪ ಸಣ್ಣದಾಗುತ್ತವೆ. ಅಲ್ಲದೆ ಸೂಕ್ಷಾ್ಮಣುಜೀವಿಗಳ ಸಂಖ್ಯೆಯೂ ಈ ಅವಧಿಯಲ್ಲಿಯೇ ಹೆಚ್ಚಾಗಿರುತ್ತದೆ. ಅಷ್ಟಲ್ಲದೆ ಚಳಿಯಲ್ಲಿ ಸರಿಯಾಗಿ ಬೆಚ್ಚಗಿನ ಬಟ್ಟೆ ಧರಿಸದೆ ಹೊರಗೆ ಹೋದರೆ ಈ ಕಾಯಿಲೆ ಬರಬಹುದು. ಬೆಚ್ಚಗಿನ ಬಟ್ಟೆಗಳನ್ನು ಧರಿಸದೆ ಚಳಿಗಾಳಿಗೆ ಹಾಗೆಯೇ ಕಿವಿ, ಮೂಗು, ತಲೆಯನ್ನೆಲ್ಲ ತೆರೆದಿಟ್ಟರೆ ತಂಪಿನಿಂದಾಗಿಯೂ ಅಸ್ತಮಾ ಬರಬಹುದು. ಅಸ್ತಮಾದ ಆರಂಭಿಕ ಲಕ್ಷಣಗಳಲ್ಲಿ ಕೆಮ್ಮು ಮುಖ್ಯವಾದದ್ದು. ಆರಂಭದಲ್ಲಿ ಕೇವಲ ಕೆಮ್ಮೇ ಇರಬಹುದು. ಉಸಿರು ತೆಗೆಯಲು ಕಷ್ಟವಾಗುವುದು ಎರಡನೆಯ ಹಂತದ ಲಕ್ಷಣ. ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಅಸ್ತಮಾ ಇರುವಾಗ ಕೆಮ್ಮು ಹೆಚ್ಚಾಗಿ ಬರುತ್ತದೆ. ಯಾವುದೂ ಕಾರಣ ಇಲ್ಲದೆ ಕೆಮ್ಮು ಬರುವುದು, ಕಫ ಬರದೆ ಕೆಮ್ಮು ಮಾತ್ರ ಬರುವುದು – ಇದನ್ನು ಅಸ್ತಮಾದ ತಮ್ಮ ಎಂದು ಕರೆಯಬಹುದು. ಹೀಗೆ ಕೆಮ್ಮು ಬರುತ್ತಿರುವಾಗಲೇ ಬೇಗ ತಜ್ಞ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕು. ಅಸ್ತಮಾ ಇದೆಯೇ ಇಲ್ಲವೇ ಎಂಬುದು ಉಸಿರಾಟದ ಪರೀಕ್ಷೆಯಲ್ಲಿ ವೈದ್ಯರಿಗೆ ತಿಳಿದುಬರುತ್ತದೆ.

ಆಯುರ್ವೆದದಲ್ಲಿಯೂ ಇದಕ್ಕೆ ಔಷಧಗಳಿವೆ. ಆದರೆ ಯಾವುದು ಉತ್ತಮ ಔಷಧಪದ್ಧತಿ ಎಂದು ಹೇಳಲು ಬರುವುದಿಲ್ಲ. ಕಾಯಿಲೆ ಯಾವುದು ಎಂದು ತಿಳಿದುಬಂದರೆ ಆಯುರ್ವೆದ ಔಷಧವೂ ಆಗಬಹುದು, ಇಂಗ್ಲಿಷ್ ವೈದ್ಯಪದ್ಧತಿಯೂ ಆಗಬಹುದು. ಇವೆರಡು ಪದ್ಧತಿಗಳಲ್ಲೂ ಅಸ್ತಮಾಕ್ಕೆ ಒಳ್ಳೆಯ ಔಷಧಗಳಿವೆ. ಎಲ್ಲ ಔಷಧಗಳ ತಯಾರಿಕೆ ಪ್ರಾರಂಭವಾಗುವುದೂ ಗಿಡಮೂಲಿಕೆಗಳಿಂದಲೇ. ಅಸ್ತಮಾಕ್ಕೆ ಇಂಗ್ಲಿಷ್ ಔಷಧ ಮಾಡಿದರೂ ಆ ಔಷಧ ಬರುವುದು ಗಿಡಮೂಲಿಕೆಗಳಿಂದಲೇ ಆಗಿರುತ್ತದೆ. ಆಯುರ್ವೆದ ಚಿಕಿತ್ಸೆಯ ಪರಿಣಾಮ ನಿಧಾನವಾಗಿರುತ್ತದೆ, ಇಂಗ್ಲಿಷ್ ವೈದ್ಯಪದ್ಧತಿಯಾದರೆ ಬೇಗ ಗುಣವಾಗುತ್ತದೆ ಎಂಬ ಅಭಿಪ್ರಾಯ ಅನೇಕ ಜನರಲ್ಲಿದೆ. ಆದರೆ ಇದು ಸರಿಯಲ್ಲ. ಎರಡೂ ಔಷಧ ಒಂದೇ. ಆದರೆ ಇಂಗ್ಲಿಷ್​ಪದ್ಧತಿಯಲ್ಲಿ ಔಷಧ ಹೆಚ್ಚು ಪರಿಷ್ಕರಿಸಲ್ಪಟ್ಟಿರುತ್ತದೆ (ಛ್ಛಿಜ್ಞಿಛಿಛ). ಅದರಲ್ಲಿ ನೇರ ರಾಸಾಯನಿಕ ಪದಾರ್ಥವಿರುತ್ತದೆ. ಹೀಗಾಗಿ ಅದರ ಕಾರ್ಯಚರಣೆ ವೇಗವಾದುದು. ಆದರೆ ಆಯುರ್ವೆದೀಯ ಔಷಧ ಹಾಗಲ್ಲ. ಅದರಲ್ಲಿನ ರಾಸಾಯನಿಕಗಳು ಕಚ್ಚಾ ರೂಪದಲ್ಲಿರುತ್ತವೆ. ಹೀಗಾಗಿ ಅದರ ಪರಿಣಾಮಗಳು ನಿಧಾನವಾಗಿರುತ್ತವೆ. ಇನ್ನು ಔಷಧಗಳ ಪಾರ್ಶ್ವ ಪರಿಣಾಮಗಳ ಬಗ್ಗೆ ಹೇಳುವುದಾದರೆ – ಇಂಗ್ಲಿಷ್ ಔಷಧಗಳಿಂದಲೇ ಇವು ಹೆಚ್ಚು. ಎಷ್ಟೇ ಆದರೂ ಅವುಗಳ ಕಾರ್ಯಾಚರಣೆ ಬೇಗ ಅಲ್ಲವೆ?

ಮಕ್ಕಳಲ್ಲಿ ಕಫ ಹೆಚ್ಚಾಗಲು ಕೂಡ ಸೋಂಕೇ ಕಾರಣ. ಚಳಿಗಾಲದಲ್ಲಿ ಅಥವಾ ತಂಪು ಹವಾಮಾನದಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಹಾಕದೆ ಹೊರಕ್ಕೆ ಕೊಂಡೊಯ್ದರೆ ಅವರಿಗೆ ಇಂತಹ ತೊಂದರೆ ಆಗಬಹುದು. ಮಕ್ಕಳನ್ನು ಬೆಚ್ಚಗಿಡುವುದು, ಅವರ ಮಲಗುವ ಸ್ಥಳ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು, ಮಲಗುವ ಕೋಣೆಗೆ ನಾಯಿ-ಬೆಕ್ಕುಗಳೆಲ್ಲ ಬರದಂತೆ ನೋಡಿಕೊಳ್ಳುವುದು – ಇವೇ ಮುಂತಾದ ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಅವು ಮನೆಯಲ್ಲೇ ಇಲ್ಲದಿದ್ದರೆ ಬಹಳ ಒಳ್ಳೆಯದು. ಎಲ್ಲ ಕಾಲದಲ್ಲೂ ಮಕ್ಕಳಿಗೆ ಇಂತಹ ಸಮಸ್ಯೆಗಳು ಇದ್ದವು. ಇವೇನೂ ಹೊಸದಲ್ಲ. ಸಣ್ಣ ವಯಸ್ಸಿನಲ್ಲಿ ಅಸ್ತಮಾ ಇದ್ದರೂ ಗುಣಪಡಿಸಬಹುದು. ಆದರೆ ಕೆಲವರಿಗೆ ಗುಣಪಡಿಸಲು ಆಗುವುದಿಲ್ಲ. ಇದಕ್ಕೆ ನಿರ್ದಿಷ್ಟ ಕಾರಣವೂ ತಿಳಿದಿಲ್ಲ.