Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಅಸುರ ಹಿರಣ್ಯಾಕ್ಷನ ದುರಾಡಳಿತ

Saturday, 11.08.2018, 3:04 AM       No Comments

| ಡಾ. ಕೆ.ಎಸ್. ನಾರಾಯಣಾಚಾರ್ಯ

‘‘ಭಗವಂತನಿಂದಲೇ ಸಾಯುವುದಾದರೂ ಸರಿಯೇ!’’ ಎಂದು ವಾದಿಸಿ ದಿತಿ, ಕಶ್ಯಪನಿಂದ ಗರ್ಭ ಧರಿಸಿದಳು! ಕಶ್ಯಪ ಹೇಳಿದ! ‘‘ನಿನ್ನ ಮಕ್ಕಳಿಬ್ಬರೂ ದುಷ್ಟರಾದರೂ, ಮೊಮ್ಮಗನೊಬ್ಬ ಕುಲೋದ್ಧಾರಕನಾಗಿ, ಕುಲದೀಪನೆನಿಸುತ್ತಾನೆ.’’ ದಿತಿ, ತನ್ನ ಮಕ್ಕಳಿಗೆ ಭಗವಂತನಿಂದ ಮರಣವೆಂಬುದಕ್ಕೆ ಭೀತಿ ಹೊಂದಲಿಲ್ಲ! ಹಿಗ್ಗಿದಳು! ಅದು ದೈವಮಾಯೆ!

ದಿತಿ ಗರ್ಭ ನೂರು ವರ್ಷ ಇದ್ದಿತು! ಅದರ ದೈತ್ಯ ತೇಜಸ್ಸು ಸೂರ್ಯಚಂದ್ರರ ಕಾಂತಿಯನ್ನೇ ಮುಸುಕಿತು! ಪ್ರಸವಕಾಲದಲ್ಲಿ ಉತ್ಪಾತಗಳಾದವು. ಬೆಟ್ಟಗಳು ಅಲುಗಾಡಿದವು. ಉಲ್ಕೆಗಳು ಆಗಸದಿಂದ ಸಿಡಿದುಬಿದ್ದವು. ಬಿರುಗಾಳಿ ಬೀಸಿ ಮರಗಿಡಗಳು ಪ್ರಾಸಾದಗಳೂ ಉರುಳಿದವು. ಆಕಾಶವೆಲ್ಲ ಹಗಲಲ್ಲೇ ಕತ್ತಲಾಯಿತು. ಜಪತಪನಿಷ್ಠರಿಗೆ ಆಹ್ನಿಕಕ್ಕೆ ವೇಳೆಗಳೇ ತಿಳಿಯದಾದವು… ಮೊದಲು ಹುಟ್ಟಿದವನು ಹಿರಣ್ಯಕಶಿಪು ಎನಿಸಿದ… ಆಮೇಲಿನವನೇ ಹಿರಣ್ಯಾಕ್ಷ ಎಂದು ಖ್ಯಾತನಾದ! ಹುಟ್ಟುವಾಗಲೇ ಉಕ್ಕಿನ ಮೈಯೊಡನೆ, ಬೃಹದಾಕಾರದಲ್ಲಿ, ಅಬ್ಬರದೊಡನೆ, ಲೋಕವೇ ಹೆದರುವಂತೆ ಗರ್ಜಿಸುತ್ತಾ ಹುಟ್ಟಿದ ಮಕ್ಕಳಿಗೆ ತಂದೆಯೇ ಹಾಗೆ ನಾಮಕರಣ ಮಾಡಿದ…! ಅಣ್ಣತಮ್ಮಂದಿರಲ್ಲಿ ಲೋಕಹಿಂಸಾ ವಿಹಾರವ್ರತದಲ್ಲಿ ಪರಸ್ಪರ ಒಮ್ಮತವಿದ್ದಿತು! ಈ ಒಮ್ಮತದಿಂದ ಹಿರಣ್ಯಕಶಿಪುವು ಜಗತ್ತಿಗೇ ಅಧಿಪತಿಯಾಗಲು ಬಯಸಿದ! ತಮ್ಮ ದಿಗ್ವಿಜಯಕ್ಕೆ ಹೊರಟ! ತಮ್ಮನೆಂದರೆ ಅಣ್ಣನಿಗೆ ಬಲು ಪ್ರೀತಿ… (ಪ್ರಿಯಃ ಪ್ರೀತಿಕೃತ್ ಅನ್ವಹಂ ಎನ್ನುತ್ತಾರೆ, ಶುಕರು!) ಗದೆಯನ್ನು ಹಿಡಿದವನು ಹಿರಣ್ಯಾಕ್ಷ ದಿಗ್ವಿಜಯಕ್ಕೆ ಹೊರಟೇಬಿಟ್ಟ!

