ಕಾರವಾರ: ಆಗಸ್ಟ್ ತಿಂಗಳಲ್ಲಿ ಆವರಿಸಿದ ನೆರೆ ಕೈಗಾ ಉದ್ಯೋಗಿಗಳ ನಿವಾಸ ಮಲ್ಲಾಪುರ ಟೌನ್ಶಿಪ್ ಸುರಕ್ಷಿತವಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಹೊಸದಾಗಿ ನಿರ್ವಣವಾಗಲಿರುವ ಕೈಗಾ ಐದು ಮತ್ತು ಆರನೇ ಘಟಕದ ಸಾವಿರಕ್ಕೂ ಅಧಿಕ ಹೆಚ್ಚುವರಿ ಉದ್ಯೋಗಿಗಳಿಗೂ ಹಾಲಿ ಟೌನ್ಶಿಪ್ ವ್ಯಾಪ್ತಿಯಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲು ಭಾರತೀಯ ಅಣು ವಿದ್ಯುತ್ ನಿಗಮ (ಎನ್ಪಿಸಿಐಎಲ್)ಮುಂದಾಗಿದೆ ಎಂಬ ಮಾಹಿತಿ ಇದೆ. ನಿಗಮದ ಈ ನಡೆಯ ಬಗ್ಗೆ ಸ್ವತಃ ಉದ್ಯೋಗಿಗಳಿಂದಲೇ ಅಸಮಾಧಾನ ವ್ಯಕ್ತವಾಗುತ್ತಿದೆ.
ಆ.5 ರಿಂದ 10 ರವರೆಗೆ ಕದ್ರಾ ಅಣೆಕಟ್ಟೆಯಿಂದ ನಿರಂತರವಾಗಿ ನೀರು ಬಿಟ್ಟಿದ್ದರಿಂದ ಐದು ದಿನ ಮಲ್ಲಾಪುರ ಮುಖ್ಯ ರಸ್ತೆಯ ಬಲ ಭಾಗದಲ್ಲಿರುವ ಮಲ್ಟಿ ಸ್ಟೋರೇಜ್ ಬಿಲ್ಡಿಂಗ್ಗಳ ನೆಲ ಮಹಡಿ ಮುಳುಗಿತ್ತು. ಇನ್ನು ‘ಬಿ’ ಸ್ವರೂಪದ ಮನೆಗಳ ಸಮೀಪವೂ ನೀರು ಬಂದಿತ್ತು. ಸಿಐಎಸ್ಎಫ್ ಜವಾನರಿರುವ ಎನ್ಟಿಸಿ ಕ್ವಾರ್ಟರ್ಸ್ಗಳು ಸಂಪೂರ್ಣ ಜಲಾವೃತವಾಗಿದ್ದವು.
ಐದು ದಿನ ಉದ್ಯೋಗಿಗಳು, ಭದ್ರತಾ ಪಡೆ ಸಿಬ್ಬಂದಿ ಜಲ ದಿಗ್ಬಂಧನಕ್ಕೆ ಒಳಗಾಗಿದ್ದರು. ವಿದ್ಯುತ್ ಇರಲಿಲ್ಲ. ನೀರು ಇರಲಿಲ್ಲ. ಅಣು ವಿದ್ಯುತ್ ಘಟಕಕ್ಕೆ ಕರ್ತವ್ಯಕ್ಕೆ ತೆರಳಲು ದೋಣಿಯಲ್ಲಿ ಸಾಗಿ ಎರಡು ಕಿಮೀ ನಡೆದು ಹೋಗುವ ಪರಿಸ್ಥಿತಿ ಉಂಟಾಗಿತ್ತು. ಭದ್ರತೆಗೆ ನೇಮಕವಾದ ಸಿಐಎಸ್ಎಫ್ ಸಿಬ್ಬಂದಿ ಅಧಿಕಾರಿಗಳು ಮೂರ್ನಾಲ್ಕು ದಿನ ಹಗಲು, ರಾತ್ರಿ ನಿರಂತರ ಪಾಳಿಯನ್ನು ಅನುಸರಿಸಬೇಕಾಯಿತು. ಇದರಿಂದ ಕೈಗಾ ಉದ್ಯೋಗಿಗಳು ಕಂಗೆಟ್ಟಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಚಿಂತೆ ಅವರಿಗೆ ಪ್ರಾರಂಭವಾಗಿದೆ. ಆ ಐದು ದಿನ ಕೈಗಾ ಅಣು ಸ್ಥಾವರವನ್ನು ನಡೆಸಲು ಅಡಚಣೆ ಉಂಟಾಯಿತು. ಅದೃಷ್ಟವಶಾತ್ ಅಂಥ ಅಪಾಯ ಯಾವುದೇ ಸಂಭವಿಸದೇ ಇದ್ದರೂ ಮುಂದೆ ಅಪಾಯ ಸಂಭವಿಸಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದೇ ಪರಿಸ್ಥಿತಿ ಮತ್ತೆ ಉಂಟಾದರೆ, ಮತ್ತಷ್ಟು ವಿಕೋಪಕ್ಕೆ ಹೋದರೆ ಏನು ಗತಿ ಎಂಬ ಪ್ರಶ್ನೆ ಈಗ ಉದ್ಯೋಗಿಗಳಲ್ಲಿ ಜನರಲ್ಲಿ ಮೂಡಿದೆ. ಇದು ಕೇವಲ ಕೈಗಾ ಉದ್ಯೋಗಿಗಳ ಸುರಕ್ಷತೆಯ ಪ್ರಶ್ನೆ ಮಾತ್ರವಲ್ಲ . ಅವರು ನಿರ್ವಹಿಸುವ ಅಣು ವಿದ್ಯುತ್ ಸ್ಥಾವರದ ಸುರಕ್ಷತೆಯನ್ನೂ ಪ್ರಶ್ನೆ ಮಾಡುವಂತಾಗಿದೆ.