ಇಂದ್ರಲೋಕಕ್ಕೆ ಹಿರಣ್ಯಾಕ್ಷ ಬರುವ ವಾರ್ತೆಯನ್ನು ಕೇಳಿಯೇ ಇಂದ್ರ, ಪರಿವಾರದೊಡನೆ ತಲೆಮರೆಸಿಕೊಂಡ! ದೇವತೆಗಳೆಲ್ಲ ಅಂತರ್ಧಾನರಾದರು…! ಭೂಮಿಯಲ್ಲಿ ತನಗಾರೂ ಎಣೆಯಿಲ್ಲವೆಂಬ ದುರಹಂಕಾರದಿಂದ ಇವನು ದೇವಲೋಕಕ್ಕೆ ಹೋದರೆ, ಆ ದೇವತೆಗಳೂ ಹೆದರಬೇಕೆ…? ಹಿರಣ್ಯಾಕ್ಷನಿಗೆ ತನ್ನ ತೋಳಬಲವನ್ನು ಪರೀಕ್ಷಿಸಲು ಅವಕಾಶವೇ ಆಗಲಿಲ್ಲ! ಸುಲಭವಾಗಿ ಇಂದ್ರಾದಿ ಲೋಕಗಳೆಲ್ಲ ವಶವಾದವು! ತೋಳತೀಟೆಗಾಗಿ, ಅವನು ಭೂಲೋಕದ ಜನರಲ್ಲಿ ಬಲಿಷ್ಠರಾದವರನ್ನೆಲ್ಲ ನಾನಾ ರೀತಿಯಲ್ಲಿ ಪೀಡಿಸಲಾರಂಭಿಸಿದ…! ಋಷಿಮುನಿಗಳ ಬಾಯಿ ಕಟ್ಟಿದ! ಕಟ್ಟದವರನ್ನು ಸಾಮೂಹಿಕವಾಗಿ ಸುಡಿಸಿದ! ತನ್ನನ್ನು ಎಲ್ಲರೂ ಎಲ್ಲೆಲ್ಲೂ ಸ್ತುತಿಸುವಂತೆ ಆಜ್ಞೆ ಮಾಡಿದ! ಪುಂಡರ ಹಿಂಡನ್ನೆಲ್ಲ ಕಟ್ಟಿ ‘‘ಇದು ಶಾಂತಿಸ್ಥಾಪನೆಗೆ ಸೈನ್ಯ’’ ಎಂದ; ಸ್ಥಿರರಾಜ್ಯವನ್ನು, ಸರ್ಕಾರವನ್ನು, ತಾನೊಬ್ಬನೇ ಒದಗಿಸುವುದಾಗಿಯೂ, ಹೇಡಿಗಳಾದ ದೇವತೆಗಳ ಪೂಜೆಯನ್ನು ಯಾರೂ ಮಾಡತಕ್ಕದ್ದಲ್ಲವೆಂದೂ ರಾಷ್ಟ್ರದಲ್ಲಿ ಡಂಗುರ ಸಾರಿಸಿದ!

‘‘ಪ್ರಗತಿ’’ಪರವಾದ ಅನೇಕ ಯೋಜನೆಗಳನ್ನು ಹಾಕಿಕೊಂಡ; ಇವೆಲ್ಲ ಮುಂದೆ ಶಂಬರಾಸುರನ ಅರ್ಥಶಾಸ್ತ್ರ ರಚನೆಗೆ ಉಪುಯೋಗವಾಗುವಂತೆ, ದಾಖಲೆಗಳಾಗುವಂತೆ ಮಾಡಿದ! ದೇವಾಲಯಗಳು ಜನರ ವೇಳೆ, ಹಣ, ಬುದ್ಧಿಗಳನ್ನು ಹಾಳುಗೆಡವುವುದುದರಿಂದ ಅವುಗಳನ್ನು ನಾಶಪಡಿಸಲು ನಾಜೂಕಾದ ತಂತ್ರಗಳನ್ನು ರೂಪಿಸಿದ! ದೇವರೇ ಇಲ್ಲವೆಂಬುವರ ತಂಡವನ್ನು ಕಟ್ಟಿ, ಎಲ್ಲೆಲ್ಲೂ ಅದು ಈ ದೃಷ್ಟಿಕೋನವನ್ನೇ ಪ್ರಚುರಿಸುವಂತೆ ಸರ್ಕಾರದಿಂದ ಖರ್ಚು ವೆಚ್ಚಗಳನ್ನು ಕೊಡಿಸಿದ! ದೇವರು, ಧರ್ಮ, ದಯೆ, ದಾಕ್ಷಿಣ್ಯದಿಗಳು ಮೂಢನಂಬಿಕೆಗಳೆಂದೂ, ಮನಸ್ಸಿಗೆ ತೋರಿದ್ದನ್ನು ನಿರ್ಭೀತಿಯಿಂದ ಮಾಡುವ ‘‘ವೀರ’’ರು ಮಾತ್ರ ಬದುಕಿಗೆ ಅರ್ಹರೆಂಬ ಹೊಸ ಶಿಕ್ಷಣಪದ್ಧತಿಯನ್ನು ಜಾರಿಗೆ ತಂದ! ವಯಸ್ಸಾದವರು ಸಮಾಜಭಾರವಾದುದರಿಂದ ತಾವಾಗಿ ಸಾಯಲಾರದವರನ್ನು ಸಮಾಜವೇ ಕೊಂದರೆ ಎಷ್ಟೋ ಸಮಸ್ಯೆಗಳು ತೀರುವುವೆಂದು ಹೊಸ ಸಮಾಜದೃಷ್ಟಿಯನ್ನು ಎತ್ತಿ ಹಿಡಿದ!

(ಲೇಖಕರು ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)

Leave a Reply

Your email address will not be published. Required fields are marked *

Back To Top