ನದಿ ಪಾತ್ರದ ಊರು.. ಮಲ್ಲಾಪುರ ಕಾಳಿ ನದಿಯ ದಡದ ಗ್ರಾಮ. ಇಲ್ಲಿನ ಅರ್ಧ ಭಾಗವನ್ನು ಎನ್ಪಿಸಿಐಎಲ್ ವಶಪಡಿಸಿಕೊಂಡು ಟೌನ್ಶಿಪ್ ನಿರ್ಮಾಣ ಮಾಡಿದೆ. ತಲಾ 220 ಮೆಗಾವ್ಯಾಟ್ಗಳ 4 ಘಟಕಗಳನ್ನು ಹೊಂದಿರುವ ಕೈಗಾದಲ್ಲಿ 1500 ರಷ್ಟು ಭಾರತೀಯ ಅಣು ವಿದ್ಯುತ್ ನಿಗಮ(ಎನ್ಪಿಸಿಐಎಲ್)ದ ಕಾಯಂ ಉದ್ಯೋಗಿಗಳು ಹಾಗೂ 1300 ಕ್ಕೂ ಅಧಿಕ ಗುತ್ತಿಗೆ ಉದ್ಯೋಗಿಗಳು ಪಾಳಿಯ ಆಧಾರದ ಮೇಲೆ 24 ಗಂಟೆಯೂ ಕಾರ್ಯನಿರ್ವಹಿಸುತ್ತಾರೆ. ಘಟಕದಿಂದ 12 ಕಿಮೀ ದೂರದಲ್ಲಿ ಮಲ್ಲಾಪುರ ಟೌನ್ಶಿಪ್ಇದ್ದು, ಕೇಂದ್ರದ ನಿರ್ದೇಶಕರಿಂದ ಹಿಡಿದು ಭದ್ರತೆಯ ಜವಾಬ್ದಾರಿ ಹೊತ್ತ ಸಿಐಎಸ್ಎಫ್ನ ಜವಾನನವರೆಗೆ ಎಲ್ಲ ಉದ್ಯೋಗಿಗಳೂ ಇಲ್ಲೇ ವಾಸ್ತವ್ಯ ಪಡೆದಿದ್ದಾರೆ. ಅಂದರೆ ಕೈಗಾ ಘಟಕದ ನಿಯಂತ್ರಿಸುವ ಪ್ರತಿಯೊಬ್ಬರೂ ಮಲ್ಲಾಪುರದಲ್ಲೇ ಇರುವುದರಿಂದ ಟೌನ್ಶಿಪ್ಗೆ ತೊಂದರೆ ಉಂಟಾದರೆ ಕೈಗಾ ಘಟಕಕ್ಕೂ ತೊಂದರೆ ಎಂದೇ ಅರ್ಥ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಅಸಮರ್ಪಕ ನಿರ್ವಹಣೆ: ನೆರೆಯ ಸಂದರ್ಭವನ್ನು ನಿರ್ವಹಿಸಿರುವ ಕೈಗಾ ಆಡಳಿತ ವ್ಯವಸ್ಥೆಯ ಬಗ್ಗೆಯೂ ಉದ್ಯೋಗಿಗಳ ಅಸಮಾಧಾನವಿದೆ. ನೆರೆಯಿಂದ ಟೌನ್ಶಿಪ್ಗೆ ನೀರು ಪೂರೈಸುವ ವ್ಯವಸ್ಥೆ ಹಾಳಾಗಿತ್ತು. ನೆರೆ ಇಳಿದು ತಿಂಗಳಾದರೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಾಗಿಲ್ಲ. ಕೈಗಾ ಕೆಲ ಉದ್ಯೋಗಿಗಳು ಗುಡ್ಡ ಬೆಟ್ಟದಿಂದ ನೀರು ಸಂಗ್ರಹಿಸುತ್ತಿದ್ದಾರೆ. ಸ್ನಾನಕ್ಕೆ, ಬಟ್ಟೆ ತೊಳೆಯಲು ಹಳ್ಳಕ್ಕೆ ತೆರಳುತ್ತಿದ್ದಾರೆ. ಟ್ಯಾಂಕರ್ ಮೂಲಕ ಕೆಲ ದಿನ ನೀರು ಕೊಟ್ಟರೂ ಅದನ್ನು ಎರಡು, ಮೂರನೇ ಮಹಡಿಗೆ ಹೊತ್ತೊಯ್ಯುವುದು ದೊಡ್ಡ ಸವಾಲಾಗಿದೆ.
ಆತಂಕಗಳೇನು..?
*ಕದ್ರಾದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿದರೆ ಇನ್ನೊಮ್ಮೆ ವಸತಿ ಸಮುಚ್ಛಯಗಳಿಗೆ ನೀರು ತುಂಬಿ ಉದ್ಯೋಗಿಗಳು ಕೆಲಸಕ್ಕೆ ತೆರಳಲೂ ತೊಂದರೆ ಉಂಟಾಗುವ ಸಾಧ್ಯತೆ ಇದೆ.
*ಐದು ಆರನೇ ಘಟಕ ನಿರ್ವಣವಾದ ನಂತರ ಬರುವ ಉದ್ಯೋಗಿಗಳಿಗೆ ಕಾಳಿ ನದಿಯ ಪಕ್ಕವೇ ಮತ್ತಷ್ಟು ವಸತಿ ಸಮುಚ್ಚಯ ನಿರ್ವಣಕ್ಕೆ ಎನ್ಪಿಸಿಐಎಲ್ ಮುಂದಾಗಿದೆ. ಅವುಗಳಿಗೂ ಮುಳುಗುವ ಆತಂಕ.
*ವಸತಿ ಸಂಕೀರ್ಣದ ಉದ್ಯೋಗಿಗಳಿಗೆ ಕಾಳಿ ನದಿಯಿಂದಲೇ ನೀರು ಒದಗಿಸುವುದರಿಂದ ನೀರು ಪದೇ ಪದೆ ಕಲುಶಿತವಾಗುವ ಸಾಧ್ಯತೆ.
ಕೈಗಾದಲ್ಲಿ ತುರ್ತು ಪರಿಸ್ಥಿತಿ ಸಂಭವಿಸಿದರೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಜಾಗೃತವಾಗಿರಲು ಪ್ರತಿ ಎರಡು ವರ್ಷಕ್ಕೊಮ್ಮೆ ಅಣಕು ಕಾರ್ಯಾಚರಣೆ ನಡೆಸಲಾಗುತ್ತದೆ. ಆದರೆ, ಈ ವರ್ಷ ನೆರೆಯ ಮೂಲಕ ನಿಜವಾದ ತುರ್ತು ಪರಿಸ್ಥಿತಿ ಮಲ್ಲಾಪುರದಲ್ಲಿ ಉಂಟಾಗಿತ್ತು. ಇಂಥ ಸಂದರ್ಭದಲ್ಲಿ ಉದ್ಯೋಗಿಗಳಿಗೇ ಸಮರ್ಪಕ ವ್ಯವಸ್ಥೆ ಮಾಡಲು ವಿಫಲವಾದ ಕೈಗಾ ಆಡಳಿತ ಸುತ್ತಲಿನ ಜನರನ್ನು ಹೇಗೆ ರಕ್ಷಣೆ ಮಾಡಬಹುದು ಎಂಬುದು ಸಾಬೀತಾಗಿದೆ. ಇದ್ದ ವಸತಿ ಸಂಕೀರ್ಣಗಳಿಗೇ ನೆರೆಯ ಆತಂಕವಿದೆ. ಈಗ ಮತ್ತದೇ ಸ್ಥಳದಲ್ಲಿ ಹೊಸ ಸಮುಚ್ಚಯಗಳನ್ನು ನಿರ್ಮಾಣ ಮಾಡುವುದು ಮೂರ್ಖತನವಲ್ಲವೇ..? ರಾಜೇಶ ಗಾಂವಕರ್ ಮಲ್ಲಾಪುರ ನಿವಾಸಿ
………